ಬೆಂಗಳೂರು: ಮರದ ಕೊಂಬೆ ಬಿದ್ದು ಮತ್ತೋರ್ವ ಆಟೋ ಚಾಲಕನ ದುರ್ಮರಣ; BBMP ಹೇಳಿದ್ದೇನು!

ಬೆಳಿಗ್ಗೆ 8.20ಕ್ಕೆ ಖಲೀಲ್‌ ಅವರು ಜಯನಗರದ 4ನೇ ಟಿ ಬ್ಲಾಕ್‌ನಲ್ಲಿ ಆಟೊ ಚಲಾಯಿಸಿಕೊಂಡು ತೆರಳುತ್ತಿದ್ದರು. ಆಟೊ ಮೇಲೆ ಮರದ ಕೊಂಬೆ ಬಿದ್ದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಖಲೀಲ್‌ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಜಯನಗರದ ನಾಲ್ಕನೇ ಟಿ ಬ್ಲಾಕ್‌ನಲ್ಲಿ ಚಲಿಸುತ್ತಿದ್ದ ಆಟೊ ಮೇಲೆ ಬುಧವಾರ ಬೆಳಿಗ್ಗೆ ಮರದ ಕೊಂಬೆ ಬಿದ್ದು ಚಾಲಕ ಮೃತಪಟ್ಟಿದ್ದಾರೆ. ಪಾದರಾಯನಪುರದ ನಿವಾಸಿ ಆಟೊ ಚಾಲಕ ಖಲೀಲ್‌ (55) ಮೃತ ವ್ಯಕ್ತಿ. ಜಯನಗರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬೆಳಿಗ್ಗೆ 8.20ಕ್ಕೆ ಖಲೀಲ್‌ ಅವರು ಜಯನಗರದ 4ನೇ ಟಿ ಬ್ಲಾಕ್‌ನಲ್ಲಿ ಆಟೊ ಚಲಾಯಿಸಿಕೊಂಡು ತೆರಳುತ್ತಿದ್ದರು. ಆಟೊ ಮೇಲೆ ಮರದ ಕೊಂಬೆ ಬಿದ್ದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಖಲೀಲ್‌ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೇ ಮದ್ಯಾಹ್ನ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದರು. ಬಿದ್ದ ಮರದ ಕೊಂಬೆಯನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ. ಹಾನಿಗೊಳಗಾದ ಆಟೋವನ್ನು ವ್ಯಾಪ್ತಿಯ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ. ಪಶ್ಚಿಮ ವಲಯದ ಪಾದರಾಯನಪುರದಲ್ಲಿ ವಾಸವಾಗಿರುವ ಸಂತ್ರಸ್ತನ ಕುಟುಂಬಕ್ಕೆ ಘಟನೆ ಕುರಿತು ಮಾಹಿತಿ ನೀಡಲಾಗಿದೆ.

ಖಲೀಲ್ ಗೆ ಗಂಭೀರ ಗಾಯಗಳಾಗಿದ್ದ ಪರಿಣಾಮ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ನಾವು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದೇವೆ ಮತ್ತು ಬಿಬಿಎಂಪಿ ನಿಯಮಗಳ ಪ್ರಕಾರ, ಸಂತ್ರಸ್ತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗುವುದು. ಪಾಲಿಕೆ ಅರಣ್ಯ ಇಲಾಖೆಯು ಚಿಕಿತ್ಸಾ ವೆಚ್ಚ ಹಾಗೂ ಅಂತಿಮ ಸಂಸ್ಕಾರ ವೆಚ್ಚವನ್ನು ಭರಿಸಲಿದೆ ಎಂದು ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಬಿ.ಎಲ್.ಜಿ.ಸ್ವಾಮಿ ತಿಳಿಸಿದ್ದಾರೆ.

ಆಗಸ್ಟ್ 12 ರಂದು ಮರ ಬಿದ್ದು ನಾಲ್ವರು ಶಾಲಾ ಮಕ್ಕಳು ಸೇರಿದಂತೆ ಆರು ಮಂದಿ ಗಾಯಗೊಂಡ ಘಟನೆಯ ನಂತರ ಪಾಲಿಕೆಯು ಅಪಾಯಕಾರಿ ಮತ್ತು ದುರ್ಬಲ ಮರಗಳನ್ನು ಗುರುತಿಸಲು ಪ್ರಾರಂಭಿಸಿ ಅವುಗಳನ್ನು ಕತ್ತರಿಸಲು ತಂಡಗಳನ್ನು ನಿಯೋಜಿಸಿದೆ ಎಂದು ಅವರು ಹೇಳಿದ್ದಾರೆ. ಗುಲ್‌ಮೊಹರ್‌ನಂತಹ ಮರಗಳು ಗಾಳಿ- ಮಳೆಯ ಸಮಯದಲ್ಲಿ ಹೆಚ್ಚು ದುರ್ಬಲವಾಗಿರುತ್ತವೆ. ರಸ್ತೆಬದಿಯ ಮತ್ತು ಫುಟ್‌ಪಾತ್ ಮರಗಳ ಕೊಂಬೆಗಳನ್ನು ಗುರುತಿಸಿ ತೆರವುಗೊಳಿಸಲಾಗುತ್ತಿದೆ, ಇತ್ತೀಚಿನ ಘಟನೆ ದುರದೃಷ್ಟಕರ ಎಂದು ಪಾಲಿಕೆಯ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಧರೆಗುರುಳಿದ ಬೃಹತ್ ಗಾತ್ರದ ಮರ: 3 ಕಾರುಗಳು ಜಖಂ, ಇಬ್ಬರಿಗೆ ಗಾಯ

ಆಗಸ್ಟ್ 16 ರಂದು ವಿಜಯನಗರದಲ್ಲಿ ಸಾಧಾರಣ ಮಳೆಯ ನಂತರ ಇದೇ ರೀತಿಯ ಘಟನೆಯಲ್ಲಿ ಆಟೋರಿಕ್ಷಾ ಚಾಲಕ ಶಿವರುದ್ರಯ್ಯ ಸಾವನ್ನಪ್ಪಿದ್ದರು. ಆಗಸ್ಟ್ 20 ರಂದು ಸದಾಶಿವನಗರ ಟ್ರಾಫಿಕ್ ಪೊಲೀಸ್ ವ್ಯಾಪ್ತಿಯಲ್ಲಿ ಎನ್‌ಜಿಒ ಸಿಬ್ಬಂದಿಯೊಬ್ಬರು ಅವರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾ ಮೇಲೆ ಮರ ಬಿದ್ದು ತಲೆಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾನುವಾರ (ಸೆ.1) ಅನಿಲ್ ಕುಂಬ್ಳೆ ವೃತ್ತದ ಬಳಿ ಕಾರಿನಲ್ಲಿ ತೆರಳುತ್ತಿದ್ದಾಗ 15 ವರ್ಷದ ಮರವೊಂದು ಬಿದ್ದು ಒಂದೇ ಕುಟುಂಬದ ಮೂವರ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಈ ಹಿನ್ನಲೆಯ ಘಟನೆಗಳು ಪಾಲಿಕೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಮರ ಬೀಳುವ ಸಮಸ್ಯೆಗಳನ್ನು ಪರಿಹರಿಸಲು ಪ್ರತಿ ಬಿಬಿಎಂಪಿ ವಲಯದಲ್ಲಿ 30 ಸದಸ್ಯರ ತಂಡವನ್ನು ನಿಯೋಜಿಸಲಿದೆ. ಸತ್ತ ಮರಗಳು ಮತ್ತು ಅಪಾಯವನ್ನುಂಟುಮಾಡುವ ದುರ್ಬಲವಾದ ಕೊಂಬೆಗಳನ್ನು ಗುರುತಿಸಿ ಕತ್ತರಿಸುತ್ತಿದೆ. ಮಳೆ ಮತ್ತು ಗಾಳಿಯಲ್ಲಿ ಗುಲ್ಮೊಹರ್ ಮರಗಳು ಹೆಚ್ಚು ದುರ್ಬಲಗೊಳ್ಳುತ್ತವೆ, ಮಳೆಯ ಸಮಯದಲ್ಲಿ ಅಂತಹ ಮರಗಳ ಬಳಿ ನಿಲ್ಲದಂತೆ ಬಿಬಿಎಂಪಿ ಜನರಿಗೆ ಮನವಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com