ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆಗುಂಡಿಗಳನ್ನು ಇನ್ನೂ 15 ದಿನಗಳ ಒಳಗಾಗಿ ಮುಚ್ಚಿ ದುರಸ್ತಿ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಸ್ತೆ ಗುಂಡಿಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ತುರ್ತು ಗಮನ ಹರಿಸಬೇಕು ಈಗಾಗಲೇ "ರಸ್ತೆ ಗುಂಡಿ ಗಮನ" ಎನ್ನುವ ಆಪ್ ಮೂಲಕ ಸಾರ್ವಜನಿಕರು ರಸ್ತೆ ಗುಂಡಿಗಳ ಫೋಟೋ ತೆಗೆದು ಅಪ್ ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ನಗರದ ಅನೇಕ ಕಡೆ ರಸ್ತೆ ಹಾಳಾಗಿರುವುದರ ಬಗ್ಗೆ ಇಲ್ಲಿಯೂ ಸಹ ದೂರುಗಳು ಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಮಳೆಗಾಲದ ಕಾರಣಕ್ಕೂ ರಸ್ತೆ ಗುಂಡಿಗಳು ಬೀಳುತ್ತಿರಬಹುದು. ಇದರ ಬಗ್ಗೆಯೂ ಬಿಬಿಎಂಪಿ ಆಯುಕ್ತರು ಆದ್ಯ ಗಮನ ಹರಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಸೂಚನೆ ನೀಡಿದ್ದಾರೆ.
ರಸ್ತೆ ಗುಂಡಿಗಳನ್ನು ಮುಚ್ಚಲು ಗಡುವು ನೀಡಿರುವ 15 ದಿನಗಳ ನಂತರ ಇಡೀ ಬೆಂಗಳೂರು ನಗರವನ್ನು ತಾವೇ ಸ್ವತಃ ಪ್ರದಕ್ಷಿಣೆ ಹಾಕಲಿದ್ದು, ಪ್ರತಿ ರಸ್ತೆಗಳನ್ನು ಪರಿಶೀಲನೆ ಮಾಡುತ್ತೇನೆ. ಅಷ್ಟರಲ್ಲಿ ಕೆಲಸ ಮುಗಿಸಿರಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement