ಬೆಂಗಳೂರು: ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಆವರಣದಲ್ಲಿರುವ ಜಯದೇವ ಆಸ್ಪತ್ರೆ ಭಾನುವಾರದಿಂದ ದಿನದ 24 ಗಂಟೆ ಸೇವೆ ಒದಗಿಸುತ್ತಿದೆ.
ಈ ಹಿಂದೆ ಇದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಮಾತ್ರ ಕಾರ್ಯನಿರ್ವಹಿಸುತಿತ್ತು. ಪ್ರಧಾನ ಜಯದೇವ ಆಸ್ಪತ್ರೆಯ ಸಿಬ್ಬಂದಿಯ ನಿಯೋಜನೆಯೊಂದಿಗೆ ಈಗ 24 ಗಂಟೆಯೂ ಸೇವೆ ಲಭ್ಯವಿರುತ್ತದೆ.
ತುರ್ತು ಸೇವೆಗಳನ್ನು ನಿರ್ವಹಿಸಲು ಹೃದ್ರೋಗ ತಜ್ಞರು ಉಪಗ್ರಹ ಕೇಂದ್ರದಲ್ಲಿ ಲಭ್ಯವಿರುತ್ತಾರೆ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಪ್ರಸ್ತುತ ಹೊರ ರೋಗಿಗಳ ಸಮಾಲೋಚನೆ, ತಪಾಸಣೆ ಮತ್ತು ಆಂಜಿಯೋಪ್ಲ್ಯಾಸ್ಟಿಯಂತಹ ಕಾರ್ಯವಿಧಾನಗಳನ್ನು ನಿರಂತರವಾಗಿ ಒದಗಿಸಲಾಗುವುದು, ಈ ಸೇವೆಗಳನ್ನು ಮೀರಿ ಹೆಚ್ಚಿನ ವೈದ್ಯಕೀಯ ಆರೈಕೆಯ ಅಗತ್ಯವಿರುವ ರೋಗಿಗಳನ್ನು ಮುಖ್ಯ ಜಯದೇವ ಆಸ್ಪತ್ರೆಗೆ ಕಳುಹಿಸಲಾಗುವುದು ಅವರು ತಿಳಿಸಿದ್ದಾರೆ.
ಪ್ರಸ್ತುತ ಈ ಉಪಗ್ರಹ ಕೇಂದ್ರದಲ್ಲಿ ದಿನಕ್ಕೆ ಸುಮಾರು 45-50 ರೋಗಿಗಳು ಬರುತ್ತಿದ್ದಾರೆ. ಪ್ರಮುಖ ಮತ್ತು ಉಪಕೇಂದ್ರದಲ್ಲಿ ಸಮಗ್ರ ಆರೋಗ್ಯ ಸೇವೆ ಒದಗಿಸುವುದು ಮತ್ತು ರೋಗಿಗಳಿಗೆ ಅನುಕೂಲತೆ ಹೆಚ್ಚಿಸುವುದು ಈ ವಿಸ್ತರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಕೆ.ಎಸ್.ರವೀಂದ್ರ ಅವರು ಇಂದು ಉಪಗ್ರಹ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಪರಿಶೀಲನೆ ನಂತರ ವಿಸ್ತೃತ ಸೇವೆಗಳ ತಡೆರಹಿತ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಸಂಸ್ಥೆಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement