
ಬೆಂಗಳೂರು: ಇತ್ತೀಚಿಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವಂತೆಯೇ ಈ ಪ್ರಕರಣಗಳ ತನಿಖೆ ನಡೆಸುತ್ತಿರುವ ಪೊಲೀಸರು ಹೂಡಿಕೆ ವಂಚನೆಗಳಲ್ಲಿ ಹೊಸ ಪ್ರವೃತ್ತಿಯನ್ನು ಕಂಡುಹಿಡಿದಿದ್ದಾರೆ. ಇಲ್ಲಿ ಪತ್ತೆಯಿಂದ ತಪ್ಪಿಸಿಕೊಳ್ಳಲು ಕದ್ದ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಲಾಗುತ್ತದೆ. ಹಣ ವರ್ಗಾವಣೆ ಸೈಬರ್ ಅಪರಾಧಗಳಲ್ಲಿ ಸಾಮಾನ್ಯ ಅಭ್ಯಾಸವಾಗಿದ್ದರೂ, ವಂಚಕರು ಕ್ರಿಪ್ಟೋದಂತಹ ಡಿಜಿಟಲ್ ಕರೆನ್ಸಿಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದು ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳಿಗೆ ಪತ್ತೆ ಹಚ್ಚಲು ಇದು ತುಂಬಾ ಕಷ್ಟಕರವಾಗಿದೆ.
ಒಂದು ಸಲ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿದ ನಂತರ ಅದನ್ನು ಹಲವಾರು ಖಾತೆಗಳು ಮತ್ತು ವ್ಯಾಲೆಟ್‌ಗಳಿಗೆ ವರ್ಗಾಯಿಸಲಾಗುತ್ತದೆ. ಆಗಾಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಪತ್ತೆ ಮಾಡಲು ಮತ್ತು ಮರುಪಡೆಯಲು ತುಂಬಾ ಕಷ್ಟವಾಗುತ್ತದೆ.
ಜುಲೈ 2023 ರವರೆಗೆ ಕೇವಲ 26 ಹೂಡಿಕೆ ವಂಚನೆ ಪ್ರಕರಣಗಳು ವರದಿಯಾಗಿದ್ದು, ರೂ 1.69 ಕೋಟಿ ನಷ್ಟವಾಗಿದೆ. ಆದಾಗ್ಯೂ, ಈ ವರ್ಷ ಜುಲೈವರೆಗೆ ಆತಂಕಕಾರಿಯಾಗಿ 143 ಪ್ರಕರಣಗಳು ವರದಿಯಾಗಿದ್ದು, 42.35 ಕೋಟಿ ರೂ ನಷ್ಟಕ್ಕೆ ಕಾರಣವಾಗಿದೆ. ಇತ್ತೀಚಿಗೆ ಇಂತಹ ಪ್ರಕರಣ ಬೆಂಗಳೂರು ಗ್ರಾಮಾಂತರ CEN ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.
10 ವರ್ಷಗಳಿಂದ ವಿಮಾ ಏಜೆಂಟ್ ಮತ್ತು ಷೇರು ಮಾರುಕಟ್ಟೆ ಹೂಡಿಕೆದಾರರಾಗಿ ಕೆಲಸ ಮಾಡುತ್ತಿರುವ 33 ವರ್ಷದ ವ್ಯಕ್ತಿ ಹೂಡಿಕೆ ಮಾಡಲು ತನ್ನ ಸಂಬಂಧಿಕರಿಂದ ಹಣವನ್ನು ಸಾಲ ಪಡೆದಿದ್ದರು. ಅಲ್ಲದೇ ಶೇ. 500 ರಷ್ಟು ಆದಾಯದ ನಿರೀಕ್ಷೆಯಲ್ಲಿ ತನ್ನ ಆಸ್ತಿಯನೆಲ್ಲಾ ಮಾರಾಟ ಮಾಡಿದ್ದರು. ಆದರೆ ಅವರು ವಿಮೆ ಅಥವಾ ಹೂಡಿಕೆ ವಂಚನೆಯಿಂದ 1.2 ಕೋಟಿ ರೂ.ಗೂ ಹೆಚ್ಚು ಕಳೆದುಕೊಂಡಿದ್ದಾರೆ.
'ಆ್ಯಪ್ ಲಿಂಕ್' ಹೊಂದಿರುವ ವಾಟ್ಸಾಪ್ ಸಂದೇಶದೊಂದಿಗೆ ಹಗರಣ ಆರಂಭವಾಗಿದ್ದು, 46 ದಿನಗಳವರೆಗೆ ಮುಂದುವರೆದಿದೆ. ಈ ಸಮಯದಲ್ಲಿ ಆ್ಯಪ್‌ನ ವ್ಯಾಲೆಟ್ ಬ್ಯಾಲೆನ್ಸ್‌ನಲ್ಲಿ 60 ಕೋಟಿ ರೂ. ಗೂ ಹೆಚ್ಚು ಹಣ ಪಡೆಯುವ ಸುಳ್ಳು ಭರವಸೆಯಿಂದ ಆಮಿಷವೊಡ್ಡಲಾಗಿದ್ದು, ಸಂತ್ರಸ್ತ ನಿರಂತವಾಗಿ 1.2 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ನಿರಂತರ ಹೂಡಿಕೆ ನಂತರ, ಸಂತ್ರಸ್ತೆ ವ್ಯಾಲೆಟ್ ನಿಂದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಆ್ಯಪ್ ಪ್ರತಿಕ್ರಿಯಿಸಿಲ್ಲ. ಅಲ್ಲದೇ ಎಲ್ಲಾ ಲಿಂಕ್ ಮತ್ತು ಆ್ಯಪ್ ಬಂದ್ ಆಗಿವೆ.
ವಿವಿಧ ಸೈಬರ್ ವಂಚನೆಗಳ ಬಗ್ಗೆ ಚೆನ್ನಾಗಿ ತಿಳಿದಿದ್ದೇನೆ, ಆದಾಗ್ಯೂ, ಈ ಅತ್ಯಾಧುನಿಕತೆಯ ವಂಚನೆಯಿಂದ ಮೋಸ ಹೋಗಿರುವುದಾಗಿ ಸಂತ್ರಸ್ತ ದೂರು ಸಲ್ಲಿಸುವಾಗ ಪೊಲೀಸರೊಂದಿಗೆ ನೋವು ತೋಡಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ನಕಲಿ ಹೂಡಿಕೆ ಹಗರಣಗಳಲಲಿ ಕಡಿಮೆ ಅವಧಿಯಲ್ಲಿ ಅಸಾಧಾರಣವಾಗಿ ಹೆಚ್ಚಿನ ಆದಾಯ ನೀಡುವ ಭರವಸೆ ನೀಡುತ್ತವೆ. ಕಾನೂನುಬದ್ಧ ಹೂಡಿಕೆಗಳು ಸಾಮಾನ್ಯವಾಗಿ ಸ್ಥಿರವಾಗಿರುತ್ತವೆ. ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಂತಹ ಅಧಿಕೃತ ವೇದಿಕೆಗಳಲ್ಲಿ ಲಭ್ಯವಿಲ್ಲದ ಆ್ಯಪ್ ಗಳನ್ನು ಅನುಮಾನದಿಂದ ನೋಡಬೇಕು ಎಂದು ಎಸ್‌ಪಿ ಬಾಬಾ ಎಚ್ಚರಿಸಿದ್ದಾರೆ. ಹೂಡಿಕೆಗಳ ಸಂದರ್ಭದಲ್ಲಿ, ಆ್ಯಪ್ ನಲ್ಲಿ ಫೋಟೋಗಳು ಅಥವಾ ಇನ್ನಿತರ ದಾಖಲೆ ನೀಡಿದರೆ AI ಮತ್ತಿತರ ಇತರ ತಂತ್ರಜ್ಞಾನಗಳೊಂದಿಗೆ ಈ ಮಾಹಿತಿಯನ್ನು ಇತರ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಳ್ಳುವ ಅಪಾಯವಿದೆ" ಎಂದು ಅವರು ಹೇಳಿದರು.
Advertisement