ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿ ವಿವೇಚನೆಯಿಂದ ಕೂಡಿದ್ದು, ಸಕಾರಣದಿಂದಲೇ ಸಂಪುಟ ಸಭೆಯ ನಿರ್ಧಾರವನ್ನು ಪರಿಗಣಿಸಿಲ್ಲ ಎಂದು ರಾಜ್ಯಪಾಲರ ನಿರ್ಧಾರವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸಮರ್ಥಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಶನಿವಾರ ಮುಂದುವರಿಸಿತು.
ವಾದ ಮಂಡನೆ ವೇಳೆ ನ್ಯಾಯಾಲಯದಲ್ಲಿ ರಾಜ್ಯಾಪಾಲರ ನಿರ್ಧಾರವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಮರ್ಥಿಸಿಕೊಂಡರು. ರಾಜ್ಯಪಾಲರ ನಿರ್ಧಾರ ವಿವೇಚನೆಯಿಂದ ಕೂಡಿದ್ದು, ಸಕಾರಣದಿಂದಲೇ ಸಂಪುಟ ಸಭೆಯ ನಿರ್ಧಾರವನ್ನು ಪರಿಗಣಿಸಿಲ್ಲ ಎಂದರು.
ರಾಜ್ಯ ಸರ್ಕಾರವೇ ಹಿರಿಯ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು, ಈ ಬಗ್ಗೆ ಪರಿಶೀಲಿಸಲು ಮಾಜಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ನೇಮಿಸಿರುವುದು ಇದಕ್ಕೆ ಸ್ಪಷ್ಟವಾಗಿದೆ ಎಂದು ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ರಾಜ್ಯಪಾಲರು ಪರಿಶೀಲನೆ ನಡೆಸದೆ ಕಾನೂನು ಕ್ರಮ ಅನುಸರಿಸಿ ಅನುಮತಿ ನೀಡಿದ್ದಾರೆ ಎಂದು ವಾದಿಸಿದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಿರ್ಧಾರವನ್ನು ಪಕ್ಷಪಾತಿ ಮತ್ತು ತರ್ಕಬದ್ಧವಲ್ಲ ಎಂದು ರಾಜ್ಯಪಾಲರು ನಿರಾಕರಿಸಿದ್ದಾರೆ.ಸಿಎಂ ಸಿದ್ದರಾಮಯ್ಯ ಸಭೆಗೆ ಗೈರು ಹಾಜರಾಗಿದ್ದಾರೆ ಎಂದ ಮಾತ್ರಕ್ಕೆ ಸಂಪುಟ ಸಭೆಯ ನಿರ್ಣಯವನ್ನು ತಳ್ಳಿಹಾಕುವಂತಿಲ್ಲ. ಸಿಎಂ ಸಲಹೆಯ ಮೇರೆಗೆ ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಇತರ ಸಚಿವರನ್ನು ನೇಮಿಸುತ್ತಾರೆ, ಆದ್ದರಿಂದ, ಸಂಪುಟದ ನಿರ್ಧಾರವನ್ನು ಒಪ್ಪಿಕೊಳ್ಳಬೇಕಿತ್ತು ಎಂದರು.
ಈ ನಡುವೆ ತುಷಾರ್ ಮೆಹ್ತಾ ಅವರ ವಾದವನ್ನು ಬೆಂಬಲಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್, ದೂರುದಾರರಾದ ಸ್ನೇಹಮಯಿ ಕೃಷ್ಣ ಅವರನ್ನು ಪ್ರತಿನಿಧಿಸುತ್ತಾ, ರಾಜ್ಯಪಾಲರ ಮೇಲೆ ಒತ್ತಡ ಹೇರಲು ಸಂಪುಟ ನಿರ್ಣಯವನ್ನು ಅಂಗೀಕರಿಸಿದೆ ಎಂದು ವಾದಿಸಿದರು.
ಅರ್ಜಿದಾರ ಅಬ್ರಹಾಂ ಟಿಜೆ ಪರ ವಾದ ಮಂಡಿಸಿದ ರಂಗನಾಥ ರೆಡ್ಡಿ, ‘ಇಲ್ಲದ ಜಮೀನಿಗೆ ಸಿಎಂ ಪತ್ನಿಗೆ ಪರಿಹಾರ ನಿವೇಶನ ಹಂಚಿಕೆ ಮಾಡಲಾಗಿದೆ. ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ ಮತ್ತು ಮುರುಗೇಶ್ ನಿರಾಣಿ ವಿರುದ್ಧದ ಇತರ ಅರ್ಜಿಗಳು ರಾಜ್ಯಪಾಲರ ಮುಂದೆ ಇತ್ಯರ್ಥವಾಗದೇ ಉಳಿದಿವೆ ಎಂದು ಸುಳ್ಳು ಆರೋಪ ಮಾಡಲಾಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಮತ್ತೊಬ್ಬ ದೂರುದಾರ ಪ್ರದೀಪ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವೇ ಇಲ್ಲ ಎಂದು ಈವರೆಗೂ ಯಾರು ಹೇಳಿಲ್ಲ. ಕೆಲ ಸಂದರ್ಭಗಳಲ್ಲಿ ಕ್ಯಾಬಿನೆಟ್ ರಾಜ್ಯಪಾಲರಿಗೆ ಸಲಹೆ ನೀಡುವ ಅರ್ಹತೆ ಕಳೆದುಕೊಳ್ಳುತ್ತದೆ. ಸರ್ಕಾರ ತನಿಖೆಗೆಂದು ಆಯೋಗ ರಚಿಸಿದೆ. ಅದರ ಪ್ರಶ್ನಾವಳಿ ನೋಡಿ. ಸರ್ಕಾರಕ್ಕೆ ಮೇಲ್ನೋಟಕ್ಕೆ ಅಕ್ರಮಗಳ ಬಗ್ಗೆ ಕಂಡುಬಂದಿದೆ. ಹೀಗಾಗಿಯೇ ನಿವೇಶನ ಹಂಚಿಕೆಯ ಅಕ್ರಮದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ವಾದ ಆಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು
Advertisement