ಶಿವಾಜಿ ಗಣೇಶನ್, ಪೂರ್ಣಿಮಾ, ಕಾಟ್ಕರ್ ಸೇರಿ 5 ಜನ ಪತ್ರಕರ್ತರಿಗೆ TSR ಪ್ರಶಸ್ತಿ ಪ್ರಕಟ

ಈ ಪ್ರಶಸ್ತಿ 2 ಲಕ್ಷ ರೂ. ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ. 2018 ರವರೆಗೆ 26 ಜನ ಹಿರಿಯ ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2019 ರಿಂದ 2023 ರವರೆಗಿನ 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಇದೀಗ ಸರ್ಕಾರ ಪ್ರಕಟಿಸಿದೆ.
ಪತ್ರಕರ್ತರಾದ ಶಿವಾಜಿ ಗಣೇಶನ್, ಡಾ. ಪೂರ್ಣಿಮಾ, ಪದ್ಮರಾಜ ದಂಡಾವತಿ
ಪತ್ರಕರ್ತರಾದ ಶಿವಾಜಿ ಗಣೇಶನ್, ಡಾ. ಪೂರ್ಣಿಮಾ, ಪದ್ಮರಾಜ ದಂಡಾವತಿ
Updated on

ಬೆಂಗಳೂರು: ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ನೀಡುವ ಟಿ.ಎಸ್.ರಾಮಚಂದ್ರರಾವ್ (TSR) ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಕೋವಿಡ್ ಸೇರಿ ನಾನಾ ಕಾರಣಗಳಿಂದ ವಿಳಂಬವಾಗಿದ್ದ 2019 ರಿಂದ 2023ನೇ ಸಾಲಿನ ಒಟ್ಟು 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಶಿಫಾರಸ್ಸುಗಳನ್ನು ಸರಕಾರ ಅನುಮೋದಿಸಿ ಪ್ರಶಸ್ತಿಗಳನ್ನು ಘೋಷಿಸಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪತ್ರಕರ್ತರೊಬ್ಬರಿಗೆ 1993ರಿಂದ ಪ್ರತಿ ವರ್ಷ ಟಿಎಸ್ ಆರ್ ಪತ್ರಿಕೋದ್ಯಮ ಪ್ರಶಸ್ತಿಯನ್ನು ಸರ್ಕಾರ ನೀಡುತ್ತದೆ.

ಈ ಪ್ರಶಸ್ತಿ 2 ಲಕ್ಷ ರೂ. ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ. 2018 ರವರೆಗೆ 26 ಜನ ಹಿರಿಯ ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2019 ರಿಂದ 2023 ರವರೆಗಿನ 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಇದೀಗ ಸರ್ಕಾರ ಪ್ರಕಟಿಸಿದೆ.

2019ನೇ ಸಾಲಿಗೆ ಶಿವಾಜಿ ಎಸ್ ಗಣೇಶನ್, 2020ನೇ ಸಾಲಿಗೆ ಶ್ರೀಕಾಂತಾಚಾರ್ಯ.ಆರ್.ಮಣೂರ, 2021ನೇ ಸಾಲಿಗೆ ಡಾ.ಆರ್.ಪೂರ್ಣಿಮಾ, 2022ನೇ ಸಾಲಿಗೆ ಪದ್ಮರಾಜ ದಂಡಾವತಿ, 2023ನೇ ಸಾಲಿಗೆ ಡಾ. ಸರಜೂ ಕಾಟ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ.

ಶಿವಾಜಿ ಎಸ್ ಗಣೇಶನ್ 1978ರಿಂದ ಪ್ರಜಾವಾಣಿ ಕನ್ನಡ ದಿನಪತ್ರಿಕೆಯ ವಿವಿಧ ಹುದ್ದೆಗಳಲ್ಲಿ ಸುಮಾರು 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ತುಮಕೂರು, ನವದೆಹಲಿ ಸೇರಿದಂತೆ ವಿವಿಧೆಡೆ ವರದಿಗಾರರಾಗಿ ಮಹತ್ವಪೂರ್ಣ ಸೇವೆ ಸಲ್ಲಿಸಿದ್ದಾರೆ.

ಶ್ರೀಕಾಂತಾಚಾರ್ಯ ಆರ್.ಮಣೂರ, 1973ರಿಂದ ಸಂಯುಕ್ತ ಕರ್ನಾಟಕ ಪತ್ರಿಕೆಯ ವಿವಿಧ ಹುದ್ದೆಗಳಲ್ಲಿ 44 ವರ್ಷಗಳ ಸೇವೆ ಸಲ್ಲಿಸಿ ಕಲಬುರಗಿ ಆವೃತ್ತಿಯ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾಗಿದ್ದಾರೆ. ಡಾ. ಆರ್. ಪೂರ್ಣಿಮಾ 1981ರಿಂದ ಪ್ರಜಾವಾಣಿ, ಉದಯವಾಣಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದು, ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಪದ್ಮರಾಜ ದಂಡಾವತಿ 1982ರಲ್ಲಿ ಪ್ರಜಾವಾಣಿಗೆ ಸೇರಿ 36 ವರ್ಷಗಳಿಗೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾಗಿದ್ದಾರೆ. ಬೆಳಗಾವಿಯವರಾದ ಡಾ.ಸರಜೂ ಕಾಟ್ಕರ್: ದಿ ಇಂಡಿಯನ್ ಎಕ್ಸಪ್ರೆಸ್ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ 45 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ: ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರ ಸಾಧನೆಯನ್ನು ಗುರುತಿಸಿ. ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ'ಯನ್ನು ಕರ್ನಾಟಕ ಸರ್ಕಾರವು 2010ರಿಂದ ಪ್ರತಿ ವರ್ಷ ನೀಡುತ್ತಿದೆ. ಈ ಪ್ರಶಸ್ತಿಯು 2 ಲಕ್ಷ ರೂ. ನಗದು ಪುರಸ್ಕಾರವನ್ನು ಒಳಗೊಂಡಿದೆ. ಈ ವರೆಗೆ 09 ಪತ್ರಕರ್ತರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2019 ರಿಂದ 2023 ರವರೆಗಿನ 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಇದೀಗ ಸರ್ಕಾರ ಪ್ರಕಟಿಸಿದೆ.

2019ನೇ ಸಾಲಿಗೆ ರಾಜೀವ್ ಕಿದಿಯೂರ, 2020ನೇ ಸಾಲಿಗೆ ಇಂದೂಧರ ಹೊನ್ನಾಪುರ, 2021ನೇ ಸಾಲಿಗೆ ಎನ್.ಮಂಜುನಾಥ, 2022ನೇ ಸಾಲಿಗೆ ಚಂದ್ರಶೇಖರ್ ಪಾಲೆತ್ತಾಡಿ, 2023ನೇ ಸಾಲಿಗೆ ಶಿವಲಿಂಗಪ್ಪ ದೊಡ್ಡಮನಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ವಿಜೇತರಿಗೆ ಶೀಘ್ರದಲ್ಲಿಯೇ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com