ರಾಜ್ಯದ ಮೊದಲ ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ: 2030ಕ್ಕೆ 60,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ

2016ರಲ್ಲಿ ಈ ಸ್ಥಾವರ ಸ್ಥಾಪನೆಗೆ ಮುಖ್ಯಮಂತ್ರಿಯಾಗಿ ನಾನೇ ಅಡಿಗಲ್ಲು ಹಾಕಿದ್ದೆ. ಆಗ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದರು. ಕೆ.ಜೆ.ಜಾರ್ಜ್ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Updated on

ಬೆಂಗಳೂರು: ಯಲಹಂಕ ಯೋಜನಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ರಾಜ್ಯದ ಮೊದಲ ನೈಸರ್ಗಿಕ ಅನಿಲ ಆಧಾರಿತ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಮಂಗಳವಾರ ಲೋಕಾರ್ಪಣೆಗೊಳಿಸಿದರು.

ವಿದ್ಯುತ್ ಸ್ಥಾವರನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಸ್ಥಾವರ ಉದ್ಘಾಟನೆ ಮೂಲಕ ಭವಿಷ್ಯದ ಬೇಡಿಕೆಗೆ ಅಗತ್ಯ ವಿದ್ಯುತ್ ಉತ್ಪಾದನೆಯತ್ತ ಮಹತ್ವದ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದರು. ಇದೇ ವೇಳೆ ರಾಜ್ಯ ವಿದ್ಯುತ್ ಸ್ವತಂತ್ರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

2016ರಲ್ಲಿ ಈ ಸ್ಥಾವರ ಸ್ಥಾಪನೆಗೆ ಮುಖ್ಯಮಂತ್ರಿಯಾಗಿ ನಾನೇ ಅಡಿಗಲ್ಲು ಹಾಕಿದ್ದೆ. ಆಗ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದರು. ಕೆ.ಜೆ.ಜಾರ್ಜ್ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದರು. ಇದೀಗ 8 ವರ್ಷಗಳ ಬಳಿಕ ಮುಖ್ಯಮಂತ್ರಿಯಾಗಿ ಸ್ಥಾವರ ಲೋಕಾರ್ಪಣೆ ಮಾಡಿದ್ದೇನೆ. ವಿದ್ಯುತ್‌ನಲ್ಲಿ ಸ್ವಾವಲಂಬನೆ ಸಾಧ್ಯವಾಗದಿದ್ದರೆ ಆರ್ಥಿಕ ಪ್ರಗತಿ ಸಾಧ್ಯವಿಲ್ಲ. ವಾಣಿಜ್ಯ, ಕೃಷಿ, ಗೃಹ ಬಳಕೆಗೆ ವಿದ್ಯುತ್ ಅನಿವಾರ್ಯವಾಗಿದೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸದಿದ್ದಲ್ಲಿ ಜಿಡಿಪಿ ಬೆಳವಣಿಗೆಯೂ ಆಗುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಗುಣಮಟ್ಟದ ವಿದ್ಯುತ್ ಪೂರೈಕೆ ಜೊತೆಗೆ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಆದ್ಯತೆ ನೀಡುತ್ತದೆ.

ರಾಜ್ಯದಲ್ಲಿ ಬೇಸಿಗೆಯಲ್ಲಿ 16 ರಿಂದ 17 ಸಾವಿರ ಮೆಗಾವ್ಯಾಟ್ ಮತ್ತು ಮಳೆಗಾಲದಲ್ಲಿ 15 ರಿಂದ 16 ಸಾವಿರ ಮೆಗಾವ್ಯಾಟ್ ಯೂನಿಟ್ ವಿದ್ಯುತ್ ಬೇಡಿಕೆ ಇದೆ. ಕಳೆದ ವರ್ಷ ತೀವ್ರ ಬರಗಾಲವಿದ್ದರೂ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆದರೂ ಭವಿಷ್ಯದ ಬೇಡಿಕೆಯನ್ನು ಮುಂದಿಟ್ಟುಕೊಂಡು 2030ರ ವೇಳೆಗೆ ಈಗಿರುವ 34,639 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯವನ್ನು 60 ಸಾವಿರ ಮೆಗಾವ್ಯಾಟ್‌ಗೆ ಹೆಚ್ಚಿಸಲು ಬಜೆಟ್‌ನಲ್ಲಿ ಘೋಷಿಸಿದ್ದು, ಅದಕ್ಕೆ ತಕ್ಕಂತೆ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ
ಸಿದ್ದರಾಮಯ್ಯ ಪತ್ನಿಯೇ ಫಲಾನುಭವಿಯಾಗಿರುವುದರಿಂದ ತನಿಖೆ ಅಗತ್ಯ ಇದೆ: ಹೈಕೋರ್ಟ್ ತೀರ್ಪಿನ ಸಂಪೂರ್ಣ ವಿವರ ಇಲ್ಲಿದೆ

ಛತ್ತೀಸ್‌ಗಡದ ಗೋದ್ನಾದಲ್ಲಿ 1600 ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರ, ಶರಾವತಿಯಲ್ಲಿ 2,000 ಮೆಗಾವ್ಯಾಟ್, ವಾರಾಹಿಯಲ್ಲಿ 1500 ಮೆಗಾವ್ಯಾಟ್ ಪಂಪ್ಡ್ ಸ್ಟೋರೇಜ್ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರ ಜೊತೆಗೆ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೂ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಯಲಹಂಕ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರದ ಎಲ್ಲಾ ಉದ್ಯೋಗಿಗಳಿಗೆ 5000 ರೂ.ಬೋನಸ್ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದರು.

ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ರಾಜ್ಯದ ಜನತೆ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ನಾಗರಿಕರಿಗೆ ಈ ಅನಿಲ ವಿದ್ಯುತ್ ಸ್ಥಾವರ ನಮ್ಮ ಸರಕಾರದ ಕೊಡಗೆ. ನಾವು ಅಧಿಕಾರದಲ್ಲಿದ್ದಾಗಲೆಲ್ಲಾ ರಾಜ್ಯ ನೆನಪಿಟ್ಟುಕೊಳ್ಳುವಂಥ ಕೊಡುಗೆ ಕೊಟ್ಟಿದ್ದೇವೆ, ಮುಂದೆಯೂ ಕೊಡುತ್ತೇವೆ. ಹಿಂದೆ ನಾವು ಅಧಿಕಾರದಲ್ಲಿದ್ದಾಗಲೇ ಈ ಘಟಕದ ಶಂಕುಸ್ಥಾಪನೆ ನೆರವೇರಿಸಿದ್ದೆವು. ಈಗ ನಮ್ಮ ಸರಕಾರವೇ ಅದನ್ನು ಲೋಕಾರ್ಪಣೆ ಮಾಡುತ್ತಿದೆ. ಹಿಂದೆ ಇದೇ ಸ್ಥಳದಲ್ಲಿದ್ದ ಡೀಸೆಲ್ ವಿದ್ಯುತ್ ಘಟಕ ಸ್ಥಗಿತಗೊಳಿಸಿ, ಅತ್ಯಾಧುನಿಕ ತಂತ್ರಜ್ಞಾನದ ಅನಿಲ ಸ್ಥಾವರ ಸ್ಥಾಪಿಸಲಾಗಿದೆ. ನಾನು ಇಂಧನ ಸಚಿವನಾಗಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಮುಂದಿಟ್ಟ ಆಲೋಚನೆಯನ್ನೂ ಕೂಡಲೇ ಕಾರ್ಯಗತಗೊಳಿಸಲು ಪ್ರಯತ್ನಿಸಿ ಪ್ರಾರಂಭಿಸಿದ ಕೆಲಸ ಇದು ಸಾಕಾರಗೊಂಡಿರುವುದು ಸಂತಸದ ವಿಷಯ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ
ಸಂಚಾರ ನಿಯಮ ಉಲ್ಲಂಘಿಸುವವರ ಪರವಾನಿಗೆ ರದ್ದು ಮಾಡಿ: ಸಾರಿಗೆ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಪಾವಗಡ ಸೋಲಾರ್ ಪಾರ್ಕ್ ಮಾಡಿದ್ದು ಇತಿಹಾಸ, ಭೂಮಿಯನ್ನು ಲೀಸ್ ಪಡೆದು ಯೋಜನೆ ಮಾಡುತ್ತಿರುವುದು ಜಗತ್ತಿಗೆ ಮಾದರಿ. ಕೃಷಿ ಪಂಪ್‍ಸೆಟ್‍ಗಳಿಗೆ ಸೋಲಾರ್ ವಿದ್ಯುತ್ ಪೂರೈಸುವ ಯೋಜನೆಗೆ ಅಡಿಪಾಯ ಹಾಕಿದ್ದೇ ನಾವು. ಅದನ್ನು ಈಗ ಕೇಂದ್ರ ಸರಕಾರ ಕುಸುಮ್ ಎಂಬ ಹೆಸರಿಟ್ಟು ಜಾರಿಗೊಳಿಸಿದೆ. ಜಾರ್ಜ್ ಅವರು ಈ ಎಲ್ಲ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವರು ಎಂದು ತಿಳಿಸಿದರು.

ಮೇಕೆದಾಟು ಯೋಜನೆ ನನ್ನ ಕನಸು. ಇದನ್ನು ಅನುಷ್ಠಾನಗೊಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದ್ದೇನೆ. ಈ ಯೋಜನೆ ಪೂರ್ಣಗೊಂಡರೆ ಅದರಿಂದ 400 ಮೆಗಾವ್ಯಾಟ್ ಉತ್ಪಾದನೆ ಸಾಧ್ಯ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಸಿಎನ್‌ಜಿ ಆಧಾರಿತ ವಿದ್ಯುತ್ ಉತ್ಪಾದನಾ ಘಟಕದ ಬಗ್ಗೆಯೂ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಕ್ಕೆ ಜರ್ಮನ್ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.

ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, 2500 ಕೋಟಿ ಬಂಡವಾಳ ಹೂಡಿದ್ದರೂ ಈ ಯೋಜನೆ ಮುಚ್ಚಲ್ಪಟ್ಟಿತ್ತು. ಸರ್ಕಾರದ ಇಚ್ಛಾಶಕ್ತಿಯಿಂದ ಇದನ್ನು ಅನುಷ್ಠಾನ ಮಾಡಿದ್ದೇವೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇಲ್ಲಿ ಹೆಚ್ಚು ಶಬ್ದಮಾಲಿನ್ಯ ಆಗದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com