
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ನಟ ದರ್ಶನ್ ತೂಗುದೀಪ ಮತ್ತು ಅವರ ಆಪ್ತೆ ಪವಿತ್ರಾ ಗೌಡ ಸೇರಿದಂತೆ 15 ಮಂದಿಯನ್ನು ಬಂಧಿಸಿ ತನಿಖೆ ನಡೆಸುತ್ತಿರುವ ಪೊಲೀಸರ ತಂಡ ಇದೇ ವಾರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ( ಆರೋಪಪಟ್ಟಿ) ಸಲ್ಲಿಸುವ ಸಾಧ್ಯತೆ ಇದೆ.
ಬಿಗಿಯಾದ ಚಾರ್ಜ್ ಶೀಟ್ ರೂಪಿಸಲಾಗುತ್ತಿದೆ. ಅದು ಅಂತಿಮ ಹಂತದಲ್ಲಿದೆ. ತನಿಖಾ ತಂಡ ಕೆಲವು ವಿಧಿವಿಜ್ಞಾನ ಮತ್ತು ಇತರ ತಾಂತ್ರಿಕ ವರದಿಗಳನ್ನು ನಿರೀಕ್ಷಿಸುತ್ತಿದೆ. ಅವುಗಳನ್ನು ಪಡೆದ ನಂತರ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ತನಿಖೆಯ ಭಾಗವಾಗಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರುTNIE ಗೆ ತಿಳಿಸಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಆರು ಪ್ರಮುಖ ಆರೋಪಿಗಳ ಬಟ್ಟೆಗಳ ಮೇಲೆ ಸಂತ್ರಸ್ತನ ರಕ್ತದ ಕಲೆಗಳನ್ನು ದೃಢಪಡಿಸಿದೆ. ಘಟನೆಯ ವೇಳೆ ಆರು ಆರೋಪಿಗಳು ಧರಿಸಿದ್ದ ಬಟ್ಟೆ, ಪಾದರಕ್ಷೆ ಮತ್ತು ಚರ್ಮದ ವಸ್ತುಗಳನ್ನು ಅವರ ಬಂಧನದ ನಂತರ ಅವರ ಮನೆಗಳಿಂದ ವಶಪಡಿಸಿಕೊಳ್ಳಲಾಗಿತ್ತು ಎಂದು ಅವರು ಹೇಳಿದರು.
ಪೊಲೀಸ್ ಅಧಿಕಾರಿಗಳು 200 ಕ್ಕೂ ಹೆಚ್ಚು ನಿರ್ಣಾಯಕ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಪ್ರಕರಣವನ್ನು ಬಲಪಡಿಸುತ್ತದೆ. ಮಾರಣಾಂತಿಕ ಗಾಯಗಳ ಪರಿಣಾಮವಾಗಿ ಆಘಾತ ಮತ್ತು ರಕ್ತಸ್ರಾವದಿಂದಾಗಿ ಸಂತ್ರಸ್ತ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಿದೆ ಎಂದು ಅವರು ಹೇಳಿದರು.
ರೇಣುಕಾಸ್ವಾಮಿ ಹತ್ಯೆ ಸಂಬಂಧ ಜೂನ್ 9 ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಜೂನ್ 11 ರಂದು ದರ್ಶನ್ ಅವರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು. ಘೋರ ಅಪರಾಧಗಳ ಆರೋಪಿಗಳನ್ನು ಬಂಧಿಸಿದ 90 ದಿನಗಳಲ್ಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಬೇಕು.
Advertisement