ಗಂಗಾರತಿ ಮಾದರಿಯಲ್ಲೇ ಕಾವೇರಿಗೂ ಆರತಿ: ದಸರಾ ವೇಳೆ ಆರಂಭಕ್ಕೆ ಸರ್ಕಾರ ಚಿಂತನೆ..!

ನಿನ್ನೆ ಹರಿದ್ವಾರಕ್ಕೆ ತೆರಳಿರುವ ನಿಯೋಗ ವಿಶೇಷ ಗಂಗಾರತಿಯಲ್ಲಿ ಭಾಗಿಯಾಗಿ ಪೂಜೆ ನಡೆಸಿತು ಮತ್ತು ಆರತಿ ಮೇಲುಸ್ತುವಾರಿ ನೋಡಿಕೊಳ್ಳುವ ಹಿಂದೂ ಸಭಾ ಜೊತೆ ಮಾತುಕತೆ ನಡೆಸಿ, ಹಲವು ಅನುಮಾನಗಳಿಗೆ ಸ್ಪಷ್ಟನೆ ಪಡೆದುಕೊಂಡಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಉತ್ತರ ಭಾರತದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿಯೇ ರಾಜ್ಯದ ಕಾವೇರಿ ನದಿಗೆ ಕಾವೇರಿ ಆರತಿ ನಡೆಸಲು ಸರ್ಕಾರ ಮುಂದಾಗಿದ್ದು, ದಸರಾ ವೇಳೆಗೆ ಆರಂಭಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಅಧ್ಯಯನ ನಡೆಸಲು ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಹರಿದ್ವಾರ ಮತ್ತು ವಾರಾಣಾಸಿಗೆ ಭೇಟಿ ನೀಡಿದೆ.

ನಿನ್ನೆ ಹರಿದ್ವಾರಕ್ಕೆ ತೆರಳಿರುವ ನಿಯೋಗ ವಿಶೇಷ ಗಂಗಾರತಿಯಲ್ಲಿ ಭಾಗಿಯಾಗಿ ಪೂಜೆ ನಡೆಸಿತು ಮತ್ತು ಆರತಿ ಮೇಲುಸ್ತುವಾರಿ ನೋಡಿಕೊಳ್ಳುವ ಹಿಂದೂ ಸಭಾ ಜೊತೆ ಮಾತುಕತೆ ನಡೆಸಿ, ಹಲವು ಅನುಮಾನಗಳಿಗೆ ಸ್ಪಷ್ಟನೆ ಪಡೆದುಕೊಂಡಿತು.

ಗಂಗಾ ಆರತಿ ವೀಕ್ಷಣೆ ಜತೆಗೆ ಪೂಜೆಯಲ್ಲಿ ಭಾಗಿಯಾದ ಬಳಿಕ‌ ಮಾತನಾಡಿದ ಸಚಿವ ಚಲುವರಾಯಸ್ವಾಮಿಯವರು, ‘ಕಾವೇರಿ ಆರತಿಗೆ ಎರಡು, ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಅಂತಿಮಗೊಂಡ ಸ್ಥಳದಲ್ಲಿ ಆರತಿಗಾಗಿ ಸೋಪಾನೆಕಟ್ಟೆ ನಿರ್ಮಿಸಲಾಗುವುದು. ಹರಿದ್ವಾರದಲ್ಲಿ ನಿತ್ಯ ಗಂಗಾ ಆರತಿ ನಡೆಯುತ್ತಿದೆ. ರಾಜ್ಯದಲ್ಲಿ ವಾರದಲ್ಲಿ ಎರಡು ಅಥವಾ ಮೂರು ದಿನ ಆರತಿ ಮಾಡಬೇಕೆ? ನಿತ್ಯ ಆರತಿ ನಡೆಸಬೇಕೇ ಎಂಬುದರ ಬಗ್ಗೆ ಸಮಿತಿ ಜತೆ ಚರ್ಚಿಸಿ ನಿರ್ಧರಿಸಲಾಗುವುದು. ಆರಂಭದಲ್ಲಿ ಹರಿದ್ವಾರ ಮತ್ತು ವಾರಾಣಸಿಯ ಸಾಧು, ಸಂತರನ್ನು ಆಹ್ವಾನಿಸಿ ಅವರಿಂದ ಕಾವೇರಿ ಆರತಿ ನಡೆಸಲಾಗುತ್ತದೆ. ಬಳಿಕ ಅವರಿಂದಲೇ ಸ್ಥಳೀಯ ವೈದಿಕರಿಗೆ ತರಬೇತಿ ಕೊಡಿಸಿ ಕಾವೇರಿ ಆರತಿ ಮುಂದುವರಿಸಲಾಗುವುದು ಎಂದು ಹೇಳಿದರು.

ಸಂಗ್ರಹ ಚಿತ್ರ
ವಾರಣಾಸಿಯ ಗಂಗಾ ಆರತಿಯಂತೆ, ಕಾವೇರಿ ಆರತಿ ಆಯೋಜನೆ; PPP ಮಾದರಿಯಲ್ಲಿ ಬೃಂದಾವನಕ್ಕೆ ಹೊಸ ರೂಪ: ಡಿ.ಕೆ ಶಿವಕುಮಾರ್

ಹರಿದ್ವಾರದ ಗಂಗಾ‌ ಮಹಾಸಭಾದ ಸಮಿತಿಯ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಗಂಗಾ ಆರತಿ ಇತಿಹಾಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೆಲವು ಸಲಹೆಗಳನ್ನು ನೀಡಿದ್ದಾರೆ. ಶನಿವಾರ ವಾರಾಣಸಿಗೆ ತೆರಳಿ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿ ವೀಕ್ಷಿಸಲಾಗುವುದು. ಭಾನುವಾರ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವುದರ ಜೊತೆಗೆ ಘಾಟ್‌ನಲ್ಲಿ ಸಂಚರಿಸಿ, ಅಲ್ಲಿನ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಇದೇ ವೇಳೆ ಮಾಹಿತಿ ನೀಡಿದರು.

ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ಕಾವೇರಿಗೆ ಆರತಿ ಯೋಜನೆ ರೂಪಿಸಲಾಗುತ್ತಿದ್ದು, ಅಧ್ಯಯನ ನಡೆಸಲು ಚಾಮರಾಜನಗರ, ಮೈಸೂರು, ಮಂಡ್ಯ, ಮಡಿಕೇರಿ ಭಾಗದ ಶಾಸಕರ ಸಮಿತಿಯನ್ನು ರಚಿಸಲಾಗಿದೆ.

ಸಚಿವ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯಲ್ಲಿ ಶಾಸಕರಾದ ನರೇಂದ್ರಸ್ವಾಮಿ, ಶಿವಲಿಂಗೇಗೌಡ, ರಮೇಶ್ ಬಂಡಿ ಸಿದ್ದೇಗೌಡ, ಉದಯ್ ಗೌಡ, ರವಿಕುಮಾರ್ ಗಣಿಗ, ಮಾಗಡಿ ಬಾಲಕೃಷ್ಣ, ಹರೀಶ್​ಗೌಡ, ದರ್ಶನ್ ಧ್ರುವನಾರಾಯಣ್ ಇದ್ದು, ಚಿತ್ರನಟ ಹಾಗೂ ಸಂಗೀತ ನಿರ್ದೇಶಕ ಸಾಧುಕೋಕಿಲ ಅವರು ಸಮೀತಿಯಲಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಸೂಚನೆಯಂತೆ ಕಾವೇರಿ ಆರತಿ ಕುರಿತು ವಿಶೇಷ ಹಾಡು ರಚಿಸಲಿದ್ಧಾರೆಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com