ಬೆಂಗಳೂರು: ಮಲ್ಲೇಶ್ವರಂ ಬಿಬಿಎಂಪಿ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಸಾವು
ಬೆಂಗಳೂರು: ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ನಿರ್ಲಕ್ಷ್ಯಕ್ಕೆ 11 ವರ್ಷದ ಬಾಲಕ ಬಲಿಯಾಗಿರುವ ದಾರುಣ ಘಟನೆ ಭಾನುವಾರ ಸಂಜೆ ಮಲ್ಲೇಶ್ವರಂನಲ್ಲಿ ನಡೆದಿದೆ.
ಇಂದು ಸಂಜೆ 4 ಗಂಟೆಯ ಸುಮಾರಿಗೆ ಮಲ್ಲೇಶ್ವರಂನಲ್ಲಿರುವ ಬಿಬಿಎಂಪಿ ಆಟದ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಸಾವನ್ನಪ್ಪಿದ್ದಾರೆ. ಮೃತ ಬಾಲಕನನ್ನು ನಿರಂಜನ್ ಎಂದು ಗುರುತಿಸಲಾಗಿದೆ.
ವಿಜಯಕುಮಾರ್ ಮತ್ತು ಪ್ರಿಯಾ ದಂಪತಿಯ ಪುತ್ರ ನಿರಂಜನ್, ಆಟ ಆಡಲು ಮೈದಾನದ ಗೇಟ್ ಓಪನ್ ಮಾಡುತ್ತಿದ್ದಂತೆ ಗೇಟ್ ಬಾಲಕನ ಮೇಲೆಯೇ ಬಿದ್ದಿದೆ. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಕೂಡಲೇ ಸ್ಥಳೀಯರು ಬಾಲಕನನ್ನು ಕೆ ಸಿ ಜನರಲ್ ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ.
ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಬಾಲಕ ಕೊನೆಯುಸಿರೆಳೆದಿದ್ದಾರೆ. ಮೃತ ನಿರಂಜನ್ ಮಲ್ಲೆಶ್ವರಂನ ಬಿಬಿಎಂಪಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಎನ್ನಲಾಗಿದೆ.
ನಿರಂಜನ್ ತಂದೆ ವಿಜಯಕುಮಾರ್ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಮಲ್ಲೇಶ್ವರನ ಪೈಪ್ ಲೈನ್ನಲ್ಲಿ ಈ ಕುಟುಂಬ ವಾಸವಾಗಿತ್ತು. ಘಟನೆ ಬಳಿಕ ಸ್ಥಳಕ್ಕೆ ಮಲ್ಲೇಶ್ವರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ