ನಾಗಮಂಗಲ ಗಲಭೆಯಲ್ಲೂ ಪಾಕ್ ಪರ ಘೋಷಣೆ: ದೊಡ್ಡ ಜಾಲವೇ ಸಕ್ರಿಯವಾಗಿದೆ, NIA ತನಿಖೆಗೆ ನೀಡಿ; ಸರ್ಕಾರಕ್ಕೆ BJP ಆಗ್ರಹ

ನಾಗಮಂಗಲದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ ಮೂವರು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳು ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ನಾಗಮಂಗಲ ಗಣೇಶ ಮೆರವಣಿಗೆ ವೇಳೆ ನಡೆದ ಗಲಭೆ
ನಾಗಮಂಗಲ ಗಣೇಶ ಮೆರವಣಿಗೆ ವೇಳೆ ನಡೆದ ಗಲಭೆ
Updated on

ಬೆಂಗಳೂರು: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ ಮೂವರು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳು ಕೂಗಿದ್ದಾರೆನ್ನಲಾಗುತ್ತಿದ್ದು, ಈ ಕೋಮುದಳ್ಳುರಿಯಲ್ಲಿ ನಿಷೇಧಿತ ಸಂಘಟನೆಗಳ ಕೈವಾಡವಿರುವ ಅನುಮಾನ ಮತ್ತಷ್ಟು ಗಟ್ಟಿಯಾಗುತ್ತಿದೆ. ಹೀಗಾಗಿ ಪ್ರಕರಣವನ್ನ ರಾಷ್ಟ್ರೀಯ ತನಿಖಾ ದಳಕ್ಕೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ನಾಗಮಂಗಲದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ ಮೂವರು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳು ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಹೇಳುತ್ತಿದ್ದು, ಈ ಕೋಮುದಳ್ಳುರಿಯಲ್ಲಿ ನಿಷೇಧಿತ ಸಂಘಟನೆಗಳ ಕೈವಾಡವಿರುವ ಅನುಮಾನ ಮತ್ತಷ್ಟು ಗಟ್ಟಿಯಾಗುತ್ತಿದೆ.

ಇದರ ಬೆನ್ನಲ್ಲೇ ಚಿಕ್ಕಮಗಳೂರಲ್ಲಿ ಬೈಕ್ ನಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದಿರುವ ಪುಂಡಾಟ, ದಾವಣಗೆರೆಯ ಗಾಂಧಿನಗರ ಹಾಗೂ ಅಹ್ಮದ್ ನಗರಗಳಲ್ಲಿ ಹಿಂದೂ ಯುವಕರು ಬಾವುಟ ಕಟ್ಟಿದ್ದಕ್ಕೆ ಮತಾಂಧ ಪುಂಡರು ಅವರ ಮೇಲೆ ಹಲ್ಲೆ ಮಾಡಿರುವುದು, ಇವನ್ನೆಲ್ಲಾ ಗಮನಿಸುತ್ತಿದ್ದರೆ ಈ ಪ್ರಚೋದನಕಾರಿ ಘಟನೆಗಳು ಗಣೇಶೋತ್ಸವವನ್ನೇ ಟಾರ್ಗೆಟ್ ಮಾಡಿರುವಂತಿದೆ.

ಇಂತಹ ಘಟನೆಗಳು ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಸಂದರ್ಭದಲ್ಲಿಯೂ ನಡೆದಿತ್ತು. ಹಿಂದೂಗಳ ಹಬ್ಬಗಳು, ಉತ್ಸವಗಳು, ಸಂಭ್ರಮಾಚರಣೆಗಳನ್ನೇ ಗುರಿಯಾಗಿಸಿ ರಾಜ್ಯಾದ್ಯಂತ ನಡೆಸುತ್ತಿರುವ ಇಂತಹ ದುಷ್ಕೃತ್ಯಗಳ ಹಿಂದೆ ಮತೀಯ ಮೂಲಭೂತವಾದಿ ಸಂಘಟನೆಗಳ ದೊಡ್ಡ ಜಾಲವೇ ಇರುವಂತಿದೆ. ಅಂತಾರಾಜ್ಯ, ಅಂತರಾಷ್ಟ್ರೀಯ ನಂಟು ಹೊಂದಿರುವ ಇಂತಹ ವ್ಯವಸ್ಥಿತ, ಪ್ರಾಯೋಜಿತ, ಜಾಲವನ್ನ ಬೇಧಿಸುವುದು ಸ್ಥಳೀಯ ಪೊಲೀಸರಿಂದ ಅಸಾಧ್ಯವಾಗಿದ್ದು, ಕೂಡಲೇ ಈ ಪ್ರಕರಣಗಳನ್ನ ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಗೃಹ ಸಚಿವ ಪರಮೇಶ್ವರ್ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆಂದು ಹೇಳಿದ್ದಾರೆ.

ರಾಜ್ಯ ಬಿಜೆಪಿ ಪೋಸ್ಟ್ ಮಾಡಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಮತಾಂಧರ ಉಪಟಳ. ದಾವಣಗೆರೆಯ ಗಾಂಧಿನಗರ ಹಾಗೂ ಅಹ್ಮದ್ ನಗರದಲ್ಲಿ ಹಿಂದೂ ಯುವಕರು ಬಾವುಟ ಕಟ್ಟಿದ್ದಕ್ಕೆ ಮತಾಂಧ ಪುಂಡರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ನೋಡಿದರೆ ಕರುನಾಡಿನಲ್ಲಿ ಮತಾಂಧರ ಮಾತಾಂಧತೆಯನ್ನು ಪ್ರಶ್ನಿಸಬೇಕಾದ ಸರ್ಕಾರ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತಂತಿದೆ. ಸಿದ್ದರಾಮಯ್ಯ ಸರ್ಕಾರ ಓಲೈಕೆಗಾಗಿ ತಮ್ಮ ಬ್ರದರ್ಸ್‌ಗಳ ಬೆನ್ನಿಗೆ ನಿಂತಿರುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದೆ.

ಪ್ರಜಾಪ್ರಭುತ್ವ ಮಾನವ ಸರಪಳಿಗೆ HDK ಆಕ್ರೋಶ

ಈ ನಡುವೆ ಕಾಂಗ್ರೆಸ್ ಸರ್ಕಾರ ಭಾನುವಾರ ನಡೆಸಿದ ಪ್ರಜಾಪ್ರಭುತ್ವ ಮಾನವ ಸರಪಳಿ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮಾನವ ಸರಪಳಿ ನೆಪದಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿದ ಕಾಂಗ್ರೆಸ್ ಸರಕಾರಕ್ಕೆ ಪ್ರಜಾಪ್ರಭುತ್ವ ಉಳಿಸುವ ಕಾಳಜಿಯೇ ಇಲ್ಲ. ಇದ್ದರೆ ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ. ಅಧಿಕಾರಕ್ಕೇರಿದಾಗಿನಿಂದ ಪ್ರಜಾಪ್ರಭುತ್ವದ ಸರಪಳಿಯ ತಳಮಟ್ಟದ ಆಧಾರಸ್ತಂಭಗಳಾದ ಜಿಲ್ಲಾ & ತಾಲೂಕು ಪಂಚಾಯತಿ ಮತ್ತು ಬಿಬಿಎಂಪಿ ಚುನಾವಣೆ ನಡೆಸಿಲ್ಲ, ಯಾಕೆ? ಸ್ಥಳೀಯ ಸರಕಾರಗಳ ಕತ್ತು ಹಿಸುಕಿ ನೀವು ವಿಧಾನಸೌಧದಲ್ಲಿ ಮೆರೆದರೇನು ಭಾಗ್ಯ? ಎಂದು ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಅವರೇ.. ನೀವು ಅಧಿಕಾರಕ್ಕೆ ಬಂದು ವರ್ಷದ ಮೇಲೆ 4 ತಿಂಗಳಾಯಿತು (2023 ಮೇ 20). ಈವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ನಿಮ್ಮ ಪ್ರಜಾಪ್ರಭುತ್ವ, ಜನಪರತೆ, ಜಾಹೀರಾತುಗಳಲ್ಲಷ್ಟೆ ಝಗಮಗಿಸುತ್ತಿದೆ!. ನಿಮ್ಮದು ಪ್ರಚಾರ ಜಾಸ್ತಿ, ಆಚಾರ ನಾಸ್ತಿ. ವಿಚ್ಚಿಧ್ರ ಶಕ್ತಿಗಳನ್ನು ದಮನ ಮಾಡುವುದು ಎಂದರೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಕ್ಕೆ ತಿಲಾಂಜಲಿ ಇಡುವುದೇ? ಮಾನವ ಸರಪಳಿಯಿಂದ ಪ್ರಜಾಪ್ರಭುತ್ವ ಉಳಿಯುತ್ತದೆಯೇ? ಜನರ ತೆರಿಗೆ ಹಣದ ಪೋಲು ಪ್ರಜಾಪ್ರಭುತ್ವಕ್ಕೆ ಭೂಷಣವೇ? ಮೊದಲು ಸ್ಥಳೀಯ ಸಂಸ್ಥೆ ಚುನಾವಣೆ ಘೋಷಿಸಿ. ನೈಜ ಪ್ರಜಾಪ್ರಭುತ್ವದ ಸರಪಳಿಯನ್ನು ಗಟ್ಟಿಗೊಳಿಸಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com