ಫಿಲಂ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್
ಫಿಲಂ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್

ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲೂ ಸಮಿತಿ ರಚಿಸಿದರೆ ಸ್ವಾಗತ: ಫಿಲಂ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್ (ಸಂದರ್ಶನ)

Published on

ಮಾಲಿವುಡ್‌ನಲ್ಲಿ ಹೇಮಾ ಕಮಿಟಿಯಂತೆ ಮಹಿಳೆಯರ ಸುರಕ್ಷತೆಗಾಗಿ ಸ್ಯಾಂಡಲ್‌ವುಡ್‌ನಲ್ಲಿಯೂ ಸರ್ಕಾರ ಸಮಿತಿ ರಚಿಸಿದರೆ ಸ್ವಾಗತಿಸುತ್ತೇವೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಅಧ್ಯಕ್ಷ ಎನ್‌ಎಂ ಸುರೇಶ್‌ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಟ ದರ್ಶನ್ ಬಂಧನದಿಂದ ಕನ್ನಡ ಚಿತ್ರರಂಗದ ಮೇಲಾಗಿರುವ ಪರಿಣಾಮ, ಮಾಸ್ ಹೀರೋಗಳು ವರ್ಷಕ್ಕೆ ಒಂದು ಸಿನಿಮಾ ಮಾಡುವ ಸೂತ್ರಕ್ಕೆ ಅಂಟಿಕೊಂಡಿರುವುದು ಹಾಗೂ ಚಲನಚಿತ್ರಗಳು ಮತ್ತು ಇತರರ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವದ ಕುರಿತು ಮಾತನಾಡಿದರು.

Q

ನಿಮ್ಮ ಪ್ರಕಾರ, ಸಿನಿಮಾ ನಿರ್ಮಾಪಕರಾಗಲು ಯಾವ ರೀತಿಯ ಸಿದ್ಧತೆಗಳನ್ನು ನಡೆಸಿರಬೇಕು?

A

ಸಿನಿಮಾದ ಬಗ್ಗೆ ಮೂಲಭೂತ ಜ್ಞಾನ ಇರುವುದು ಅವಶ್ಯಕ. ಕೆಲವರು ತಮ್ಮನ್ನು ಸಂಪೂರ್ಣ ಸಿದ್ಧತೆಯೊಂದಿಗೆ ಚಿತ್ರರಂಗಕ್ಕೆ ಬರುತ್ತಾರೆ. ಇನ್ನು ಕೆಲವರು ಕಾಲಿಡುವ ಮುನ್ನವೇ ದೊಡ್ಡ ನಿರ್ಮಾಪಕರು ಎಂದು ಭಾವಿಸಿರುತ್ತಾರೆ. ಸರಿಯಾದ ಜ್ಞಾನವಿಲ್ಲದವರು ಸಿನಿಮಾ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ)ಯಲ್ಲಿರುವುದು ಕಷ್ಟ. ನಿರ್ಮಾಪಕನಾಗಿ ಕೋಟಿಗಟ್ಟಲೆ ಸಂಪಾದನೆ ಮಾಡಿ ಕೋಟಿಗಟ್ಟಲೆ ಕಳೆದುಕೊಂಡಿದ್ದೇನೆ. ನಾನು ನಿರ್ಮಿಸಿದ ‘ಎಕ್ಸ್‌ಕ್ಯೂಸ್ ಮಿ’ ಕೋಟಿಗಟ್ಟಲೆ ಗಳಿಕೆ ಮಾಡಿದೆ. ನನ್ನ ಒಂದು ಚಿತ್ರದಲ್ಲಿ, ನಾನು ಪ್ರಪಂಚದ ಅದ್ಭುತಗಳನ್ನು ತೋರಿಸಿದ್ದೇನೆ ಮತ್ತು ಇತರ ಚಲನಚಿತ್ರೋದ್ಯಮಗಳು, ಕನ್ನಡ ಚಲನಚಿತ್ರ ನಿರ್ಮಾಪಕರು ಕೂಡ ಹಣ ಖರ್ಚು ಮಾಡಿ ವಿದೇಶದಲ್ಲಿ ಚಿತ್ರೀಕರಣ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದನ್ನು ಅರಿತುಕೊಂಡೆ. ನಿರ್ಮಿಸಿದ ಎಲ್ಲಾ ಚಲನಚಿತ್ರಗಳು ಹಿಟ್ ಆಗುವುದಿಲ್ಲ, ಒಂದು ಚಿತ್ರ ಯಶಸ್ವಿಯಾಗಬಹುದು.

Q

ಕನ್ನಡ ಚಿತ್ರರಂಗ ಮಾಸ್ ಹೀರೋಗಳನ್ನು ಅವಲಂಬಿಸಿವೆಯೇ?

A

ಇಲ್ಲ ಸಿನಿಮಾ ಇಂಡಸ್ಟ್ರಿ ಕೇವಲ ಮಾಸ್ ಹೀರೋಗಳ ಮೇಲೆ ಅವಲಂಬಿತವಾಗಿಲ್ಲ. ಸಿನಿಮಾದ ಕಥೆ, ನಿರ್ದೇಶನ, ಹಾಡು ಹೀಗೆ ಇತರ ಅಂಶಗಳನ್ನೂ ಜನ ನೋಡುತ್ತಾರೆ. ವಸ್ತು ಕೊರತೆಯಿಂದ ಅನೇಕ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ ಮತ್ತು ಇದರಿಂದಾಗಿ ಬಿ ಮತ್ತು ಸಿ ಸೆಂಟರ್‌ಗಳು (ಜಿಲ್ಲೆಗಳು ಮತ್ತು ಹೋಬಳಿಗಳಲ್ಲಿನ ಚಿತ್ರಮಂದಿರಗಳು) ಬಂದ್ ಆಗುತ್ತಿವೆ. ಉತ್ತಮ ಗುಣಮಟ್ಟದ ಸಣ್ಣ-ಬಜೆಟ್ ಚಲನಚಿತ್ರಗಳನ್ನು ಮಾಡುವಂತೆ ನಾನು ಒತ್ತಾಯಿಸುತ್ತೇನೆ. ಚಲನಚಿತ್ರೋದ್ಯಮಗಳಲ್ಲಿ, ಕನ್ನಡ ಚಿತ್ರಗಳು ಹೆಚ್ಚಿನ ಸೆನ್ಸಾರ್ ಕಡಿತವನ್ನು ಎದುರಿಸುವುದಿಲ್ಲ. ನಾವು ಪ್ರತಿ ವರ್ಷ 10 ಲಕ್ಷದಿಂದ 50 ಕೋಟಿಗೂ ಅಧಿಕ ಬಜೆಟ್‌ನಲ್ಲಿ 200ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸುತ್ತೇವೆ. ಒಂದು ಸಿನಿಮಾ ಅನೇಕರಿಗೆ ಉದ್ಯೋಗ ನೀಡುತ್ತದೆ.

ಟಿಕೆಟ್ ದರಗಳು ಭಿನ್ನವಾಗಿರುವುದರಿಂದ ನಾವು ನಮ್ಮ ಚಲನಚಿತ್ರಗಳನ್ನು ಇತರ ರಾಜ್ಯಗಳ ಚಲನಚಿತ್ರಗಳೊಂದಿಗೆ ಹೋಲಿಸಲಾಗುವುದಿಲ್ಲ. ಕರ್ನಾಟಕದಲ್ಲಿ ಮಾತ್ರ, ಟಿಕೆಟ್ ದರಗಳು ಹೆಚ್ಚಿದ್ದರೆ, ಇತರವುಗಳಲ್ಲಿ ದರವನ್ನು ಮಿತಿಗೊಳಿಸಲಾಗಿರುತ್ತದೆ.

Q

ನ್ಯಾಯಮೂರ್ತಿ ಹೇಮಾ ಸಮಿತಿಯು ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಲೈಂಗಿಕ ಶೋಷಣೆ ಮತ್ತು ಅಮಾನವೀಯ ಕೆಲಸದ ಪರಿಸ್ಥಿತಿಗಳ ಮೇಲೆ ಬೆಳಕು ಚೆಲ್ಲಿದೆ. ಇದಾದ ಬಳಿಕ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ಕರ್ನಾಟಕ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕರ್ನಾಟಕದಲ್ಲೂ ಇದೇ ರೀತಿಯ ಸಮಿತಿಯನ್ನು ರಚಿಸುವಂತೆ ಒತ್ತಾಯಿಸಿದದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

A

ನನಗೆ ತಿಳಿದಿರುವಂತೆ ಇಂತಹ ಘಟನೆಗಳು ಹಿಂದೆ ನಡೆದಿರಬಹುದು. KFCC ಕನ್ನಡ ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಸರ್ವೋಚ್ಚ ಸಂಸ್ಥೆಯಾಗಿದೆ. ಸಿನಿಮಾ ಮತ್ತು ಕಲಾವಿದರಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ KFCC ಯ ನಿರ್ಧಾರವು ಸರ್ವೋಚ್ಚವಾಗಿದೆ. ಡಾ ರಾಜ್‌ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರಂತಹ ದಿಗ್ಗಜರು ಕೆಎಫ್‌ಸಿಸಿ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು.

ಶ್ರುತಿ ಹರಿಹರನ್ ಪ್ರಕರಣದಲ್ಲಿ ಮಾತ್ರ ಲೈಂಗಿಕ ಕಿರುಕುಳ ಕುರಿತು ದೂರು ಬಂದಿತ್ತು, ಅದನ್ನು ಪರಿಹರಿಸಿದ್ದೇವೆ. ನಾನು ಕೆಎಫ್‌ಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಇಂತಹ ಯಾವುದೇ ಘಟನೆಗಳು ನಡೆದಿಲ್ಲ. ಯಾವುದೇ ಮಹಿಳಾ ಕಲಾವಿದರು ನಮಗೆ ದೂರು ನೀಡಿಲ್ಲ. ಕೆಎಫ್‌ಸಿಸಿಗೆ ಗೊತ್ತಿಲ್ಲದೆ ಕೆಲವು ಮಾನ್ಯತೆ ಪಡೆಯದ ಸಂಘಟನೆಗಳು ಸಿಎಂ ಅವರನ್ನು ಭೇಟಿ ಮಾಡಿ ಪತ್ರ ನೀಡಿದರೆ ಅದಕ್ಕೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ.

Q

ನ್ಯಾಯಮೂರ್ತಿ ಹೇಮಾ ಸಮಿತಿಯಂತೆಯೇ ರಾಜ್ಯ ಸರ್ಕಾರವೂ ಸಮಿತಿಯನ್ನು ಸ್ಥಾಪಿಸಬೇಕೇ?

A

ಕನ್ನಡ ಇಂಡಸ್ಟ್ರಿಯಲ್ಲಿ ಯಾವುದೇ ಕಲಾವಿದರು ಲೈಂಗಿಕ ಕಿರುಕುಳ ಅಥವಾ ಯಾವುದೇ ಸಮಸ್ಯೆ ಎದುರಿಸುತ್ತಿದ್ದರೆ, ಕೆಎಫ್‌ಸಿಸಿ ಅಧ್ಯಕ್ಷನಾಗಿ, ಅವರ ದೂರನ್ನು ತಕ್ಷಣವೇ ಕೈಗೆತ್ತಿಕೊಂಡು ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡುತ್ತೇನೆ. ಅಲ್ಲದೆ, ಸರ್ಕಾರವು ಮಲಯಾಳಂ ಉದ್ಯಮದ ರೀತಿಯ ನಿರ್ಧಾರವನ್ನು ತೆಗೆದುಕೊಂಡು ನಿವೃತ್ತ ನ್ಯಾಯಾಧೀಶರನ್ನು ನೇಮಿಸುವ ಮೂಲಕ ಸಮಿತಿಯನ್ನು ಸ್ಥಾಪಿಸಿದರೆ ಮತ್ತು ಮಾರ್ಗಸೂಚಿಗಳನ್ನು ರೂಪಿಸಿದರೆ ಅದನ್ನು ನಾವು ಸ್ವಾಗತಿಸುತ್ತೇವೆ.

Q

ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯ ನಂತರ, ಕರ್ನಾಟಕ ಮಹಿಳಾ ಸಮಿತಿಯ ಮುಖ್ಯಸ್ಥರು ಕೆಎಫ್‌ಸಿಸಿಗೆ ಪತ್ರ ಬರೆದಿದ್ದಾರೆ, ಇದರ ಬಗ್ಗೆ ಏನು ಹೇಳುತ್ತೀರಿ?

A

ಸೆಪ್ಟೆಂಬರ್ 16 ರಂದು ಎಲ್ಲಾ ಕಲಾವಿದರ ಸಭೆಯನ್ನು ಕರೆದಿದ್ದೇವೆ, ಅಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರೂ ಉಪಸ್ಥಿತರಿರುತ್ತಾರೆ. ಯಾವುದೇ ದೂರುಗಳಿದ್ದವರು ಆ ದಿನ ಆಕೆಯ ಸಮ್ಮುಖದಲ್ಲಿ ನೋಂದಾಯಿಸಿಕೊಳ್ಳಬಹುದು.

Q

ಮಲಯಾಳಂ ಚಿತ್ರರಂಗ ನಮಗಿಂತ ಹೇಗೆ ಭಿನ್ನವಾಗಿದೆ?

A

ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಅದು ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಸಿನಿಮಾ ಇಂಡಸ್ಟ್ರಿಯನ್ನೇ ಯಾಕೆ ಟಾರ್ಗೆಟ್ ಮಾಡಬೇಕು? ಇದು ಎಲ್ಲೆಡೆ ಇದೆ. ಹಿರಿಯ ನಟ ರಮೇಶ್ ಅರವಿಂದ್ ಅವರು ಹೇಳಿದಂತೆ, ಚಿತ್ರರಂಗವನ್ನು ಏಕೆ ಪ್ರತ್ಯೇಕಿಸಿ ಟಾರ್ಗೆಟ್ ಮಾಡಬೇಕು? ಅಲ್ಲದೆ, ನ್ಯಾಯಮೂರ್ತಿ ಹೇಮಾ ಸಮಿತಿಯು ಕೇವಲ ಲೈಂಗಿಕ ಶೋಷಣೆಯನ್ನಷ್ಟೇ ಬಹಿರಂಗಪಡಿಸಿಲ್ಲ. ವೇತನ, ಕೆಲಸದ ಸಮಯ ಮತ್ತು ಇತರ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲಿದೆ.

Q

ರಾಜಕುಮಾರ್ ಅವರಂತಹ ನಟರು ವರ್ಷಕ್ಕೆ ಮೂರು ಚಿತ್ರಗಳನ್ನು ಮಾಡುತ್ತಿದ್ದರು. ಈಗಿನ ಮಾಸ್ ಹೀರೋಗಳು ವರ್ಷಕ್ಕೆ ಒಂದು ಚಿತ್ರಕ್ಕೆ ಸೀಮಿತವಾಗಿದ್ದಾರೆ. ಇದು ಉದ್ಯಮದ ಮೇಲೆ ಪರಿಣಾಮ ಬೀರುವುದಿಲ್ಲವೇ?

A

ಮಾಸ್ ಹೀರೋಗಳಾಗಿ ಬದಲಾದ ನಂತರ ಅವರಿಗೆ ಅನ್ನ, ಬಟ್ಟೆ, ವಸತಿ ಇತ್ಯಾದಿಗಳನ್ನು ನೀಡಿದ ಕನ್ನಡ ಇಂಡಸ್ಟ್ರಿಯ ಬಗ್ಗೆ ಅವರು ಯೋಚಿಸುವುದಿಲ್ಲ. ಮಾಸ್ ಹೀರೋಗಳು ಒಂದು ಅಥವಾ ಎರಡು ವರ್ಷಗಳಲ್ಲಿ ಒಂದೇ ಚಿತ್ರವನ್ನು ನೀಡಿದಾಗ, ಇತರ ಭಾಷೆಯ ಚಿತ್ರಗಳು ಆ ಜಾಗವನ್ನು ತೆಗೆದುಕೊಳ್ಳುತ್ತವೆ.

Q

ಇತರ ರಾಜ್ಯಗಳಲ್ಲಿ ಟಿಕೆಟ್ ದರಗಳು ಕೈಗೆಟುಕುವ ದರದಲ್ಲಿವೆ. ಕರ್ನಾಟಕದಲ್ಲೇಕೆ ಹೆಚ್ಚಿದೆ?

A

ಲಿಯೋ ಮತ್ತು ಗೋಟ್ ಚಲನಚಿತ್ರಗಳಿಗೆ ಬೆಳಿಗ್ಗೆ 4ರ ಪ್ರದರ್ಶನದ ವೇಳೆ ಟಿಕೆಟ್ ದರಗಳು ರೂ 1,500 ಕ್ಕೆ ಏರಿರುತ್ತವೆ. ಮಲ್ಟಿಪ್ಲೆಕ್ಸ್‌ಗಳು ಮತ್ತು ಥಿಯೇಟರ್‌ಗಳು ಕನ್ನಡಕ್ಕೆ ಪ್ರೈಮ್ ಟೈಮ್ ನೀಡುವುದಿಲ್ಲ. ಮಲ್ಟಿಪ್ಲೆಕ್ಸ್‌ಗಳು ವಿಪರೀತ ದರಗಳನ್ನು ವಿಧಿಸುತ್ತವೆ. ನಾವು ಈ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. 2017ರಲ್ಲಿ ಸಿದ್ದರಾಮಯ್ಯ ಸರ್ಕಾರ ಟಿಕೆಟ್ ದರ 200 ರೂ.ಗಿಂತ ಹೆಚ್ಚಿಗೆ ಇರಬಾರದು ಎಂದು ಆದೇಶ ನೀಡಿತ್ತು. ಆದರೆ. ಮಲ್ಟಿಪ್ಲೆಕ್ಸ್‌ಗಳು ಈ ಆದೇಶವನ್ನು ಪಾಲಿಸದೇ ತಡೆ ಪಡೆದಿವೆ. ಇದರಲ್ಲಿ ಪ್ರಬಲ ಲಾಬಿ ಇದೆ. ನ್ಯಾಯಾಲಯದಿಂದ ತಂದಿರುವ ಈ ತಡೆಯಾಜ್ಞೆಯನ್ನು ರದ್ದುಪಡಿಸುವ ಕುರಿತು ಗಮನ ಹರಿಸಲಾಗುತ್ತಿದೆ.

Q

OTT ಪ್ಲಾಟ್‌ಫಾರ್ಮ್‌ಗಳು ಕನ್ನಡ ಚಿತ್ರರಂಗದ ಮೇಲೆ ಪ್ರಭಾವ ಬೀರುತ್ತಿವೆಯೇ?

A

OTT ಗಳು ಕನ್ನಡ ಚಲನಚಿತ್ರಗಳನ್ನು ತಮ್ಮ ವೇದಿಕೆಗಳಲ್ಲಿ ತೆಗೆದುಕೊಳ್ಳುತ್ತಿಲ್ಲ. ಅವು ಸ್ವಾಯತ್ತ ಸಂಸ್ಥೆಗಳು. ಈ ಬಗ್ಗೆ ಸರಕಾರ ನಿರ್ಧಾರ ಕೈಗೊಳ್ಳಬೇಕಿದೆ. ಈ ಬಗ್ಗೆ ಸರ್ಕಾರ ಭಾರತೀಯ ಸ್ಪರ್ಧಾತ್ಮಕ ಆಯೋಗ ನಿರ್ಧಾರ ಕೈಗೊಳ್ಳಬೇಕಿದೆ.

Q

ನಟ ದರ್ಶನ್ ಬಂಧನ ಕನ್ನಡ ಚಿತ್ರರಂಗದ ಮೇಲೆ ಪರಿಣಾಮ ಬೀರಿದೆಯೇ?

A

ಒಂದು ನಿರ್ದಿಷ್ಟ ಮಟ್ಟಿಗೆ, ಹೌದು. ಆದರೆ, ಯಾವುದೇ ಚಿತ್ರೋದ್ಯಮ ಒಬ್ಬ ವ್ಯಕ್ತಿ ಅಥವಾ ನಾಯಕನ ಮೇಲೆ ಅವಲಂಬಿತವಾಗಿಲ್ಲ. ಬಿ ಮತ್ತು ಸಿ ಸೆಂಟರ್‌ಗಳಲ್ಲಿ ಕೆಲವು ಮಾಸ್ ಹೀರೋ ಚಿತ್ರಗಳು ಓಡುತ್ತವೆ. ದರ್ಶನ್ ಮಾಸ್ ಹೀರೋ ಆಗಿರುವುದರಿಂದ ಅವರ ಚಿತ್ರಗಳೂ ಓಡುತ್ತವೆ. ಹೊಸ ಪ್ರತಿಭೆಗಳನ್ನೂ ಜನರು ಪ್ರೋತ್ಸಾಹಿಸಬೇಕು. ಕನ್ನಡ ಚಿತ್ರಗಳು ಹೆಚ್ಚಾಗಿ ನಾಯಕ ಪ್ರಧಾನವಾಗಿವೆ, ನಾವೂ ತಂತ್ರಜ್ಞರನ್ನು ಆಧರಿಸಿದ ಚಿತ್ರೋದ್ಯಮವಾಗಬೇಕು.

Q

ರೇಣುಕಾಸ್ವಾಮಿ ಹತ್ಯೆಯ ನಂತರ ದರ್ಶನ್ ವಿರುದ್ಧ ಕೆಎಫ್‌ಸಿಸಿಯಿಂದ ಯಾವುದೇ ದೃಢ ನಿಲುವು ಕೈಗೊಳ್ಳಲಾಗಿಲ್ಲ. ಇದು ಕನ್ನಡ ಚಿತ್ರರಂಗದ ಬಗ್ಗೆ ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ನೀವು ಭಾವಿಸುವುದಿಲ್ಲವೇ?

A

ಈ ಹಿಂದೆ ದರ್ಶನ್ ಜೈಲು ಪಾಲಾದಾಗ ಅವರ ಸಾರಥಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ನಾವು ಜನರ ಭಾವನೆಗಳನ್ನು ಅಳೆಯಲು ಸಾಧ್ಯವಿಲ್ಲ. ನಾಳೆ ದರ್ಶನ್ ಜಾಮೀನಿನ ಮೇಲೆ ಹೊರಬಂದು ಡೆವಿಲ್ ಸಿನಿಮಾ ಮುಗಿಸಿ ಸಿನಿಮಾ ಸೂಪರ್ ಹಿಟ್ ಆದ್ರೂ ಆಶ್ಚರ್ಯವಿಲ್ಲ. ಒಂದು ವರ್ಷದ ನಂತರ, ಜನರು ಘಟನೆಗಳನ್ನು ಮರೆಯಲು ಪ್ರಾರಂಭಿಸುತ್ತಾರೆ. ಹೀಗೆ ಹೇಳಿದ ಮಾತ್ರಕ್ಕೆ ನಾನು ದರ್ಶನ್ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದೇನೆಂದು ಅರ್ಥವಲ್ಲ. ನ್ಯಾಯಾಲಯವು ನಿರ್ಧರಿಸಬೇಕಾದ ವಿಷಯದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ.

ನಾವು ಕನ್ನಡ ಚಿತ್ರರಂಗದ ಸರ್ವೋಚ್ಚ ಸಂಸ್ಥೆಯಾಗಿದ್ದು, ಅನಿರೀಕ್ಷಿತ ಘಟನೆಗಳಿಗೆ ಹೊಣೆಗಾರರಾಗುವುದಿಲ್ಲ. ಇಂತಹ ಘಟನೆ ನಡೆಯಬಾರದಿತ್ತು. ಈ ವಿಚಾರ ಇದೀಗ ನ್ಯಾಯಾಲಯದಲ್ಲಿದೆ, ಕಾನೂನು ತನ್ನ ಕ್ರಮವನ್ನು ತೆಗೆದುಕೊಳ್ಳುತ್ತದೆ. ನಾವು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ನಟ ದರ್ಶನ್ ಅವರನ್ನು ಬ್ಯಾನ್ ಮಾಡುವಂತೆ ಜನರು ಕೇಳಿದರು, ಸಾಧ್ಯವಿಲ್ಲ ಎಂದು ನಾನು ಹೇಳಿದ್ದೇವೆ. ದರ್ಶನ್ ಅವರು ಜೈಲಿನಲ್ಲಿದ್ದು, ಇದರಿಂದ ಕೆಲವರಿಗೆ ನಷ್ಟವಾಗಿದೆ. ಹಾಗೆಂದು ದರ್ಶನ್ ಅವರಿಲ್ಲ ಎಂದರೆ ಚಿತ್ರರಂಗವೇನು ಬಂದ್ ಆಗಲ್ಲ.

Q

ಶ್ರವಣದೋಷವುಳ್ಳವರಿಗೆ ಓಪನ್ ಮತ್ತು ಕ್ಲೋಸ್ ಶೀರ್ಷಿಕೆಯಂತಹ ಸೌಲಭ್ಯಗಳನ್ನು ಮತ್ತು ದೃಷ್ಟಿದೋಷವುಳ್ಳವರಿಗೆ ಸೌಲಭ್ಯವನ್ನು ನೀಡುವ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸುವಂತೆ ಚಲನಚಿತ್ರೋದ್ಯಮಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ನಿರ್ದೇಶನ ನೀಡಿದೆ. ಈ ಬಗ್ಗೆ ನಿಮ್ಮ ನಿರ್ಧಾರವೇನು?

A

ಇದು ಅವೈಜ್ಞಾನಿಕ ಮತ್ತು ನಿರ್ಮಾಪಕರಿಗೆ ಹೆಚ್ಚುವರಿ ಹೊರೆಯಾಗುವುದರಿಂದ ಅದನ್ನು ಜಾರಿಗೆ ತರಲು ಹೋಗುವುದಿಲ್ಲ ಎಂದು ಸಿಬಿಎಫ್‌ಸಿಗೆ ತಿಳಿಸಿದ್ದೇವೆ. ಜಾರಿಗೆ ತರಲು ಕನಿಷ್ಠ ಎರಡು ವರ್ಷಗಳ ಕಾಲಾವಕಾಶ ನೀಡುವಂತೆ ಹೇಳಿದ್ದೆ. ಉಪಕರಣಕ್ಕೆ ನಿರ್ಮಾಪಕರು ಒಂದು ಚಿತ್ರ ಮಂದಿರಕ್ಕೆ ರೂ.50,000 ಖರ್ಚು ಮಾಡಬೇಕಾಗುತ್ತದೆ. 600 ಚಿತ್ರಮಂದಿರಗಳಿಗೆ ಸುಮಾರು ರೂ.30 ಕೋಟಿ ವೆಚ್ಚವಾಗುತ್ತದೆ, ಮಲ್ಟಿಪ್ಲೆಕ್ಸ್‌ಗಳನ್ನು ಸೇರಿಸಿದರೆ 50 ಕೋಟಿ ರೂ ಆಗುತ್ತದೆ. ಇದರ ಹಿಂದೆ ಯಾವುದೋ ಮಾಫಿಯಾ ಕೈವಾಡ ಇದ್ದಂತಿದೆ. ಮೊದಲು, ಅವರು UFO ಮತ್ತು QUBE ಪ್ಲಾಟ್‌ಫಾರ್ಮ್‌ಗಳಲ್ಲಿ ಮಾತ್ರ ಚಲನಚಿತ್ರಗಳನ್ನು ಅಪ್‌ಲೋಡ್ ಮಾಡುವಂತೆ ತಿಳಿಸಿದ್ದರು ಪ್ಲಾಟ್‌ಫಾರ್ಮ್‌ಗಳು 1,200 ಕೋಟಿ ರೂಪಾಯಿಗಳ ವ್ಯವಹಾರವಾಗಿದೆ.

Q

ಕನ್ನಡ ಚಿತ್ರರಂಗದ ವಾರ್ಷಿಕ ವಹಿವಾಟು ಎಷ್ಟು? ಟಿಕೆಟ್‌ಗಳ ಮೇಲೆ ಸೆಸ್ ವಿಧಿಸುವುದನ್ನು ಮತ್ತು OTT ಪ್ಲಾಟ್‌ಫಾರ್ಮ್ ಚಂದಾದಾರಿಕೆಯನ್ನು ಹೇಗೆ ನೋಡುತ್ತೀರಿ?

A

ನಮ್ಮ ಅಂದಾಜಿನ ಪ್ರಕಾರ ಕನ್ನಡ ಚಿತ್ರರಂಗದ ವಹಿವಾಟು 500 ಕೋಟಿಗೂ ಹೆಚ್ಚಿದೆ. ರಾಜ್ಯ ಸರಕಾರ ಶೇ.2ರಷ್ಟು ಸೆಸ್ ವಿಧಿಸುತ್ತಿದ್ದು, ನಿರ್ಮಾಪಕರಿಗೆ ನಷ್ಟವಾಗಿದೆ. ಇದನ್ನು ಕೈಬಿಡುವಂತೆ ಸಚಿವ ಸಂತೋಷ್ ಲಾಡ್ ಅವರನ್ನು ಸಂಪರ್ಕಿಸಿದರೂ ನಮಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಿನಿ ಕಾರ್ಮಿಕರನ್ನು ನೋಡಿಕೊಳ್ಳಲು ಸೆಸ್ ವಿಧಿಸಲಾಗುತ್ತಿದೆ ಎಂದು ಸರ್ಕಾರ ಸಮರ್ಥಿಸಿಕೊಳ್ಳಬಹುದು. ಅದಕ್ಕಾಗಿ ನಮ್ಮ ಚಿತ್ರಮಂಡಳಿ ಇದೆ. ನಿರ್ಮಾಪಕರಿಗೆ ನಷ್ಟವಾದರೆ ಯಾರು ಬರುತ್ತಾರೆ? ಅನುಷ್ಠಾನಕ್ಕೂ ಮುನ್ನ ಸರ್ಕಾರ ಸಂಬಂಧಪಟ್ಟವರ ಜತೆ ಚರ್ಚೆ ನಡೆಸಬೇಕು.

Q

ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳನ್ನು ಮುಚ್ಚಲಾಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

A

ನನ್ನ ಸ್ನೇಹಿತ ಕುಣಿಗಲ್ ನಲ್ಲಿ ಥಿಯೇಟರ್ ಹೊಂದಿದ್ದು, 1.75 ಲಕ್ಷ ತೆರಿಗೆ ಕಟ್ಟಬೇಕಿದೆ. ಬೆಂಗಳೂರಿನ ಥಿಯೇಟರ್‌ಗಳಿಗೂ ಅದೇ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಬಿ ಮತ್ತು ಸಿ ಸೆಂಟರ್‌ಗಳಲ್ಲಿನ ಥಿಯೇಟರ್‌ಗಳ ಮಾಲೀಕರಿಗೆ ಕಷ್ಟವಾಗುತ್ತಿದೆ. ಕಾರ್ಮಿಕರ ಸಂಬಳ, ನಿರ್ವಹಣೆ ಮತ್ತಿತರ ವೆಚ್ಚ ಥಿಯೇಟರ್ ಮಾಲೀಕರ ಮೇಲೆ ಬೀಳುತ್ತದೆ. ಚಿತ್ರಗಳ ಕೊರತೆಯೂ ಇದೆ. ಮಾಸ್ ಹೀರೋಗಳಲ್ಲಿ ನನ್ನ ವಿನಂತಿ ಎಂದರೆ ವರ್ಷಕ್ಕೆ ಒಂದು ಚಿತ್ರವನ್ನಾದರೂ ಮಾಡಬೇಕು. ಉದ್ಯಮವು ನಿಮ್ಮನ್ನು ಸೃಷ್ಟಿಸಿದೆ, ಉದ್ಯಮಕ್ಕೆ ನಿಮ್ಮ ಅಗತ್ಯವಿದ್ದಾಗ, ದಯವಿಟ್ಟು ಅದಕ್ಕೆ ಬೆಂಬಲ ನೀಡಿ.

Q

ನಿರ್ಮಾಪಕರಾಗಿ, ಕಾಶ್ಮೀರ್ ಫೈಲ್ಸ್, ಕೇರಳ ಸ್ಟೋರಿ ಮತ್ತು ಇನ್ನೂ ಬಿಡುಗಡೆಯಾಗಬೇಕಿರುವ ಎಮರ್ಜೆನ್ಸಿ ವಿವಾದಾತ್ಮಕ ಚಿತ್ರಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅಲ್ಲದೆ, ಚಲನಚಿತ್ರಗಳು ಮತ್ತು ಉದ್ಯಮದ ಭವಿಷ್ಯದ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವ ಏನು?

A

ಸಿನಿಮಾವನ್ನು ಸಿನಿಮಾ ಎಂದು ಪರಿಗಣಿಸಬೇಕು. ನಾನು ಕಾಶ್ಮೀರ್ ಫೈಲ್‌ ಸಿನಿಮಾ ವೀಕ್ಷಿಸಿದ್ದೇನೆ, ಅದರಲ್ಲಿ ತಪ್ಪೇನಿದೆ? ಚಿತ್ರ ಹಿಟ್ ಆಯಿತು. ಪ್ರಚಾರ ನೀಡಿ ಇಂತಹ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಿದ್ದೀರಿ. ಸಿನಿಮಾ ನೋಡಬೇಡಿ ಎಂದರೆ ಜನರು ಹೆಚ್ಚು ಆಕರ್ಷಿತರಾಗುತ್ತಾರೆ. ನಾನು ಸಾಮಾಜಿಕ ಮಾಧ್ಯಮದ ತೀರ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಸಿನಿಮಾದ ಭವಿಷ್ಯವನ್ನು ನಿರ್ಧರಿಸುವವರು ಜನ. ಅಲ್ಲದೆ, ಚಲನಚಿತ್ರಗಳಿಗೆ ರೇಟಿಂಗ್ ನೀಡುವ ವೇದಿಕೆಗಳ ಪರವಾಗಿಯೂ ನಾನಿಲ್ಲ. ರೇಟಿಂಗ್ ನೋಡಿ ಎಲ್ಲರೂ ಹೋಗಿ ಸಿನಿಮಾ ನೋಡುವುದಿಲ್ಲ.

Q

ಕರ್ನಾಟಕ ರಾಜ್ಯ ಚಲನಚಿತ್ರಗಳಿಗೆ ಸಬ್ಸಿಡಿಯನ್ನು ಪ್ರೋತ್ಸಾಹಿಸುತ್ತಿದೆಯೇ?

A

ನಾನು ಇಂಡಸ್ಟ್ರಿಗೆ ಬಂದಾಗ ಕೇವಲ 20 ಚಿತ್ರಗಳಿಗೆ ಸಬ್ಸಿಡಿ ಇತ್ತು. ಆದರೆ, ಈಗ 200 ಚಿತ್ರಗಳಿಗೆ ಸಬ್ಸಿಡಿ ಸಿಗುತ್ತಿದೆ. ಭಾರತದಲ್ಲಿ ಸಿನಿಮಾಗೆ ಸಬ್ಸಿಡಿ ನೀಡಿ ಪ್ರೋತ್ಸಾಹಿಸುತ್ತಿರುವುದು ಕರ್ನಾಟಕ ರಾಜ್ಯ ಮಾತ್ರ. ಸರಕಾರಕ್ಕೆ ಉತ್ತಮ ಗುಣಮಟ್ಟದ ಚಿತ್ರಗಳು ಬೇಕು. ಜನರು ಸಬ್ಸಿಡಿ ದುರುಪಯೋಗ ಮಾಡಬಾರದು; ಮಕ್ಕಳ ಚಿತ್ರಗಳಿಗೆ 20 ಲಕ್ಷ ಹಾಗೂ ಪೌರಾಣಿಕ ಚಿತ್ರಗಳಿಗೆ 25 ಲಕ್ಷ ಸಬ್ಸಿಡಿ ನೀಡಲಾಗುತ್ತದೆ. ಒಟ್ಟಾರೆಯಾಗಿ ವಾರ್ಷಿಕ 20 ಕೋಟಿ ಅನುದಾನ ನೀಡಲಾಗುತ್ತದೆ.

Q

ನೆಲ, ಭಾಷೆ ಮತ್ತು ಸಂಪನ್ಮೂಲಗಳ ವಿಷಯದಲ್ಲಿ ರಾಜ್ಯದ ಹಿತಾಸಕ್ತಿ ಪರ ಕನ್ನಡ ಚಿತ್ರರಂಗ ನಿಲ್ಲಲಿದೆ ಎಂದು ಹೇಳಿದ್ದೀರಿ... ಮೇಕೆದಾಟು ಯೋಜನೆ ಬಗ್ಗೆ ನಿಮ್ಮ ನಿಲುವೇನು?

A

ಡಾ ರಾಜ್‌ಕುಮಾರ್ ಅವರಿಂದ ಇತ್ತೀಚಿನ ಕನ್ನಡ ಕಲಾವಿದರು ಮತ್ತು ಉದ್ಯಮದ ಇತರರು ಕನ್ನಡ ನೆಲ ಮತ್ತು ಭಾಷೆಯೊಂದಿಗೆ ಇದ್ದಾರೆ. ಕನ್ನಡ ಪರ ಸಂಘಟನೆಗಳೂ ಇದಕ್ಕೆ ಬೆಂಬಲವಾಗಿ ನಿಂತಿವೆ. ನಮ್ಮ ಹಕ್ಕುಗಳಿಗಾಗಿ ನಾವು ಹೋರಾಡಬೇಕಾಗಿದೆ. ನಾವು ಇದನ್ನು ಹಿಂದೆಯೂ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ಮೇಕೆದಾಟು ಉತ್ತಮ ಯೋಜನೆಯಾಗಿದ್ದು, ಇದರಿಂದ ಎರಡೂ ರಾಜ್ಯಗಳ ರೈತರಿಗೆ ಅನುಕೂಲವಾಗಲಿದೆ. ಪಕ್ಷ ಭೇದವಿಲ್ಲದೇ ಎಲ್ಲರೂ ಈ ಯೋಜನೆಗೆ ಬೆಂಬಲ ನೀಡಬೇಕು ಎಂದು ಹೇಳಿದ್ದಾರೆ.

X

Advertisement

X
Kannada Prabha
www.kannadaprabha.com