ಎತ್ತಿನಹೊಳೆ ಯೋಜನೆ 2027ಕ್ಕೆ ಪೂರ್ಣ: ರಾಜ್ಯ ಸರ್ಕಾರ

1ನೇ ಹಂತದ ಯೋಜನೆಯಿಂದ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲು ಸಾಧ್ಯವಾಗಲಿದ್ದು, 2ನೇ ಹಂತದ ಯೋಜನೆಯಡಿ ಉಳಿದ 140 ಕಿ.ಮೀ ಕಾಮಗಾರಿ ಪೂರ್ಣಗೊಳಿಸಿ ತುಮಕೂರಿಗೆ ನೀರು ಹರಿಸಲಾಗುವುದು.
ಎತ್ತಿನಹೊಳೆ ಯೋಜನೆ
ಎತ್ತಿನಹೊಳೆ ಯೋಜನೆ
Updated on

ಬೆಂಗಳೂರು: 2027ರ ವೇಳೆಗೆ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ಹೇಳಿದರು.

ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 1ನೇ ಹಂತದ ಯೋಜನೆಯಿಂದ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲು ಸಾಧ್ಯವಾಗಲಿದ್ದು, 2ನೇ ಹಂತದ ಯೋಜನೆಯಡಿ ಉಳಿದ 140 ಕಿ.ಮೀ ಕಾಮಗಾರಿ ಪೂರ್ಣಗೊಳಿಸಿ ತುಮಕೂರಿಗೆ ನೀರು ಹರಿಸಲಾಗುವುದು. ಹೆಬ್ಬನಹಳ್ಳಿ ವಿತರಣಾ ತೊಟ್ಟಿ 4 ರಿಂದ 32 ಕಿ. ಮೀ. ದೂರದಲ್ಲಿ ಎಸ್ಕೇಪ್ ಚಾನೆಲ್ ಮಾಡಿದ್ದು, ಅಲ್ಲಿಂದ ನಾಲೆ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುವುದು. ನವೆಂಬರ್ 1 ರ ವೇಳೆಗೆ ಸುಮಾರು 5 ಟಿಎಂಸಿ ನೀರನ್ನು ಮೇಲಕ್ಕೆ ಎತ್ತಲಾಗುವುದು. ಅರಣ್ಯ ಇಲಾಖೆಯಿಂದ 502 ಎಕರೆ ಜಮೀನು ಪಡೆಯಬೇಕಾಗಿದ್ದು, ಇದಕ್ಕೆ ಬದಲಿಯಾಗಿ ನಾವು 452 ಎಕರೆ ಜಮೀನು ನೀಡಿದ್ದೇವೆ. ಮುಂದಿನ 4 ತಿಂಗಳಲ್ಲಿ ಈ ಕೆಲಸ ಮುಗಿಯಲಿದ್ದು, ಆನಂತರ ತುಮಕೂರು ಭಾಗದ ಕೆಲಸವನ್ನು ತ್ವರಿತವಾಗಿ ಮುಗಿಸಲಾಗುವುದು ಎಂದು ಹೇಳಿದರು.

ಯೋಜನೆಯ ಒಟ್ಟು 24 ಟಿಎಂಸಿ ನೀರನ್ನು ಕುಡಿಯುವ ನೀರು ಹಾಗೂ ಕೆರೆಗಳನ್ನು ತುಂಬಿಸಲು ಬಳಸಿಕೊಳ್ಳಲಾಗುವುದು. ರೈತರು ತಮ್ಮ ಜಮೀನುಗಳನ್ನು ನೀಡಿ ಸಹಕಾರ ನೀಡಿದ್ದಾರೆ. ನೀರನ್ನು ಎತ್ತಲು ಸಾಧ್ಯವಿಲ್ಲ ಎಂದು ಒಂದಷ್ಟು ಜನ ಅಪಸ್ವರ ಎತ್ತಿದ್ದರು. ನಾನು ಇಲಾಖೆಯ ಜವಾಬ್ದಾರಿವಹಿಸಿಕೊಂಡ ಮೇಲೆ ಕಾರ್ಯಪ್ರವೃತ್ತವಾಗಿ ಈ ಯೋಜನೆ ಪೂರ್ಣಗೊಳಿಸಲು ಮುಂದಾದೆ. ಯೋಜನೆಯ ವಿರುದ್ಧವಾಗಿ ಒಂದಷ್ಟು ಜನ ಬ್ಲಾಕ್ ಮೇಲ್ ಮಾಡುತ್ತಿದ್ದರು ಅದನ್ನು ನಿವಾರಿಸಲಾಯಿತು. ಹಿಂದಿನ ಸರ್ಕಾರವು ಸಾಕಷ್ಟು ಪ್ರಯತ್ನ ಪಟ್ಟಿತ್ತು, ಆದರೆ ಸಹಕಾರ ಸಿಕ್ಕಿರಲಿಲ್ಲ ಎಂದು ತಿಳಿಸಿದರು.

ಸೆಪ್ಟೆಂಬರ್.6ರಂದು 12.05 ನಿಮಿಷಕ್ಕೆ ಯೋಜನೆಯ ಪ್ರಮುಖ ಜಾಗದಲ್ಲಿ ನೀರನ್ನು ಮೇಲಕ್ಕೆ ಎತ್ತುವ ಪಂಪ್ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುತ್ತಾರೆ. ಒಂದಷ್ಟು ಪ್ರಮುಖ ಭಾಗಗಳಲ್ಲಿ 10.30 ಒಳಗೆ ಸಚಿವರುಗಳು ಚಾಲನೆ ನೀಡುತ್ತಾರೆ. ಗೌರಿ ಹಬ್ಬದ ಶುಭದಿನದಂದು ಗಂಗಾ ಮಾತೆಗೆ ಪೂಜೆ ಸಲ್ಲಿಸಲಾಗುವುದು ಎಂದರು.

ಎತ್ತಿನಹೊಳೆ ಯೋಜನೆ
ಸೆ. 6 ಗೌರಿ ಹಬ್ಬದಂದು ಎತ್ತಿನಹೊಳೆ ಯೋಜನೆ ಏತ ಕಾಮಗಾರಿ ಉದ್ಘಾಟನೆ

ಪ್ರಾಯೋಗಿಕ ಪರೀಕ್ಷೆ ನಡೆಸುವುದಕ್ಕೆ ಮುಂಚೆ ಒಂದಷ್ಟು ಕಡೆ ನೀರು ಸೋರಿಕೆಯಾಗಿತ್ತು. ಇದನ್ನೂ ಸಹ ಸರಿಪಡಿಸಲಾಗಿದೆ. ಸಣ್ಣ, ನದಿ, ತೊರೆಗಳಿಂದ ಎತ್ತುವ ನೀರನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧ್ಯಯನ ಮಾಡಲು ಪ್ರತ್ಯೇಕ ತಂಡ ರಚಿಸಲಾಗಿದೆ. ಅವರು ಅಧ್ಯಯನ ನಡೆಸಿ ವರದಿ ನೀಡುತ್ತಾರೆ ಎಂದು ಹೇಳಿದರು.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರದ ಸ್ವಲ್ಪ ಭಾಗ, ತುಮಕೂರು, ಹಾಸನ, ಹಾಗೂ ಚಿಕ್ಕಮಗಳೂರು ಸೇರಿದಂತೆ ಒಟ್ಟು 7 ಜಿಲ್ಲೆಗಳ ಜನರಿಗೆ ಅನುಕೂಲವಾಗುವುದು. ಎಲ್ಲಾ ಪಕ್ಷಗಳ ಮುಖಂಡರು ಹಾಗೂ ರೈತ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಆಹ್ವಾನ ಪತ್ರಿಕೆ ಇಲ್ಲ ಎಂದು ಬೇಸರಿಸಬೇಡಿ ಮಾಧ್ಯಮಗಳ ಮೂಲಕ ಹಾಗೂ ಪತ್ರಿಕಾ ಜಾಹೀರಾತಿನ ಮೂಲಕ ವೈಯಕ್ತಿಕವಾಗಿ ಆಹ್ವಾನ ಮಾಡುತ್ತೇನೆ. ತೊರೆ ಕಾಡನಹಳ್ಳಿಯಿಂದ ಬೆಂಗಳೂರಿಗೆ ನೀರು ಸರಬರಾಜು ಆಗುತ್ತಿರುವುದಕ್ಕಿಂತ ಬೃಹತ್ ಪಂಪ್ ಗಳನ್ನು ಎತ್ತಿನಹೊಳೆ ಯೋಜನೆಯಲ್ಲಿ ಅಳವಡಿಸಲಾಗಿದೆ ಎಂದರು.

ಕಬಿನಿ ಅಣೆಕಟ್ಟು ಕೂಡ ಅಪಾಯದಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿದ್ದವು. ಆ ನಂತರ ಈ ಸಮಿತಿ ಅಲ್ಲಿಗೂ ತೆರಳಿ ನೀರಿನ ಆಳಕ್ಕೆ ಇಳಿದು ಪರಿಶೀಲನೆ ನಡೆಸಿದೆ. ನನ್ನ ಸೂಚನೆಗಳನ್ನು ಕಾಯಬೇಡಿ, ಯಾವುದಾದರೂ ತೊಂದರೆ ಇದ್ದರೆ ಕೂಡಲೇ ಕಾರ್ಯಪ್ರವೃತ್ತರಾಗಿ ಎಂದು ಸೂಚಿಸಿದ್ದೇನೆ. ಈ ಸಮಿತಿ ವರದಿ ನೀಡುವ ತನಕ ಇದರ ಬಗ್ಗೆ ನಾನು ಮಾಹಿತಿ ನೀಡಲು ಆಗುವುದಿಲ್ಲ ಎಂದು ಹೇಳಿದರು.

ತುಂಗಭದ್ರಾ ಅಣೆಕಟ್ಟು ಮತ್ತೆ ತುಂಬುತ್ತಿರುವುದು ಸಂತಸದ ವಿಚಾರ. 105.79 ಸಾಮರ್ಥ್ಯದ ಅಣೆಕಟ್ಟಿನಲ್ಲಿ ಪ್ರಸ್ತುತ ಸುಮಾರು 98 ಟಿಎಂಸಿ ನೀರು ಸಂಗ್ರಹಗೊಂಡಿದೆ. ನಿವೃತ್ತ ಎಂಜಿನಿಯರ್ ಕನ್ನಯ್ಯ ನಾಯ್ಡು ಅವರ ಮಾರ್ಗದರ್ಶನದಲ್ಲಿ ಸುಮಾರು 108 ಜನ ಹಗಲು ರಾತ್ರಿ ಅಧಿಕಾರಿಕಾರಿಗಳು, ಕಾರ್ಮಿಕ ವರ್ಗ ಕೆಲಸ ಮಾಡಿದ್ದಾರೆ. ಇವರಿಗೆ ಗೌರವ ಸಲ್ಲಿಸಿ ಪ್ರಶಸ್ತಿ ಪತ್ರ ನೀಡಬೇಕು ಎಂದು ಸರ್ಕಾರ ನಿರ್ಧರಿಸಿದೆ.

ತುಂಗಭದ್ರಾ ಕ್ರಸ್ಟ್ ಗೇಟ್ ಅವಘಡ ಸಂಭವಿಸಿದಾಗ ಸಾಕಷ್ಟು ಜನ ನೀರನ್ನು ಹೊರಗೆ ಬಿಡಬೇಡಿ. ನಾನು ತಂತ್ರಜ್ಞರ ಬಳಿ ಚರ್ಚೆ ನಡೆಸಿ ಅಣೆಕಟ್ಟಿನ ಉಳಿವಿಗಾಗಿ ಕಠಿಣ ನಿರ್ಧಾರ ತೆಗೆದುಕೊಂಡೆ. ರೈತರು ಬೆಳೆ ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರೂ ನೀರನ್ನು ಹೊರಗೆ ಬಿಡಬೇಕಾಯಿತು. ಅವಘಡ ನಡೆದ 3 ಗಂಟೆಗಳಲ್ಲಿ ಗೇಟಿನ ವಿನ್ಯಾಸವನ್ನು ಮೂರು ಎಂಜಿನಿಯರಿಂಗ್ ಸಂಸ್ಥೆಗಳಿಗೆ ನೀಡಿ ತಯಾರಿಸಲು ಸೂಚನೆ ನೀಡಿದೆವು. ಈ ಕಾರ್ಯವನ್ನು ಇಡೀ ದೇಶವೇ ಗಮನಿಸುತ್ತಿತ್ತು. ಕೇವಲ 4 ದಿನಗಳಲ್ಲಿ ನೂತನ ಗೇಟ್ ಅನ್ನು ಅಳವಡಿಸಲಾಯಿತು. ಶೇ.50 ರಷ್ಟು ನೀರು ಪೋಲಾಯಿತು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com