ಮಲ್ಲೇಶ್ವರದಲ್ಲಿ ಬಿಬಿಎಂಪಿಗೆ ಸೇರಿದ ರಾಜಾಶಂಕರ್ ಆಟದ ಮೈದಾನದಲ್ಲಿ ಕಬ್ಬಿಣದ ಗೇಟ್ ಮುರಿದು ಬಿದ್ದು ಮೃತಪಟ್ಟ ಬಾಲಕ ನಿರಂಜನ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಘಟನೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಟದ ಮೈದಾನದ ಸಮಸ್ಯೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗುತ್ತಿದ್ದು, ಒಂದು ವಾರದೊಳಗೆ ವರದಿಯನ್ನು ಸಲ್ಲಿಸಲು ಸೂಚಿಸಲಾಗುತ್ತದೆ. ವರದಿ ಆಧರಿಸಿ ವಾರ್ಡ್ ಅಧಿಕಾರಿಗಳು ಅಥವಾ ಸಂಬಂಧಪಟ್ಟ ಗುತ್ತಿಗೆದಾರರು ಅಥವಾ ಏಜೆನ್ಸಿಗಳು ಆಟದ ಮೈದಾನಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಪವಿತ್ರಾ ಗೌಡ ಹಾಗೂ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕ್ರಮವಾಗಿ ಸೆಪ್ಟೆಂಬರ್ 25 ಮತ್ತು ಸೆಪ್ಟೆಂಬರ್ 27ಕ್ಕೆ ಮುಂದೂಡಿಕೆಯಾಗಿದೆ. ಇದೇ ಪ್ರಕರಣದ 15, 16 ಮತ್ತು 17 ನೇ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಆರೋಪಿ ನಿಖಿಲ್ ನಾಯ್ಕ್, ಕೇಶವಮೂರ್ತಿ, ಕಾರ್ತಿಕ್ ಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ರೇಣುಕಾಸ್ವಾಮಿ ಹತ್ಯೆ ಕೇಸಿನಲ್ಲಿ ಪ್ರಮುಖ ಆರೋಪಿಗಳಿಂದ ಹಣದ ಆಮಿಷಕ್ಕೆ ಒಳಗಾಗಿ ಶವ ಸಾಗಿಸುವಾಗ, ಪೊಲೀಸರಿಗೆ ಶರಣಾಗುವಲ್ಲಿ ಮಾತ್ರ ಇವರ ಪಾತ್ರವಿತ್ತು, ಹತ್ಯೆಗೂ ಇವರಿಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಹೇಳಲಾಗಿತ್ತು.
ಬೆಂಗಳೂರು ನಗರಕ್ಕೆ ಕಾವೇರಿ ನೀರಿನ ಸಮಸ್ಯೆ ಎದುರಾಗುವುದನ್ನು ತಪ್ಪಿಸಲು ವಿಜಯದಶಮಿ ವೇಳೆಗೆ ಕಾವೇರಿ 5 ನೇ ಹಂತದ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ತೊರೆಕಾಡನಹಳ್ಳಿಯಲ್ಲಿ ಬೆಂಗಳೂರಿಗೆ ಕಾವೇರಿ ನೀರು ಪೂರೈಸುವ ಐದನೆ ಹಂತದ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಜಲಸಂಪನ್ಮೂಲ ಸಚಿವರು, ಆರ್‌ಆರ್ ನಗರ, ಕೆಂಗೇರಿ, ಮಹಾದೇವಪುರ, ಬ್ಯಾಟರಾಯನಪುರ ಸೇರಿದಂತೆ ನಗರ ವ್ಯಾಪ್ತಿಯ 110 ಹಳ್ಳಿಗಳಿಗೆ ಇಲ್ಲಿಂದ ನೀರು ಪೂರೈಕೆಯಾಗಲಿದೆ ಎಂದು ತಿಳಿಸಿದ್ದು, ಶೀಘ್ರದಲ್ಲೇ ಕಾವೇರಿ ನೀರಿನ ದರ ಏರಿಕೆ ಮಾಡಲಾಗುವುದು, ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ.
ಬೆಂಗಳೂರು ವೈಯಾಲಿಕಾವಲ್ ನಿವಾಸಿ ಮಹಾಲಕ್ಷ್ಮೀ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಹಂತಕ ಹೊರ ರಾಜ್ಯದವನು ಎಂಬ ಮಾಹಿತಿ ಲಭ್ಯವಾಗಿದೆ. ಆತ ಬೆಂಗಳೂರಿನಲ್ಲಿ ವಾಸವಾಗಿದ್ದ ಎಂಬುವುದು ತಿಳಿದುಬಂದಿದ್ದು, ಶಂಕಿತನ ಬಗ್ಗೆ ಈ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಯಾನಂದ, ಆರೋಪಿಯನ್ನು ಶೀಘ್ರವೇ ಬಂಧಿಸುತ್ತೇವೆ ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಪ್ರಮುಖ ಆರೋಪಿಯನ್ನು ಗುರುತಿಸಿ ಆತನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದರು.
ಕರ್ನಾಟಕದಲ್ಲಿ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಿದ್ದು, ರಾಜ್ಯಪಾಲರು ಪ್ರತಿನಿತ್ಯ ಸರ್ಕಾರದಿಂದ ಮಾಹಿತಿ ಪಡೆದ ಉದಾಹರಣೆಗಳಿಲ್ಲ ಎಲ್ಲದಕ್ಕೂ ಉತ್ತರಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ. ರಾಜ್ಯಪಾಲರು ಅತ್ಯಂತ ಜವಾಬ್ದಾರಿಯುತ ಮತ್ತು ಗೌರವಾನ್ವಿತ ಸ್ಥಾನವನ್ನು ಹೊಂದಿದ್ದಾರೆ. ಮೊದಲ ಬಾರಿಗೆ ರಾಜ್ಯಪಾಲರು ಸರ್ಕಾರದ ದೈನಂದಿನ ಆಡಳಿತದ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ದೈನಂದಿನ ಆಡಳಿತವನ್ನು ನಿರ್ವಹಿಸುವ ಅಧಿಕಾರ ಮುಖ್ಯಮಂತ್ರಿ ಮತ್ತು ಸರ್ಕಾರಕ್ಕೆ ಇದೆ. ಆದರೆ ರಾಜ್ಯಪಾಲರು ಮಾಹಿತಿ ಕೇಳುತ್ತಿರುವುದು ಅಥವಾ ಮಧ್ಯಪ್ರವೇಶಿಸುತ್ತಿರುವುದು ಇದೇ ಮೊದಲು. ಚುನಾಯಿತ ಮುಖ್ಯಮಂತ್ರಿಗೆ ರಾಜ್ಯಪಾಲರು ಏಕಾಏಕಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು ತಪ್ಪು ಮುಖ್ಯಮಂತ್ರಿಗೆ ಒಂದು ಮಾನದಂಡ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಇನ್ನೊಂದು ಮಾನದಂಡ ಇರಬಾರದು. ಒಬ್ಬರಿಗೆ ನೋಟಿಸ್ ನೀಡಿದರೆ ಮತ್ತೊಬ್ಬರಿಗೂ ನೀಡಲಿ, ಈ ಬಗ್ಗೆ ರಾಜ್ಯಪಾಲರನ್ನು ನಾವೂ ಸಹ ಪ್ರಶ್ನಿಸಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದಾರೆ. ಇದೇ ವೇಳೆ, ಮುಡಾ ಹಗರಣದ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ತೀರ್ಪು ನಾಳೆ ಪ್ರಕಟವಾಗಲಿದೆ.
Advertisement