
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನಗರ ಪ್ರದಕ್ಷಿಣೆ ಕೈಗೊಳ್ಳಲಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಗೃಹ ಕಚೇರಿ ಕೃಷ್ಣಾದಿಂದ ಬೆಳಗ್ಗೆ 11.30ಕ್ಕೆ ಹೊರಡಲಿರುವ ಸಿಎಂ ನೇತೃತ್ವದ ಸಚಿವರು ಹಾಗೂ ಶಾಸಕರು ತಂಡ ಹಲವು ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲಿದೆ.
ಮುಖ್ಯಮಂತ್ರಿಗಳು ರಾಜಕಾಲುವೆಗಳು, ರಸ್ತೆ ಗುಂಡಿಗಳ ಪರಿಶೀಲನೆ ನಡೆಸಲಿದ್ದಾರೆ. ಇದಲ್ಲದೇ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳ ವೀಕ್ಷಣೆಯನ್ನೂ ಮಾಡಲಿದ್ದಾರೆ. ನಗರ ಪ್ರದಕ್ಷಿಣೆಗೂ ಮುನ್ನ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ 100 ಹೊಸ ಬಿಎಸ್6 ಬಿಎಂಟಿಸಿ ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ.
ರಾಜ್ಯ ಸರ್ಕಾರವು 336 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 840 ಹೊಸ ಬಸ್‌ಗಳನ್ನು ಖರೀದಿಗೆ ಒಪ್ಪಿಗೆ ನೀಡಿದ್ದು, ಮೊದಲ ಹಂತದಲ್ಲಿ 100 ಬಿಎಸ್ 6 ಬಸ್ಸುಗಳು ನಗರಕ್ಕೆ ಆಗಮಿಸಿವೆ.
ಹೊಸ ಬಸ್‌ಗಳನ್ನು ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವ ಪ್ರದೇಶಗಳಲ್ಲಿ ಓಡಿಸಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಯಶವಂತಪುರ, ರಾಜಾಜಿನಗರ, ಮೈಸೂರು ರಸ್ತೆ, ಕೆಆರ್ ಪುರ ನಿಲ್ದಾಣಗಳಿಂದ ನಗರದ ಹೊರ ಭಾಗಗಗಳಿಗೆ ಹಾಗೂ ನಗರದ ಪ್ರಮುಖ ಸ್ಥಳಗಳಿಗೆ ಹೊಸ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.
Advertisement