ಬೆಂಗಳೂರು: ಕೈಗೆಟಕುವ ದರದಲ್ಲಿ ಮತ್ತು ಸುಸ್ಥಿರ ಪ್ರಯಾಣಕ್ಕಾಗಿ ಜಾಗತಿಕ ಬ್ರ್ಯಾಂಡ್ ಆಗಿರುವ ಜರ್ಮನಿಯ ಫ್ಲಿಕ್ಸ್‌ಬಸ್, ದಕ್ಷಿಣ ಭಾರತಕ್ಕೂ ತನ್ನ ಸೇವೆಯನ್ನು ವಿಸ್ತರಿಸಿದ್ದು, ರಾಜಧಾನಿ ಬೆಂಗಳೂರಿನಿಂದ 33 ನಗರಗಳಿಗೆ Flixbus ಸಂಚರಿಸಲಿವೆ.
ಬೆಂಗಳೂರಿನಿಂದ ಚೆನ್ನೈ ಮತ್ತು ಹೈದರಾಬಾದ್ ಮಾರ್ಗಗಳಲ್ಲಿ ಸಂಚರಿಸುವ ಫ್ಲಿಕ್ಸ್ ಬಸ್ ಗಳಿಗೆ ಭಾರಿ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಮಂಗಳವಾರ ಹಸಿರು ನಿಶಾನೆ ತೋರಿದರು.
ಈ ವೇಳೆ ಜರ್ಮನಿಯ ಡೆಪ್ಯುಟಿ ಕಾನ್ಸುಲ್ ಜನರಲ್ ಅನೆಟ್ ಬೆಸಿಯರ್, ಫ್ಲಿಕ್ಸ್ ಬಸ್ ಸಹ - ಸ್ಥಾಪಕ ಡೇನಿಯಲ್ ಕ್ರೌಸ್, ಫ್ಲಿಕ್ಸ್ ಬಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೂರ್ಯ ಖುರಾನ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂಬಿ ಪಾಟೀಲ್, ಭಾರತವೂ ಸೇರಿದಂತೆ 43 ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಫ್ಲಿಕ್ಸ್ ಬಸ್ ಸೇವೆಯು ದಕ್ಷಿಣ ಭಾರತದಲ್ಲಿ ಜನರ ಪ್ರಯಾಣದ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಫ್ಲಿಕ್ಸ್‌ಬಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೂರ್ಯ ಖುರಾನಾ ಮಾತನಾಡಿ, "ಉತ್ತರ ಭಾರತದ ಕಾರ್ಯಾಚರಣೆಗಳ ಯಶಸ್ಸಿನ ನಂತರ, ದಕ್ಷಿಣ ಭಾರತಕ್ಕೆ ವಿಸ್ತರಿಸುವುದು ನಮ್ಮ ಉದ್ದೇಶವಾಗಿತ್ತು. ಈ ವಿಸ್ತರಣೆಯು ಹೊಸ ಮಾರ್ಗಗಳ ಬಗ್ಗೆ ಮಾತ್ರವಲ್ಲ, ಇದು ಫ್ಲಿಕ್ಸ್‌ಬಸ್‌ನೊಂದಿಗೆ ಸ್ಥಳೀಯ ನಿರ್ವಾಹಕರನ್ನು ಸಬಲೀಕರಣಗೊಳಿಸಲಿದೆ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್, ಪ್ರಯಾಣಿಕರಿಗೆ ತಡೆರಹಿತ ಪ್ರಯಾಣವನ್ನು ಖಾತ್ರಿಪಡಿಸುತ್ತದೆ ಎಂದರು.
ಈ ವಿಸ್ತರಣೆಯು ದಕ್ಷಿಣ ಭಾರತದಾದ್ಯಂತ 33 ನಗರಗಳನ್ನು ಸಂಪರ್ಕಿಸುತ್ತದೆ. ಇದರೊಂದಿಗೆ ಫ್ಲಿಕ್ಸ್‌ಬಸ್ ಭಾರತದಲ್ಲಿ ಒಟ್ಟಾರೆಯಾಗಿ 101 ನಗರಗಳನ್ನು ಮತ್ತು ರಾಷ್ಟ್ರವ್ಯಾಪಿ 215 ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ಲಕ್ಷಾಂತರ ಪ್ರಯಾಣಿಕರಿಗೆ ಪರಿಣಾಮಕಾರಿ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ.
ಫ್ಲಿಕ್ಸ್‌ಬಸ್ ಉದ್ಘಾಟನಾ ಕೊಡುಗೆಯಾಗಿ ಪ್ರಯಾಣಿಕರಿಗೆ ವಿಶೇಷ ಆಫರ್ ನೀಡಿದ್ದು, 99 ರೂ. ದರದಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಈ ಆಫರ್ ಬೆಂಗಳೂರಿನ ಸುತ್ತಮುತ್ತ ಪ್ರಾರಂಭಿಸಲಾದ ಹೊಸ ಮಾರ್ಗಗಳಿಗೆ ಲಭ್ಯವಿದೆ.
ಈ ಕೊಡುಗೆಯು ಸೆಪ್ಟೆಂಬರ್ 10 ರಿಂದ ಅಕ್ಟೋಬರ್ 6 ರ ವರೆಗಿನ ಪ್ರಯಾಣಕ್ಕೆ ಲಭ್ಯವಿದ್ದು, ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 15 ರವರೆಗೆ ಬುಕಿಂಗ್ ಮಾಡಬಹುದು.
Advertisement