ಒಳಮೀಸಲಾತಿ: ಕಿಡಿಗೇಡಿಗಳ ಮಾತು ಸತ್ಯಕ್ಕೆ ದೂರ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ- ಸಚಿವ ಪರಮೇಶ್ವರ್

ನಾನು ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಹೆಚ್.ಸಿ.ಮಾದದೇವಪ್ಪ, ಪ್ರಿಯಾಂಕ್ ಖರ್ಗೆ ಸೇರಿದಂತೆ ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಒಳಮೀಸಲಾತಿಗೆ ವಿರುದ್ಧವಾಗಿದ್ದಾರೆ ಮತ್ತು ಅದರ ಅನುಷ್ಠಾನಕ್ಕೆ ಸಹಕರಿಸುತ್ತಿಲ್ಲ ಎಂದು ಕೆಲ ಕಿಡಿಗೇಡಿಗಳು ವದಂತಿ ಹಬ್ಬಿಸುತ್ತಿದ್ದಾರೆ.
ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಪರಮೇಶ್ವರ್
Updated on

ಬೆಂಗಳೂರು: ಒಳಮೀಸಲಾತಿ ಜಾರಿ ವಿಚಾರ ಕುರಿತು ಕೆಲ ಕಿಡಿಗೇಡಿಗಳು ವದಂತಿ ಹಬ್ಬಿಸುತ್ತಿದ್ದು, ಈ ವದಂತಿಗಳು ಸತ್ಯಕ್ಕೆ ದೂರವಾದದ್ದು. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಪರಿಶಿಷ್ಟ ವರ್ಗದ ಎಲ್ಲರೂ ಸಮಾನವಾಗಿ ಅಭಿವೃದ್ಧಿಯಾಗಬೇಕು ಎಂಬ ದೃಷ್ಟಿಯಿಂದ ಒಳಮೀಸಲಾತಿ ಜಾರಿಗೆ ಒಪ್ಪಿದ್ದೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಬುಧವಾರ ಸ್ಪಷ್ಟಪಡಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಹೆಚ್.ಸಿ.ಮಾದದೇವಪ್ಪ, ಪ್ರಿಯಾಂಕ್ ಖರ್ಗೆ ಸೇರಿದಂತೆ ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಒಳಮೀಸಲಾತಿಗೆ ವಿರುದ್ಧವಾಗಿದ್ದಾರೆ ಮತ್ತು ಅದರ ಅನುಷ್ಠಾನಕ್ಕೆ ಸಹಕರಿಸುತ್ತಿಲ್ಲ ಎಂದು ಕೆಲ ಕಿಡಿಗೇಡಿಗಳು ವದಂತಿ ಹಬ್ಬಿಸುತ್ತಿದ್ದಾರೆ. ಅನಗತ್ಯವಾಗಿ ನಮ್ಮ ಹೆಸರು ತರುವುದು ಸರಿಯಲ್ಲ. ಪರಿಶಿಷ್ಟ ಜಾತಿಯ ಪ್ರತಿಯೊಬ್ಬರ ಸಮಾನ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಒಳಮೀಸಲಾತಿಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಒಳಮೀಸಲಾತಿ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಹದೇವಪ್ಪ ಅವರೊಂದಿಗೆ ಚರ್ಚೆ ನಡೆಸಿದ್ದು, ಅದರ ವಿರುದ್ಧ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಕೆಲ ಕಿಡಿಗೇಡಿಗಳು ಅನವಶ್ಯಕವಾಗಿ ನಮ್ಮ ಹೆಸರುಗಳನ್ನು ಎಳೆದು ತಂದು ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಸರಿಯಲ್ಲ. ಒಳಮೀಸಲಾತಿ ವಿಚಾರವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನೇರವಾಗಿ ಚರ್ಚಿಸಿದ್ದೇನೆ. ಹೆಚ್.ಸಿ.ಮಹದೇವಪ್ಪ ಸೇರಿದಂತೆ ಅನೇಕರೊಂದಿಗೆ ಮಾತನಾಡಿದ್ದೇನೆ. ಒಳಮೀಸಲಾತಿ ಜಾರಿಗೆ ವಿರುದ್ಧವಾಗಿದ್ದೇವೆ ಎಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದುದು. ಇನ್ನು ಮುಂದಾದರೂ ಈ ರೀತಿಯಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.

ಗೃಹ ಸಚಿವ ಪರಮೇಶ್ವರ್
ಒಳಮೀಸಲಾತಿ: ಶೀಘ್ರದಲ್ಲೇ ಏಕಸದಸ್ಯ ಆಯೋಗ ರಚನೆ, 3 ತಿಂಗಳಲ್ಲೇ ಜಾರಿಗೆ ಕ್ರಮ

ಒಳಮೀಸಲಾತಿ ಜಾರಿಗೆ ನಾವೆಲ್ಲ ಒಮ್ಮತದ ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ಒಂದು ವೇಳೆ ನಾವು ವಿರೋಧಿಸುವುದಾದರೆ ಬಹಿರಂಗವಾಗಿ ಹೇಳುತ್ತೇವೆ. ಯಾರಿಗೂ ಹೆದರಿಕೊಂಡು ಒಪ್ಪಿಕೊಳ್ಳುತ್ತಿಲ್ಲ. ಎಲ್ಲರೂ ಸಮಾನವಾಗಿ ಅಭಿವೃದ್ಧಿ ಹೊಂದಬೇಕು ಎಂಬ ದೃಷ್ಟಿಯಿಂದ ಒಳಮೀಸಲಾತಿ ಜಾರಿಗೆ ಒಪ್ಪಿದ್ದೇವೆ. ಪರಿಶಿಷ್ಟ ವರ್ಗದ ಎಲ್ಲ ಶಾಸಕರೊಂದಿಗೆ ಸಭೆ ಮಾಡಿದ್ದೇನೆ. ಹಿಂದೆ ಕೆಲವರು ಒಳಮೀಸಲಾತಿ ಬೇಡ ಎಂಬ ಮಾತುಗಳನ್ನು ಆಡುತ್ತಿದ್ದರು. ಮೊನ್ನೆ ನಡೆದ ಸಭೆಯಲ್ಲಿ ಒಳಮೀಸಲಾತಿ ಜಾರಿಗೆ ನಮ್ಮದು ತಕರಾರು ಇಲ್ಲ. ಆದರೆ, ಅಂಕಿ-ಅಂಶಗಳು ಸರಿಯಾಗಿಲ್ಲ ಎಂಬುದನ್ನು ತಿಳಿಸಿದ್ದರು. ಡೇಟಾ ಸರಿಯಾಗಿ ಇಲ್ಲದೆ ಇರುವಾಗ ಜಾರಿಯಾದರೆ ತೊಂದರೆಯಾಗುತ್ತದೆ. ಜಾತಿಗಣತಿಯಲ್ಲಿ ಆ ರೀತಿಯ ಅಂಕಿ-ಅಂಶ ಇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಡೇಟಾ ಇದ್ದರೆ ಉಪಯೋಗಕ್ಕೆ ಬರುತ್ತದೆ. ಸಮಿತಿಯವರು ತೆಗೆದುಕೊಳ್ಳುತ್ತಾರೆ ಎಂದರು.

ವಕ್ಫ್ ಬೋರ್ಡ್‌ನವರು ಜಿಲ್ಲಾಧಿಕಾರಿಗಳ ಮುಖಾಂತರ ನೋಟಿಸ್ ಕೊಡಿಸಿದ್ದಾರೆ. ನೋಟಿಸ್ ವಾಪಸ್ ಪಡೆಯಿರಿ, ಈ ಬಗ್ಗೆ ಪರಿಶೀಲಿಸೋಣ ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈ ವಿಷಯ ಇಲ್ಲಿಗೆ ಮುಗಿದಿದೆ. ಪರಿಶೀಲನೆ ಮಾಡುವರೆಗೂ ಯಾವುದೇ ರೈತರಿಗೂ ನೋಟಿಸ್ ನೀಡುವುದು ಬೇಡ ಎಂದು ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದ್ದಾರೆ.

ಈ ವಿಚಾರಕ್ಕೆ ಬಿಜೆಪಿಯವರು ಇಲ್ಲದಿರುವ ಬಣ್ಣಕಟ್ಟಿ ದೊಡ್ಡ ವಿಷಯ ಮಾಡಲು ಹೊರಟಿದ್ದಾರೆ. ಆಡಳಿತಾತ್ಮಕವಾಗಿ ನೋಟಿಸ್ ಹೋಗಿದೆ. ಅದನ್ನು ವಾಪಸ್ ಪಡೆಯಲಾಗುವುದು. ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಈಗಾಗಲೇ ಹೇಳಲಾಗಿದೆ. ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗ ಸೇರಿದಂತೆ ಯಾವುದೇ ಸಮುದಾಯ ಸರ್ಕಾರದಿಂದ ಒಂದಷ್ಟು ಸಹಾಯ ಬಯಸುತ್ತದೆ. ಬಿಜೆಪಿಯವರಿಗೆ ಇದನ್ನು ಸಹಿಸಲು ಆಗುವುದಿಲ್ಲ. ಆ ಸಮುದಾಯಗಳು ಹಾಗೆಯೇ ಇರಬೇಕು. ಇವರು ಮಾತ್ರ ಚೆನ್ನಾಗಿರಬೇಕು ಎಂಬ ತತ್ವದವರು ಎಂದು ಕಿಡಿಕಾರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com