ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕಿರುಕುಳ, ಬೆದರಿಕೆ ಮತ್ತು ಜಾತಿ ನಿಂದನೆ ಆರೋಪದ ಮೇಲೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ರಾಜರಾಜೇಶ್ವರಿನಗರ ಶಾಸಕರ ವಿರುದ್ಧ ಶುಕ್ರವಾರ ಇಲ್ಲಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಗುತ್ತಿಗೆದಾರ ಚೆಲುವರಾಜು ದಾಖಲಿಸಿದ ಮೊದಲ ಎಫ್‌ಐಆರ್‌ನಲ್ಲಿ, ಶಾಸಕರು 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಮತ್ತು ಮೊತ್ತವನ್ನು ಪಾವತಿಸದಿದ್ದರೆ ತನ್ನ ಗುತ್ತಿಗೆಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾಗಿ ಆರೋಪಿಸಿದ್ದಾರೆ.
ಆರಂಭದಲ್ಲಿ ಘನತ್ಯಾಜ್ಯ ವಿಲೇವಾರಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಮುನಿರತ್ನ 2021ರಲ್ಲಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಆದಾಗ್ಯೂ, ತ್ಯಾಜ್ಯ ನಿರ್ವಹಣಾ ಗುತ್ತಿಗೆಗಾಗಿ 10 ಆಟೋ ಟ್ರಿಪ್ಪರ್‌ಗಳನ್ನು ಪಡೆದಿದ್ದಕ್ಕಾಗಿ ಹಣ ಪಾವತಿಯನ್ನು ಮಾಡಿದರೂ, ಅವರಿಗೆ ಪೌರ ಸಂಸ್ಥೆಯಿಂದ ಆ ವಾಹನಗಳನ್ನು ಮಂಜೂರು ಮಾಡಲಿಲ್ಲ. ಚೆಲುವರಾಜು ಅವರಿಗೆ ಶಾಸಕರು ಪದೇ ಪದೇ ಕಿರುಕುಳ ನೀಡುತ್ತಿದ್ದರು ಮತ್ತು ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಮತ್ತು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಎಫ್‌ಐಆರ್ ನಲ್ಲಿ ಆರೋಪಿಸಲಾಗಿದೆ.
ದೂರಿನಲ್ಲಿ, ತನ್ನ ಕೆಲಸವನ್ನು ನಿರ್ವಹಿಸಲು ಶಾಸಕರು ಬಿಡಲಿಲ್ಲ ಮತ್ತು ಸೆಪ್ಟೆಂಬರ್ 2023 ರಲ್ಲಿ ತನಗೆ ಕಪಾಳಕ್ಕೆ ಹೊಡೆದಿದ್ದಾಗಿ ಆರೋಪಿಸಿದ್ದಾರೆ. ಗುತ್ತಿಗೆದಾರನಿಗೆ ಬೆದರಿಕೆ, ನಿಂದನೆ ಮತ್ತು ಕಿರುಕುಳ ನೀಡಿದ ಆರೋಪದಲ್ಲಿ ಶಾಸಕರ ಜೊತೆಗೆ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಮೂವರನ್ನೂ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.
ಪದೇ ಪದೇ ಕಿರುಕುಳ ನೀಡಿದ್ದರಿಂದ ತಾನು ಜೀವ ಕೆಳೆದುಕೊಳ್ಳಲು ಯೋಚಿಸಿದ್ದಾಗಿ ಚೆಲುವರಾಜು ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಮತ್ತು ಆರೋಪಿ ಶಾಸಕರ ನಡುವಿನ ದೂರವಾಣಿ ಸಂಭಾಷಣೆಯ ಆಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ.
ಪೊಲೀಸರ ಪ್ರಕಾರ, ಶಾಸಕ ಮುನಿರತ್ನ ತನ್ನ ಜಾತಿ ನಿಂದನೆ ಮಾಡಿ, ಜಾತಿ ಮತ್ತು ಕುಟುಂಬಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಬಿಎಂಪಿ ಕಾರ್ಪೊರೇಟರ್ ದೂರಿನ ಮೇರೆಗೆ ಶಾಸಕರ ವಿರುದ್ಧ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ಜಾತಿಯ ಕಾರಣ ನೀಡಿ ಕಾರ್ಪೊರೇಟರ್ ಜತೆ ಶಾಮೀಲಾಗಬೇಡಿ ಎಂದು ಚಲುವರಾಜುಗೆ ಶಾಸಕ ಮುನಿರತ್ನ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಇತರ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ‘ಬಂದಿರುವ ದೂರುಗಳ ಆಧಾರದ ಮೇಲೆ ನಾವು ಶಾಸಕರ ವಿರುದ್ಧ ಬೆದರಿಕೆ, ಕಿರುಕುಳ, ಲಂಚ ಮತ್ತು ಜಾತಿ ನಿಂದನೆ ಆರೋಪದ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದರು.
Advertisement