
ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣದ ಆರೋಪಿಗಳಾಗಿರುವ ಅಬ್ದುಲ್ ಮತೀನ್ ಅಹ್ಮದ್ ತಾಹಾ ಹಾಗೂ ಮಸ್ಸಾವೀರ್ ಹುಸೇನ್ ಶಾಜಿಬ್ ವಿರುದ್ಧ ರಾಷ್ಟ್ರೀಯ ತನಿಖಾ ದಳ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಶಿವಮೊಗ್ಗ ಮಾದರಿಯ ಇಸಿಸ್ ಸಂಚು ಪ್ರಕರಣದಲ್ಲಿಯೂ ಇಬ್ಬರ ಕೈವಾಡ ಇರುವ ಕುರಿತು ಚಾರ್ಜ್ ಶೀಟ್'ನಲ್ಲಿ ತಿಳಿಸಿದೆ.
ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಈ ಮೂಲಕ ಶಿವಮೊಗ್ಗ ಮಾದರಿ ಪ್ರಕರಣದ ಆರೋಪಿಗಳ ಪಟ್ಟಿ ಹತ್ತಕ್ಕೇರಿದಂತಾಗಿದೆ.
ಆರೋಪಿಗಳಾದ ಅಬ್ದುಲ್ ಮತೀನ್ ಅಹ್ಮದ್ ತಾಹಾ ಮತ್ತು ಮಸ್ಸಾವೀರ್ ಹುಸೇನ್ ಮುಸ್ಲಿಂ ಯುವಕರನ್ನು ಮೂಲಭೂತವಾದಿ ಚಟುವಟಿಕೆಗಳಿಗೆ ಸೆಳೆಯುತ್ತಿದ್ದರಲ್ಲದೆ, ಪ್ರಚೋದನೆ ನೀಡುತ್ತಿದ್ದರು. ಭಯೋತ್ಪಾದಕರಿಗೆ ಹಣಕಾಸು ನೆರವನ್ನೂ ನೀಡುತ್ತಿದ್ದರು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಮೂಲದವರಾಗಿದ್ದ ಆರೋಪಿಗಳು, ಇಸಿಸ್‌ನ ವಿಚಾರಧಾರೆಗಳಿಂದ ಪ್ರೇರಿತರಾಗಿದ್ದು, ಮುಸ್ಲಿಂ ಯುವಕರನ್ನ ಇಸಿಸ್‌ನತ್ತ ಸೆಳೆಯುತ್ತಿದ್ದರು. ಭಾರತದಲ್ಲಿ ಭಯೋತ್ಪಾದನೆ ಹರಡಲು ಮತ್ತು ದೇಶದಲ್ಲಿ ಭದ್ರತೆ ಸೃಷ್ಟಿಸುವ ಭಾಗವಾಗಿ ಮುಸ್ಲಿಂ ಯುವಕರ ನೇಮಕ, ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹ, ಭಾರತೀಯ ರಾಷ್ಟ್ರೀಯ ಧ್ವಜವನ್ನು ಸುಡುವುದು, ಪ್ರಯೋಗ ಸ್ಫೋಟಗಳು ಮತ್ತಿತರ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು ಎಂದು ಎನ್ಐಎ ತಿಳಿಸಿದೆ.
Advertisement