ನಟ ದರ್ಶನ್ ಗೆ ಮಧ್ಯಂತರ ಜಾಮೀನು: ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಪೊಲೀಸರ ಚಿಂತನೆ
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೂನ್ 11ರಂದು ಬಂಧನವಾಗಿದ್ದ ನಟ ದರ್ಶನ್ ಗೆ ಅನಾರೋಗ್ಯದ ಕಾರಣ ನೀಡಿ ಚಿಕಿತ್ಸೆ ಪಡೆಯಲೆಂದು ಹೈಕೋರ್ಟ್ 45 ದಿನಗಳ ಮಧ್ಯಂತರ ಜಾಮೀನು ನೀಡಿದೆ. ಈ ಅವಧಿಯನ್ನು ಅವರು ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ.
ನಿನ್ನೆ ಸಂಜೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಅಪಾರ್ಟ್ ಮೆಂಟ್ ಗೆ ಬಂದು ವಿಶ್ರಾಂತಿಯಲ್ಲಿರುವ ದರ್ಶನ್ ದೀಪಾವಳಿ ಮುಗಿದ ಬಳಿಕ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ. ಸದ್ಯ ಪತ್ನಿ ಮತ್ತು ಮಗನ ಜೊತೆ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ಕೊಂಚ ಸಮಾಧಾನದಲ್ಲಿರುವ ದರ್ಶನ್ ಗೆ ಬಿಗ್ ಶಾಕ್ ನೀಡಲು ಬೆಂಗಳೂರು ಪೊಲೀಸರು ನಿರ್ಧರಿಸಿದ್ದಾರೆ. ದರ್ಶನ್ಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಕೊಟ್ಟಿರುವ ಆದೇಶದ ಪೂರ್ಣ ಪ್ರತಿ ದೀಪಾವಳಿ ರಜೆಯ ಕಾರಣ ಇನ್ನೂ ಪೊಲೀಸರ ಕೈ ಸೇರಿಲ್ಲ. ಇದಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ.
ನಿನ್ನೆ ದರ್ಶನ್ ಗೆ ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖಾ ತಂಡದ ಜೊತೆ ಮಹತ್ವದ ಸಭೆ ನಡೆಸಿ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ನಾಡಿದ್ದು ಸೋಮವಾರ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸೋಮವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಚಿಂತಿಸಲಾಗಿದೆ. ಹೈಕೋರ್ಟ್ ಆದೇಶಕ್ಕೆ ಮೇಲ್ಮನವಿ ಸಲ್ಲಿಸಿದರೆ ದರ್ಶನ್ಗೆ ಹಿನ್ನಡೆ ಆಗಬಹುದು.
ದರ್ಶನ್ ಪ್ರಭಾವಿ ವ್ಯಕ್ತಿ. ಅವರ ಅಭಿಮಾನಿ ಬಳಗ ದೊಡ್ಡದಿದೆ. ಈಗ ಅವರು ಜಾಮೀನು ಅವಧಿಯನ್ನು ಕೇವಲ ಚಿಕಿತ್ಸೆ ಬಳಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಯೂ ಇರುತ್ತದೆ. ಇದೇ ವಾದ ಮುಂದಿಟ್ಟುಕೊಂಡು ಪೊಲೀಸರು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ