
ಮೈಸೂರು/ಹುಬ್ಬಳ್ಳಿ: ನೀರಾವರಿ ಪಂಪ್‌ಸೆಟ್‌ಗಳ ಆರ್‌ಆರ್ (ಕಂದಾಯ ನೋಂದಣಿ) ಸಂಖ್ಯೆಯನ್ನು ಅವುಗಳ ಆಧಾರ್ ಸಂಖ್ಯೆಯೊಂದಿಗೆ ಜೋಡಿಸುವ ರಾಜ್ಯ ಸರ್ಕಾರದ ಯೋಜನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸೆ. 4ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಸರ್ಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಸೇರಿದಂತೆ ಹಲವಾರು ರೈತ ಸಂಘಟನೆಗಳು ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿವೆ.
ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭಾಗ್ಯರಾಜ್ ಮಾತನಾಡಿ, ರೈತರ ಕೃಷಿ ಪಂಪ್‌ಸೆಟ್‌ಗಳ ಆರ್‌ಆರ್ ನಂಬರ್‌ಗೆ ಆಧಾರ್ ನಂಬರ್ ಜೋಡಿಸಬೇಕು ಎಂದು ತಿಳಿಸಲಾಗಿದೆ. ಈ ಮೂಲಕ ವಿದ್ಯುತ್ ಖಾಸಗೀಕರಣಕ್ಕೆ ಸರ್ಕಾರಗಳು ಹುನ್ನಾರ ನಡೆಸಿವೆ. ಇದು ಕೃಷಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ ಎಂದು ಹೇಳಿದರು.
ಕೃಷಿ ಚಟುವಟಿಕೆಗಳಿಗೆ ಮೂಲವಾದ ವಿದ್ಯುತ್ ಹಾಗೂ ಇದಕ್ಕೆ ಬೇಕಾದ ಪರಿವರ್ತಕ, ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಇಂಧನ ಇಲಾಖೆಯ ವೆಚ್ಚದಲ್ಲಿ ಮಾಡಲಾಗುತ್ತಿತ್ತು. ಇದಕ್ಕೆ ರೈತರಿಂದ ವಂತಿಕೆಯಾಗಿ ರೂ.17 ಸಾವಿರದಿಂದ ರೂ.23 ಸಾವಿರದವರೆಗೆ ಪಡೆಯಲಾಗುತ್ತಿತ್ತು. ಅದನ್ನು 2023ರ ಅಕ್ಟೋಬರ್‌ನಿಂದ ಕೈಬಿಡಲಾಗಿದೆ. ಇದರಿಂದಾಗಿ, ರೈತರೇ ನೇರವಾಗಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪಡೆದುಕೊಳ್ಳಲು ರೂ.3 ಲಕ್ಷದಿಂದ ರಪೂ.4 ಲಕ್ಷ ವೆಚ್ಚ ಮಾಡಬೇಕಾದ ದುಬಾರಿಯಾದ ಪರಿಸ್ಥಿತಿಯನ್ನು ಸರ್ಕಾರ ಸೃಷ್ಟಿಸಿದೆ. ಇದು ತೀವ್ರ ಖಂಡನೀಯ ಎಂದು ತಿಳಿಸಿದರು.
ಸರ್ಕಾರದ ನಡೆ ಖಂಡಿಸಿ ಬುಧವಾರ ಮೈಸೂರಿನ ಸೆಸ್ಕಾಂ ಕಚೇರಿ ಎದುರು ಧರಣಿ ನಡೆಸಲಿದ್ದೇವೆಂದು ಇದೇ ವೇಳೆ ಹೇಳಿದರು.
ಹುಬ್ಬಳ್ಳಿಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈರಪ್ಪ ಕಂಕೋಳಿ ಮಾತನಾಡಿ, ಅಧಿಕಾರಿಗಳ ಗಮನ ಸೆಳೆಯಲು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸುತ್ತೇವೆಂದು ಹೇಳಿದರು.
Advertisement