ಬೆಂಗಳೂರು: ಮಹಾದಾಯಿ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿ ಅನುಮತಿ ನಿರಾಕರಣೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬಳಿ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ರಾಜ್ಯ ಸರ್ಕಾರ ಗುರುವಾರ ನಿರ್ಧರಿಸಿದೆ.
ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಮಹದಾಯಿ ಯೋಜನಾ ಪ್ರದೇಶದ ಸತ್ಯಶೋಧನೆ ಅಧ್ಯಯನಕ್ಕಾಗಿ ತಜ್ಞರ ತಂಡವನ್ನು ಕಳುಹಿಸಿತ್ತು. ಈ ಸಮಿತಿ ಹಲವು ಶಿಫಾರಸುಗಳನ್ನು ಮಾಡಿದೆ. ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಪ್ರತಿಕ್ರಿಯೆ ಕೇಳಲಾಗಿದ್ದು, ವನ್ಯಜೀವಿ ಮಂಡಳಿ ಅಧೀನದಲ್ಲಿರುವುದರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ನಡುವೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯ ಸ್ಥಾಯಿ ಸಮಿತಿಯ 79ನೇ ಸಭೆಯಲ್ಲಿ ಇದು ಕರ್ನಾಟಕ ಸರ್ಕಾರದ ಯೋಜನೆ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೇಳಿದ್ದು, ಮುಂದಿನ ಸಭೆಯಲ್ಲಿ ವಿಚಾರ ಚರ್ಚಿಸುವುದಾಗಿ ತಿಳಿಸಿದೆ. ಆದಾಗ್ಯೂ ಗೋವಾದ ವಿದ್ಯುತ್ ಯೋಜನೆಗೆ ರಾಜ್ಯದ 435 ಎಕರೆ ಅರಣ್ಯ ಭೂಮಿ ಬಳಕೆಯಾಗುವ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ಕೊಟ್ಟಿದೆ. ಆದರೆ, ನಮ್ಮ ರಾಜ್ಯದ ಮಹದಾಯಿ ಯೋಜನೆಗೆ ಅನುಮತಿ ಕೊಟ್ಟಿಲ್ಲ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿದರು.
ಗೋವಾ-ತಮ್ನೂರ್ 400 ಕೆವಿ ವಿದ್ಯುತ್ ಪೂರೈಕೆ ಯೋಜನೆಗೆ ಅನುಮತಿ ಕೊಟ್ಟಿದೆ. ಆದರೆ, ಮಹಾದಾಯಿ ಯೋಜನೆಗೆ ಅನುಮತಿ ನೀಡಿಲ್ಲ. ಈ ಬಗ್ಗೆ ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚೆ ಮಾಡಿ, ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ಸದ್ಯದಲ್ಲೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸಲಾಗುವುದು. ನಂತರ, ಪ್ರಧಾನಮಂತ್ರಿಗಳ ಬಳಿ ಸರ್ವಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗಿ ಒತ್ತಾಯ ಮಾಡುವುದು ಹಾಗೂ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದಲ್ಲದೆ, ಸಂಪುಟ ಸಭೆಯಲ್ಲಿ ಬೆಂಗಳೂರು ಬಿಸಿನೆಸ್ ಕಾರಿಡಾರ್' (ಬಿಬಿಸಿ) ಯೋಜನೆಯನ್ನು ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 100 ಮೀಟರ್ ಅಗಲದ, 73 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಲು ಹಣ ಮೀಸಲಿಡಲು ನಿರ್ಧಾರ ಕೈಗೊಳ್ಳಲಾಗಿದೆ.
ಯೋಜನೆಗೆ 27,000 ಕೋಟಿ ರೂ. ಹಣಕಾಸು ಒದಗಿಸಲು, ವಸತಿ ಮತ್ತು ನಗರಾಭಿವೃದ್ಧಿ ನಿಗಮ ಲಿಮಿಟೆಡ್, REC ಲಿಮಿಟೆಡ್ ಮತ್ತು ಕೈಗಾರಿಕೋದ್ಯಮಿಗಳಂತಹ ಸರ್ಕಾರಿ ಸಾಲ ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಶೇ.70ರಷ್ಟು ಹಣ ಸಂಗ್ರಹಿಸಲು ನಿರ್ಧರಿಸಲಾಗಿದೆ.
ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯನ್ನು ಮುಂದುವರಿಸಲು ಸಚಿವ ಸಂಪುಟ ನಿರ್ಧರಿಸಿದೆ. ಫಲಾನುಭವಿಗಳು ಎಣ್ಣೆ, ಸಕ್ಕರೆ ಮತ್ತು ಇತರ ವಸ್ತುಗಳನ್ನು ಖರೀದಿಸಲು ಸುಲಭವಾಗಿರುವುದರಿಂದ ಪ್ರತಿಯೊಬ್ಬ ಫಲಾನುಭವಿಗೆ 170 ರೂ.ಗಳ ವರ್ಗಾವಣೆಯನ್ನು ಮುಂದುವರಿಸಲಾಗುವುದು ಎಂದು ಪಾಟೀಲ್ ತಿಳಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಇತರೆ ನಿರ್ಧಾರಗಳು ಇಂತಿವೆ...
ರಾಜ್ಯದ ಒಳಾಡಳಿತ ಇಲಾಖೆ 59 ಜನ ಕೈದಿಗಳ ಸನ್ನಡತೆ ಆಧಾರದ ಮೇಲೆ ಅವಧಿ ಮುನ್ನ ಬಿಡುಗಡೆಗೆ ನಿರ್ಧಾರ.
ವಸತಿ ಇಲಾಖೆಯಲ್ಲಿ ಬೆಟ್ಟಗೇರಿಯಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ.
ಕಾರ್ಮಿಕ ಇಲಾಖೆಯ ಬಳಕೆದಾರರಿಂದ ಸಂಗ್ರಹಿಸುವ, ಕಾನೂನು ಇಲಾಖೆ ಅಡಿ ಬರುವ ಎಂಟು ಕಾಯ್ಡೆ ಅಡಿ, ಬಳಕೆದಾರರಿಂದ ಸಂಗ್ರಹಿಸುವ ದಂಡವನ್ನ 30% ಹೆಚ್ಚಳಕ್ಕೆ ನಿರ್ಧಾರ.
ಕಾನೂನು ಸೇವಾ ತಿದ್ದುಪಡಿ ಕರಡು ನಿಯಮಗಳಿಗೆ 15 ದಿನ ಅವಕಾಶ ನೀಡುವುದು, ಆಕ್ಷೇಪಣೆ ಬಾರದಿದ್ರೆ ಸದರಿ ಕರಡು ನಿಯಮ ಮಂಡಿಸದೆ ನಿರ್ಣಯ ತೆಗೆದುಕೊಳ್ಳಲು ಅನುಮೋದನೆ.
ವೈದ್ಯಕೀಯ ಶಿಕ್ಷಣ ಇಲಾಖೆ, ಕಿಮ್ಸ್ ಆಸ್ಪತ್ರೆಗೆ ಸಲಕರಣೆ ಖರೀದಿಗೆ 75 ಕೋಟಿ ಅನುದಾನ ನೀಡಲು ಅನುಮೋದನೆ.
ಮೈಸೂರಿನ ನೆಫ್ರೋಲಜಿ ನೂರು ಬೆಡ್ ಸಾಮರ್ಥ್ಯ ಹೆಚ್ಚಳಕ್ಕೆ ಅನುಮೋದನೆ.
ಕಲಬುರಗಿಯ ಮಕ್ಕಳ ಆಸ್ಪತ್ರೆಯನ್ನ ಇಂದಿರಾಗಾಂಧಿ ಆಸ್ಪತ್ರೆ ಸಹಯೋಗದಲ್ಲಿ 150 ಹಾಸಿಗೆ ಆಸ್ಪತ್ರೆ ಸ್ಥಾಪನೆಗೆ 221 ಕೋಟಿ ಬಿಡುಗಡೆಗೆ ಅನುಮೋದನೆ
ಬೆಂಗಳೂರು ನೆಪ್ರೋ- ಯುರಾಲಜಿ ಆಸ್ಪತ್ರೆಯ ಹೊರ ರೋಗಿಗಗಳ ವಿಭಾಗಗಕ್ಕೆ ನೂತನ ಕಟ್ಟಡಕ್ಕೆ 16.15 ಕೋಟಿಗೆ ಅನುಮೋದನೆ.
ಕಂದಾಯ ಇಲಾಖೆಯ ಸಹಾಯಕ ಉಪನೋಂದಣ ಅಧಿಕಾರಿ ವರ್ಗಾವಣೆ ಅವಧಿಯನ್ನು 30-09-24ರ ವರೆಗೂ ವಿಸ್ತರಣೆಗೆ ಅನುಮೋದನೆ.
ಸ್ವಸಹಾಯ ಗುಂಪಿನ ಮಹಿಳೆಯರಿಗೆ ಹೊಸ ಉದ್ಯೋಗ ಅವಕಾಶ ಒಂದು ಲಕ್ಷ ಮಹಿಳೆಯರಿಗೆ 2500 ಕಾಫಿ ಕಿಯೋಸ್ಕ್‌ಗಳನ್ನ ಒದಗಿಸಲು ಕ್ರಮ 25 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ.
ರಾಜ್ಯದ 32 ಸ್ಥಳಗಳಲ್ಲಿ ಸ್ವಯಂ ಚಾಲಿತ ನೂತನ ವಾಹನ ಪಿಟ್ನಸ್ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ.
341 ಕೋಟಿಯಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಸ್ಥಾಪನೆ.. ಯೋಜನೆಗೆ ಘಟನೋತ್ತರ ಅನುಮೋದನೆ.
ಸ್ಕ್ರಾಪಿಂಗ್ ವಾಹನಗಳ ಮೇಲಿನ ದಂಡ ವಿನಾಯತಿ ದಿನಾಂಕ ವಿಸ್ತಾರಣೆ ಅನುಮೋದನೆ – 31-03-26ರ ವರೆಗೆ.
ಪಿಪಿಪಿ ಮಾದರಿಯಲ್ಲಿ ಟೆಕ್ಸ್ಟೈಲ್ಸ್ ಪಾರ್ಕ್ ಮಾಡಲು ಅನುಮೋದನೆ.
ಉಡುಪಿಯ ಕಾರ್ಕಳದಲ್ಲಿ ಪಿಪಿಪಿ ಮಾದರಿಯಲ್ಲಿ ಟೆಕ್ಸ್ಟೈಲ್ಸ್ ಪಾರ್ಕ್ ಮಾಡಲು ಅನುಮೋದನೆ.
ಸ್ಥಳೀಯ ಉದ್ಯೋಗಿಗಳಿಗೆ ಕೌಶಲ್ಯತೆ ನೀಡಲು ನಿಪುಣ ಕರ್ನಾಟಕ ಉಪಕ್ರಮ ಹೆಸರಲ್ಲಿ 100 ಕೋಟಿ ವೆಚ್ಚದಲ್ಲಿ ಟ್ರೈನಿಂಗ್ ನೀಡಲು ಅನುಮೋದನೆ .
ಕರ್ನಾಟಕ ಜೈವಿಕ ತಂತ್ರಜ್ಞಾನ ಅಡಿಯಲ್ಲಿ ಐದು ವರ್ಷಗಳ ಕಾಲ ನಾಲ್ಕು ಕೋಟಿ ವೆಚ್ಚದಲ್ಲಿ ಪ್ರೋತ್ಸಾಹ ದನ ನೀಡಲು ಅನುಮೋದನೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ನೀಡಲು ಅನುಮೋದನೆ.
Advertisement