ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದರ ವಿರುದ್ಧ ಕಾಂಗ್ರೆಸ್ ನೀಡಿದ್ದ ದೂರಿಗೆ ರಾಷ್ಟ್ರಪತಿ ಭವನ ಪ್ರತಿಕ್ರಿಯೆ ನೀಡಿದೆ.
ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ನೀಡಿರುವ ದೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಕ್ರಿಯಿಸಿದ್ದಾರೆ. ಇದರೊಂದಿಗೆ, ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಪ್ರಕರಣದಲ್ಲಿ ರಾಷ್ಟ್ರಪತಿ ಕೂಡ ಮಧ್ಯಪ್ರವೇಶಿಸಿದಂತಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಕಾರ್ಯದರ್ಶಿ ರಾಜೇಶ್ ವರ್ಮ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ಗೆ ಪತ್ರ ಬರೆದಿದ್ದು, ರಮೇಶ್ ಬಾಬು ನೀಡಿದ ದೂರಿನ ಬಗ್ಗೆ ಸೂಕ್ತ ಗಮನಹರಿಸುವಂತೆ ಸೂಚನೆ ನೀಡಿದ್ದಾರೆ. ಈ ವಿಚಾರದ ಬಗ್ಗೆ ದೂರುದಾರರಿಗೆ ನೇರವಾಗಿ ಮಾಹಿತಿ ನೀಡಲು ಸೂಚನೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಹಿಂತೆಗೆದುಕೊಳ್ಳುವಂತೆ ನಿರ್ದೇಶಿಸಲು ತಕ್ಷಣ ಮಧ್ಯಸ್ಥಿಕೆ ವಹಿಸಬೇಕು ಎಂದು ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ರಮೇಶ್ ಬಾಬು ವಿನಂತಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿ ಶಾಲಿನಿ ರಜನೀಶ್ಗೆ ಪತ್ರ ಬರೆದಿರುವ ರಾಷ್ಟ್ರಪತಿಗಳ ಕಾರ್ಯದರ್ಶಿ, ದಯವಿಟ್ಟು ಮೇಲೆ ತಿಳಿಸಿದ ವಿಷಯದ ಕುರಿತು ಭಾರತದ ರಾಷ್ಟ್ರಪತಿಗಳಿಗೆ ಸ್ವ-ವಿವರಣೆಯ ಮನವಿಯನ್ನು ಲಗತ್ತಿಸಿ. ಅರ್ಜಿಯ ಮೇಲೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ನೇರವಾಗಿ ಅರ್ಜಿದಾರರಿಗೆ ನೀಡಬೇಕು ಎಂದು ಉಲ್ಲೇಖಿಸಲಾಗಿದೆ.
ಅಲ್ಲದೆ, ಅರ್ಜಿದಾರರು ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ ವಿಳಾಸದಾರರನ್ನು (ಯಾರಿಗೆ ಅರ್ಜಿಯನ್ನು ರವಾನಿಸಲಾಗಿದೆ) ನೇರವಾಗಿ ಸಂಪರ್ಕಿಸಲು ವಿನಂತಿಸಲಾಗಿದೆ ಎಂದೂ ಉಲ್ಲೇಖಿಸಲಾಗಿದೆ. ಅರ್ಜಿದಾರರು ತಮ್ಮ ಅರ್ಜಿ/ದೂರು ನೋಂದಾಯಿಸಲು https://helpline.rb.nic.in ಪೋರ್ಟಲ್ ಅನ್ನು ಬಳಸಬಹುದು ಎಂದೂ ಸಲಹೆ ನೀಡಿರುವುದು ತಿಳಿದುಬಂದಿದೆ.
Advertisement