ಉಡುಪಿ: ರಾಮಮಂದಿರ, ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಲ್ಲದೇ ಇಸ್ಲಾಂಗೆ ಮತಾಂತರವಾಗುವಂತೆ ಗೆಳತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ವೈದ್ಯಕೀಯ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ಬಂಧಿನನ್ನು 27 ವರ್ಷದ ಮಹಮ್ಮದ್ ಡ್ಯಾನಿಷ್ ಖಾನ್ ಎಂದು ಗುರುತಿಸಲಾಗಿದ್ದು ಆತನ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ಡ್ಯಾನಿಷ್ ಸಹಪಾಠಿ ನೀಡಿದ ದೂರಿನ ಮೇರೆಗೆ ಡ್ಯಾನಿಷ್ ಖಾನ್ ನನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಡ್ಯಾನಿಶ್ ಖಾನ್ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದನು. ಅಲ್ಲಿ ಅವನು ತನ್ನ ಸಹಪಾಠಿಯೊಂದಿಗೆ ಸ್ನೇಹ ಬೆಳೆಸಿದ್ದಾರೆ. ನಂತರ ಇಬ್ಬರೂ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದು ಪ್ರೀತಿಯಲ್ಲಿ ಬೀಳುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿ ನೀಡಿದ ದೂರಿನ ಪ್ರಕಾರ, ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ವೇಳೆ ಡ್ಯಾನಿಶ್ ಖಾನ್ ರಾಮಮಂದಿರ ಮತ್ತು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದಾನೆ. ಅಷ್ಟೇ ಅಲ್ಲದೆ ಮಾರ್ಚ್ 11ರಂದು ಯುವತಿ ಇದ್ದ ರೂಮಿಗೆ ನುಗ್ಗಿ ಮದುವೆ ಆಗುವಂತೆ ಒತ್ತಾಯಿಸಿದ್ದಲ್ಲದೆ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದನು ಎಂದು ಉಲ್ಲೇಖಿಸಲಾಗಿದೆ.
ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಕೋಪದಲ್ಲಿ ಡ್ಯಾನಿಷ್ ಖಾನ್ ಗೆಳತಿಯ ಕಪಾಳಕ್ಕೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ತನ್ನ ದೇಹವನ್ನು ಮುಟ್ಟುವ ಮೂಲಕ ಅನುಚಿತವಾಗಿ ವರ್ತಿಸಿದ್ದಾನೆ. ಪದೇ ಪದೇ ವಿರೋಧಿಸಿದರೂ ಆರೋಪಿ ತನ್ನ ಖಾಸಗಿ ಅಂಗಗಳನ್ನು ಮುಟ್ಟಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಆ ಘಟನೆಯ ನಂತರ ಡ್ಯಾನಿಶ್ ಖಾನ್ ತನಗೆ ಫೋನ್ ಮೂಲಕ ಕಿರುಕುಳ ನೀಡಲಾರಂಭಿಸಿದ್ದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೊನೆಗೆ ಒತ್ತಡ ತಡೆದುಕೊಳ್ಳಲಾಗದೆ ಆಗಸ್ಟ್ 31ರಂದು ಪೊಲೀಸರಿಗೆ ದೂರು ನೀಡಿದ್ದಾಳೆ.
ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ. ಡ್ಯಾನಿಷ್ ಖಾನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement