ಬೆಂಗಳೂರು: ಸಚಿವ ದಿನೇಶ್ ಗುಂಡೂರಾವ್ ಅವರ ಕುಟುಂಬದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಹೈಕೋರ್ಟ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ತಮ್ಮ ಕುಟುಂಬ ಹಾಗೂ ವೈಯಕ್ತಿಕ ನಿಂಧನೆ ಹೇಳಿಕೆ ನೀಡಿದ್ದ ಯತ್ನಾಳ್ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಅವರು ಮಾನನಷ್ಟ ಮೊಕದ್ದಮ್ಮೆ ದಾಖಲಿಸಿದ್ದರು.
ತಮ್ಮ ವಿರುದ್ಧದ ಮಾನಹಾನಿ ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿದೆ. ಅಲ್ಲದೇ ಶಾಸಕರ ಕೀಳು ಅಭಿರುಚಿಯ ಹೇಳಿಕೆಯನ್ನು ಪ್ರಶ್ನಿಸಿದ ನ್ಯಾಯಾಧೀಶರು, ನೀವು ಹೇಳಿಕೆ ನೀಡಿದ್ದು ಹೌದೋ ಅಲ್ಲವೋ ಎಂದು ಪ್ರಶ್ನಿಸಿದರು. ಹೇಳಿಕೆ ನೀಡಿದ್ದನ್ನ ಯತ್ನಾಳ್ ಪರ ವಕೀಲರು ಒಪ್ಪಿಕೊಂಡರು.
ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈ ರೀತಿಯ ಪದ ಬಳಕೆ ಯಾವ ಅರ್ಥ ನೀಡುತ್ತದೆ. ವಯಕ್ತಿಕ ತ್ಯೇಜೋವಧೆಗೆ ನೀವು ಏಕೆ ಇಳಿದಿದ್ದೀರಿ. ಇತ್ತಿಚೆಗೆ ಈ ರೀತಿಯ ಹೇಳಿಕೆಗಳು ಮಾಮೂಲಾಗಿವೆ. ಒಂದು ಸಮುದಾಯದ ವಿರುದ್ಧ ಈ ರೀತಿ ಪದಬಳಕೆ ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಒಬ್ಬರ ಪತ್ನಿ ಮುಸ್ಲಿಂ ಆಗಿದ್ದಾಕ್ಷಣ ಈ ರೀತಿಯ ಹೇಳಿಕೆ ನೀಡುವುದೇ?... ಇದು ಸರಿಯಲ್ಲ ಎಂದು ಚಾಟಿ ಬೀಸಿದರು ಮತ್ತು ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿದರು. ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂದು ಯತ್ನಾಳ್ ಹೇಳಿದ್ದರು.
ಸ್ವತಃ ಯತ್ನಾಳ್ ಪರ ವಕೀಲ ಸಿ.ವಿ ನಾಗೇಶ್ ಅವರು ಯತ್ನಾಳ್ ಅವರ ಹೇಳಿಕೆಯನ್ನ ಸಮರ್ಥಿಸಿಕೊಂಡಿಲ್ಲ ಮತ್ತು ಕೋರ್ಟ್ ಮುಂದೆ ತಪ್ಪು ಒಪ್ಪಿಕೊಂಡರು. ಸಚಿವರ ಹೇಳಿಕೆಗೆ ಪ್ರತಿಯಾಗಿ ಯತ್ನಾಳ್ ಅವರು ಹೇಳಿಕೆ ನೀಡಿದ್ದಾರೆ. ಆದರೆ ಕುಟುಂಬ ನಿಂಧಿಸುವ ಉದ್ದೇಶದಿಂದ ಈ ಹೇಳಿಕೆ ನೀಡಿಲ್ಲ ಎಂದು ಯತ್ನಾಳ್ ಪರ ವಕೀಲರು ಸಮಜಾಯಿಶಿ ನೀಡಲು ಪ್ರಯತ್ನಿಸಿದರು. ಆದರೆ ಯತ್ನಾಳ್ ಪರ ವಕೀಲರ ವಾದವನ್ನ ಒಪ್ಪದ ಜಸ್ಟೀಸ್ ನಾಗಪ್ರಸನ್ನ ಅವರು ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿದರು.
Advertisement