ವೇದಿಕೆ ಹತ್ತಿ ಸಿದ್ದರಾಮಯ್ಯ ಕಡೆ ಧಾವಿಸಿದ ಯುವಕ ಆತಂಕ ಸೃಷ್ಟಿ; ಗಣೇಶ ವಿಸರ್ಜನೆ ವೇಳೆ ತಂದೆ, ಮಗ ಸೇರಿ ಮೂವರು ಜಲಸಮಾಧಿ; ಪ್ಯಾಲೇಸ್ತೀನ್ ಧ್ವಜ ಹಿಡಿದು ಮುಸ್ಲಿಂ ಯುವಕರ ಪುಂಡಾಟ! ಇವು ಇಂದಿನ ಪ್ರಮುಖ ಸುದ್ದಿಗಳು 15-09-24

ವೇದಿಕೆ ಹತ್ತಿ ಸಿದ್ದರಾಮಯ್ಯ ಕಡೆ ಧಾವಿಸಿದ ಯುವಕ ಆತಂಕ ಸೃಷ್ಟಿ; ಗಣೇಶ ವಿಸರ್ಜನೆ ವೇಳೆ ತಂದೆ, ಮಗ ಸೇರಿ ಮೂವರು ಜಲಸಮಾಧಿ; ಪ್ಯಾಲೇಸ್ತೀನ್ ಧ್ವಜ ಹಿಡಿದು ಮುಸ್ಲಿಂ ಯುವಕರ ಪುಂಡಾಟ! ಇವು ಇಂದಿನ ಪ್ರಮುಖ ಸುದ್ದಿಗಳು 15-09-24

1. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮದ ವೇಳೆ ವೇದಿಕೆ ಹತ್ತಿ ಸಿದ್ದರಾಮಯ್ಯ ಕಡೆ ಧಾವಿಸಿದ ಯುವಕ ಆತಂಕ ಸೃಷ್ಟಿ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಮಾನತೆ, ಐಕ್ಯತೆ, ಸಾಮರಸ್ಯ, ಸಾಮಾಜಿಕ ನ್ಯಾಯವನ್ನು ಬಿಂಬಿಸುವ ಅತಿ ಉದ್ದದ ಮಾನವ ಸರಪಳಿ ರಚಿಸಲಾಯಿತು. ಬೀದರ್ ನಿಂದ ಚಾಮರಾಜನಗರದವರೆಗೆ 31 ಜಿಲ್ಲೆಗಳನ್ನೊಳಗೊಂಡ 2,500 ಕಿ.ಮೀ ಉದ್ದದ ಮಾನವ ಸರಪಳಿಯನ್ನು ವಿವಿಧ ನಾಗರಿಕ ಸಂಘಟನೆಗಳ ಸಹಯೋಗದಲ್ಲಿ ಕರ್ನಾಟಕ ಸರ್ಕಾರದಿಂದ ಆಯೋಜಿಸಲಾಗಿತ್ತು. ವಿಧಾನಸೌಧದ ಮುಂಭಾಗ ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಏಕತೆ ನೆಪದಲ್ಲಿ ಸಮಾಜವನ್ನು ಒಡೆಯುವ, ಮನುಷ್ಯರನ್ನು ವಿಭಜಿಸುವ ವಿಚ್ಛಿದ್ರಕಾರಕ ದುಷ್ಟ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದು ನಿಲ್ಲಿ ಎಂದು ಕರೆ ನೀಡಿದರು. ಇದೇ ಕಾರ್ಯಕ್ರಮದಲ್ಲಿ ಯುವಕನೊಬ್ಬ ಏಕಾಏಕಿ ವೇದಿಕೆ ಹತ್ತಿ ಸಿದ್ದರಾಮಯ್ಯ ಕಡೆ ಧಾವಿಸಿ ಶಾಲು ಹೊದಿಸಲು ಪ್ರಯತ್ನಿಸಿದ್ದು ಕೆಲಕಾಲ ಆತಂಕ ಸೃಷ್ಟಿಸಿತ್ತು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಆ ಯುವಕನನ್ನು ವಶಕ್ಕೆ ಪಡೆದರು.

2. ಜಾತಿ ನಿಂದನೆ: BJP ಶಾಸಕ Munirathna ಎರಡು ದಿನ ಪೊಲೀಸ್ ಕಸ್ಟಡಿಗೆ

ಬಿಬಿಎಂಪಿ ಗುತ್ತಿಗೆದಾರನ ವಿರುದ್ಧ ಕಿರುಕುಳ, ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿರುವ ಆರೋಪದಡಿ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ 82ನೇ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ. ಮುನಿರತ್ನರನ್ನು ಕೋಲಾರದ ಮುಳಬಾಗಿಲಿನ ನಂಗಲಿ ಗ್ರಾಮದ ಬಳಿ ನಿನ್ನೆ ಸಾಯಂಕಾಲ ಬಂಧಿಸಿದ್ದ ಪೊಲೀಸರು ಕಳೆದ ರಾತ್ರಿ ಆರೋಗ್ಯ ತಪಾಸಣೆ ನಡೆಸಿ, ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ವೇಳೆ ಪೊಲೀಸರು ಒಂದು ವಾರ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರಿಗೆ ಮನವಿ ಮಾಡಿದರು. ಆದರೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಎರಡು ದಿನಗಳ ಕಾಲ ಮಾತ್ರ ಪೊಲೀಸ್ ಕಸ್ಟಡಿಗೆ ನೀಡಿದರು. ಜೀವ ಬೆದರಿಕೆ ಪ್ರಕರಣದಲ್ಲಿ ಶಾಸಕ ಮುನಿರತ್ನ ಎ1 ಆರೋಪಿಯಾಗಿದ್ದಾರೆ. ಮುನಿರತ್ನರ ಆಪ್ತ ಸಹಾಯಕ ವಿಜಯ್ ಕುಮರ್ ಎ2, ಸೆಕ್ಯೂರಿಟಿ ಅಭಿಷೇಕ್ ಎ3 ಮತ್ತು ವಸಂತ್ ಕುಮಾರ್ ಎ4 ಆರೋಪಿಗಳೆಂದು ಗುರುತಿಸಲಾಗಿದೆ.

3. ಫ್ಲೈಓವರ್ ಕಾಮಗಾರಿ ಮೇಲೆ ರಾಡ್​ ಬಿದ್ದು ಗಾಯಗೊಂಡಿದ್ದ ಎಎಸ್ಐ ನಾಭಿರಾಜ್ ಸಾವು

ಫ್ಲೈಓವರ್ ಕಾಮಗಾರಿ ಮೇಲೆ ರಾಡ್​ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್​ಐ 59 ವರ್ಷದ ನಾಭಿರಾಜ್ ದಯಣ್ಣವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಳೆದ ಸೆಪ್ಟೆಂಬರ್​ 10ರಂದು ಕೋರ್ಟ್ ವೃತ್ತದ ಬಳಿ ಕರ್ತವ್ಯದ ವೇಳೆ ಫ್ಲೈಓವರ್ ಕಾಮಗಾರಿಯ ರಾಡ್​ ಬಿದ್ದು ನಾಭಿರಾಜ್ ಗಾಯಗೊಂಡಿದ್ದರು. ಕೂಡಲೆ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ನಾಭಿರಾಜ್ ದಯಣ್ಣವರ ಮೃತಪಟ್ಟಿದ್ದಾರೆ. ನಾಭಿರಾಜ್ ದಯಣ್ಣವರ ಗುಣಮುಖರಾಗಲು ವೈದ್ಯರು ಸಾಕಷ್ಟು ಪ್ರಯತ್ನಪಟ್ಟರು. ಆದರೆ ಈ ತರಹ ಆಗಬಾರದಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಸಚಿವ ಸಂತೋಷ್​ ಲಾಡ್​ ಸಂತಾಪ ಸೂಚಿಸಿದ್ದಾರೆ.

4. ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ

ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ ವಿಚಾರಕ್ಕೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮತ್ತೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ವಿಲ್ಸನ್ ಗಾರ್ಡನ್ ನಾಗ ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ಮಾಡಿದ್ದು, ತಪಾಸಣೆ ವೇಳೆ ವಿಲ್ಸನ್‌ ಗಾರ್ಡನ್‌ ನಾಗ ಮತ್ತು ಆತನ ಸಹಚರರ ಸುಮಾರು 18 ಮೊಬೈಲ್‌ಫೋನ್‌ ಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಅಧಿಕಾರಿಗಳು ಮೊಬೈಲ್ ಜೊತೆಗೆ ಡ್ರಗ್ಸ್ ಹಾಗೂ ಹಣವನ್ನೂ ಸೀಜ್​ ಮಾಡಿದ್ದಾರೆ ಎಂದು ತಿಳಿದುಬಂದಿದೆ.

5. ಪ್ಯಾಲೇಸ್ತೀನ್ ಧ್ವಜ ಹಿಡಿದು ಪುಂಡಾಟ ಮೆರೆದ ಮುಸ್ಲಿಂ ಯುವಕರು

ತುಮಕೂರಿನ ತುರುವೇಕೆರೆ ತಾಲೂಕಿನ ಮಾರಸಂದ್ರ ಗ್ರಾಮ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ತಂದೆ, ಮಗ ಸೇರಿ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತರನ್ನು 46 ವರ್ಷದ ರೇವಣ್ಣ, 26 ವರ್ಷದ ಶರತ್ ಹಾಗೂ ದಯಾನಂದ ಎಂದು ಗುರುತಿಸಲಾಗಿದೆ. ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಮೃತದೇಹಗಳಿಗೆ ಶೋಧ ನಡೆಸಿದ್ದಾರೆ. ಮತ್ತೊಂಡೆದೆ ಈದ್ ಮಿಲಾದ್ ಮೆರವಣಿಗೆ ಸಿದ್ಧತೆ ನಡುವೆ ಮುಸ್ಲಿಂ ಯುವಕರು ಚಿಕ್ಕಮಗಳೂರಿನ ಪ್ರಮುಖ ಬೀದಿಗಳಲ್ಲಿ ಬೈಕ್ ಮೇಲೆ ಪ್ಯಾಲಿಸ್ತೀನ್‌ ಧ್ವಜ ಹಿಡಿದು ಓಡಾಡಿದ್ದು ಇದರ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿಕ್ಕಮಗಳೂರು ನಗರ ಠಾಣೆ ಮುಂಭಾಗ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com