ಸಿಟಿ ರೌಂಡ್ಸ್ ಮೂಲಕ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ: ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ಪರೋಕ್ಷ ಸಂದೇಶ ರವಾನೆ

ರಾಜ್ಯದಲ್ಲಿ ಮುಡಾ ನಿವೇಶನ ಅಕ್ರಮ ಹೋರಾಟ ಜೋರಾಗಿದ್ದು, ಈ ನಡುವಲ್ಲೇ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ವಿಚಾರವಾಗಿ ಹಗ್ಗಜಗ್ಗಾಟ ಶುರುವಾಗಿದೆ. ಕಾಂಗ್ರೆಸ್ ನಾಯಕರು, ಸಚಿವರು ನಾನು ಸಿಎಂ ಆಗುತ್ತೇನೆ, ನಾನು ಸಿಎಂ ಹುದ್ದೆ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಮುಡಾ ಹಗರಣದ ಒತ್ತಡದ ನಡುಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನಗರ ಪ್ರದಕ್ಷಿಣೆ ನಡೆಸಿದ್ದು, ಈ ಮೂಲಕ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ರಾಜ್ಯದಲ್ಲಿ ಮುಡಾ ನಿವೇಶನ ಅಕ್ರಮ ಹೋರಾಟ ಜೋರಾಗಿದ್ದು, ಈ ನಡುವಲ್ಲೇ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ವಿಚಾರವಾಗಿ ಹಗ್ಗಜಗ್ಗಾಟ ಶುರುವಾಗಿದೆ. ಕಾಂಗ್ರೆಸ್ ನಾಯಕರು, ಸಚಿವರು ನಾನು ಸಿಎಂ ಆಗುತ್ತೇನೆ, ನಾನು ಸಿಎಂ ಹುದ್ದೆ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿದ್ದಾರೆ.

ಈ ನಡುವಲ್ಲೇ ಸಿಟಿ ರೌಂಡ್ಸ್ ನಡೆಸುವ ಮೂಲಕ ಸಿದ್ದರಾಮಯ್ಯ ಅವರು ನಾನು ಬಲಿಷ್ಠ ನಾಯಕ, ಸಿಎಂ ಹುದ್ದೆಯಲ್ಲಿ ಮುಂದುವರೆಯುವುದು ನಾನೇ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.

ಬ್ರ್ಯಾಂಡ್ ಬೆಂಗಳೂರು ಮೂಲಕ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ತೋರುತ್ತಿದ್ದು, ಇದೀಗ, ಸಿಟಿ ರೌಂಡ್ಸ್ ಮೂಲಕ ಸಿದ್ದರಾಮಯ್ಯ ಅವರೂ ಕೂಡ ಬೆಂಗಳೂರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಈ ಹಿಂದೆ ನ್ಯಾಯಾಲಯದ ವಿಚಾರಣೆ ಬಂದಾಗಲೆಲ್ಲಾ ವಿಚಾರಣೆಗಾಗಿಯೇ ಮುಖ್ಯಮಂತ್ರಿಗಳು ಇಡೀ ದಿನವನ್ನು ಮೀಸಲಿಡುತ್ತಿದ್ದರು. ಆದರೆ, ಇದೀಗ ನ್ಯಾಯಾಲಯದ ವಿಚಾರಣೆ ನಡುವಲ್ಲೇ ಸ್ವತಃ ನಗರದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಇಂದು ಸಿಎಂ ನಗರ ಪ್ರದಕ್ಷಿಣೆ: ಅಭಿವೃದ್ಧಿ ಕಾರ್ಯಗಳ ಪರಿಶೀಲನೆ

ಈ ಹಿಂದೆ ಎರಡು ಬಾರಿ ನಗರ ಪ್ರದಕ್ಷಿಣೆ ನಡೆಸಿದಾಗ ಸಿದ್ದರಾಮಯ್ಯ ಅವರಿಗೆ ಡಿಕೆ.ಶಿವಕುಮಾರ್ ಅವರು ಸಾಥ್ ನೀಡಿದ್ದರು. ಆದರೆ, ಗುರುವಾರ ಡಿಕೆ.ಶಿವಕುಮಾರ್ ಅವರ ಅನುಪಸ್ಥಿತಿಯಲ್ಲಿಯೇ ಸಿದ್ದರಾಮಯ್ಯ ಅವರು ನಗರ ಪ್ರದಕ್ಷಿಣೆ ನಡೆಸಿದರು.

ಸುಮಾರು 2 ಗಂಟೆಗಳ ಕಾಲದ ಪರಿಶೀಲನೆ ವೇಳೆ ಸಿದ್ದರಾಮಯ್ಯ ಅವರು, ನಗರದ ವಿವಿಧೆಡೆ ಬಸ್‌ನಲ್ಲಿ ಸಂಚರಿಸಿ, ರಸ್ತೆ, ಸೇತುವೆ, ಮೆಟ್ರೋ ಮುಂತಾದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಬಳಿಕ ನಮ್ಮ ಮೆಟ್ರೋ ಏರಿ ವಿಧಾನಸೌಧಕ್ಕೆ ಪ್ರಯಾಣಿಸಿದರು. ಪ್ರಯಾಣದ ವೇಳೆ ಪ್ರಯಾಣಿಕರೊಂದಿಗೆ ಸಂವಾದವನ್ನೂ ನಡೆಸಿದರು,

ನಗರ ಪ್ರದಕ್ಷಿಣೆ ಮೂಲಕ ಅಮೆರಿಕಾದಲ್ಲಿ ಡಿಕೆ.ಶಿವಕುಮಾರ್ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದರ ಬಗ್ಗೆ ಚಿಂತೆಯಿಲ್ಲದಿರುವುದು ಹಾಗೂ ತಾವು ಬಲಿಷ್ಠ ನಾಯಕ ಎಂಬ ಸಂದೇಶವನ್ನು ಸಿದ್ದರಾಮಯ್ಯ ಅವರು ಆಪ್ತರು, ವೈರಿಗಳಿಬ್ಬರಿಗೂ ರವಾನಿಸಿದ್ದಾರೆಂದು ಮುಖ್ಯಮಂತ್ರಿಗಳು ಆಪ್ತರು ಹೇಳಿದ್ದಾರೆ.

ನಗರ ಪ್ರದಕ್ಷಿಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಿಎಂ, ಬೆಂಗಳೂರು ಸಿಟಿ ರೌಂಡ್ಸ್‌ನ ಭಾಗವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿರುವ ಹೆಬ್ಬಾಳದ ಅಂಡರ್ ಪಾಸ್ ಹಾಗೂ ಫ್ಲೈ ಓವರ್ ಕಾಮಗಾರಿಯನ್ನು ವೀಕ್ಷಿಸಿ, ನಿಗದಿತ ಸಮಯದೊಳಗೆ ಕಾಮಗಾರಿಯನ್ನು ಮುಗಿಸಿ, ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದೇ ವೇಳೆ ಕೆಲವೆಡೆ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕಳಪೆ ಕಾಮಗಾರಿ ಸರಿಪಡಿಸಬೇಕು ಹಾಗೂ ಈ ತಪ್ಪು ಮರುಕಳಿಸದಂತೆ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಸಂಬಂಧಪಟ್ಟ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ
3 ತಿಂಗಳ ಬಳಿಕ ಸಿಎಂ ಸಿಟಿ ರೌಂಡ್ಸ್: ರಸ್ತೆ ಗುಂಡಿಗಳ ತ್ವರಿತವಾಗಿ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚನೆ

ಮತ್ತೊಂದು ಪೋಸ್ಟ್ ನಲ್ಲಿ ಬೆಂಗಳೂರು ಸಿಟಿ ರೌಂಡ್ಸ್‌ನ ಅಂಗವಾಗಿ ಇಂದು ನಗರದ ವಿವಿಧೆಡೆ ಬಸ್‌ನಲ್ಲಿ ಸಂಚರಿಸಿ, ರಸ್ತೆ, ಸೇತುವೆ, ಮೆಟ್ರೋ ಮುಂತಾದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ ಬಳಿಕ ನಮ್ಮ ಮೆಟ್ರೋ ಏರಿ ವಿಧಾನಸೌಧಕ್ಕೆ ಪ್ರಯಾಣ ಬೆಳೆಸಿದೆ. ಕೆಲಕ್ಷಣಗಳ ಈ ಪಯಣದಲ್ಲಿ ನಿತ್ಯ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರನ್ನು ಭೇಟಿಯಾಗಿ ಅವರ ಅನುಭವ ಕೇಳಿದೆ. ಯಾವುದೇ ತ್ರಾಸವಿಲ್ಲದೆ ನಿಗದಿತ ಸಮಯಕ್ಕೆ ಸರಿಯಾಗಿ ತಲುಪಬಹುದಾದ ಮೆಟ್ರೋ ರೈಲು ಬೆಂಗಳೂರಿಗರ ಸಂಚಾರ ಜೀವನಾಡಿಯಾಗಿ ಬದಲಾಗುತ್ತಿದೆ. ಹೀಗಾಗಿ ಕಾಮಗಾರಿಗಳಿಗೆ ವೇಗ ನೀಡಿ, ನಗರದ ಬಹುತೇಕ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ಕುತೂಹಲಕಾರಿ ವಿಚಾರವೆಂದರೆ ಡಿಕೆ. ಶಿವಕುಮಾರ್ ಅವರು ಕೂಡ ಅಮೇರಿಕಾಕ್ಕೆ ತೆರಳುವ ಮುನ್ನವೇ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿ, ಗುಂಡಿ ಮುಚ್ಚಿವ ಕಾರ್ಯ ಮುಗಿಸಲು ಗಡುವು ನೀಡಿದ್ದರು.

ವಿದೇಶಕ್ಕೆ ತೆರಳಿದ್ದರೂ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರಸ್ತೆ ಗುಂಡಿಗಳ ಮುಚ್ಚಿರುವ ಕಾರ್ಯಗಳ ಕುರಿತು ಪೋಸ್ಟ್ ಮಾಡುವ ಮೂಲಕ ನಗರದ ರಸ್ತೆಗಳ ಕುರಿತ ತಮ್ಮ ಕಾಳಜಿಯನ್ನು ಪ್ರದರ್ಶಿಸುತ್ತಿದ್ದರು.

ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ನಗರದ ಸ್ವಚ್ಛತೆ ಹಾಗೂ ಸುರಕ್ಷತೆಗಾಗಿ ಹಲವು ಪ್ರಯತ್ನಗಳು ನಡೆಯುತ್ತಿದ್ದು, ಅದರಂತೆ ಬಿಬಿಎಂಪಿ ಅಧಿಕಾರಿಗಳು ನನ್ನ ಸೂಚನೆಯ ಮೇರೆಗೆ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಬಿರುಸಿನ ಕಾರ್ಯಾಚರಣೆ ಕೈಗೊಂಡಿದ್ದಾರೆ. ಲುಲೂ ಮಾಲ್ ರಸ್ತೆ ಗುಂಡಿಯ ದುರಸ್ತಿ ಕಾರ್ಯದ ಒಂದು ನೋಟ,...ಬೆಂಗಳೂರು ನಗರದ ರಸ್ತೆಗಳ ಸುರಕ್ಷತೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಬಿಬಿಎಂಪಿ ಅಧಿಕಾರಿಗಳು ನನ್ನ ಸೂಚನೆಯ ಮೇರೆಗೆ ರಸ್ತೆ ಗುಂಡಿಗಳನ್ನು ಮುಚ್ಚಿಸುವಲ್ಲಿ ಸಕ್ರಿಯರಾಗಿದ್ದಾರೆ. ಮಹಾಲಕ್ಷ್ಮಿ ಲೇಔಟ್'ನ ರಸ್ತೆ ಗುಂಡಿಯ ದುರಸ್ತಿ ಕಾಮಗಾರಿಯ ಕ್ಷಣಗಳು ಇಲ್ಲಿವೆ...ಬೆಂಗಳೂರು ನಗರದ ರಸ್ತೆಗಳನ್ನು ಗುಂಡಿ ಮುಕ್ತವಾಗಿಸುವುದು ನಮ್ಮ ಸಂಕಲ್ಪವಾಗಿದ್ದು, ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳು ನನ್ನ ಸೂಚನೆಯ ಮೇರೆಗೆ ರಸ್ತೆ ಗುಂಡಿಗಳನ್ನು ಮುಚ್ಚಿಸುವ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಗೋವಿಂದರಾಜನಗರದ ರಸ್ತೆ ಗುಂಡಿಗಳು ದುರಸ್ತಿಗೊಂಡ ಕ್ಷಣಗಳು ಇಲ್ಲಿವೆ... ಎಂದು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಇದೀಗ ಸಿದ್ದರಾಮಯ್ಯ ಅವರು ನಗರ ಪ್ರದಕ್ಷಿಣೆ ನಡೆಸುವ ಮೂಲಕ ತಾವು ಬಲಿಷ್ಠ ನಾಯಕ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com