ಅಂಗನವಾಡಿ ಶಿಕ್ಷಕರಿಗೆ ಉರ್ದು ಕಡ್ಡಾಯ: ಭಾರೀ ವಿರೋಧ, ವಿವಾದ ಸೃಷ್ಟಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಇತ್ತೀಚಿನ ಅಧಿಸೂಚನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅಂಗನವಾಡಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಕೋರಿತ್ತು. ಆ ಪ್ರದೇಶದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಉರ್ದು ಕಡ್ಡಾಯವಾಗಿ ತಿಳಿದಿರಬೇಕು ಎಂದು ಹೇಳಲಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಅಂಗನವಾಡಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರದ ಆದೇಶ ವಿವಾದವನ್ನು ಸೃಷ್ಟಿಸಿದೆ.

ಸರ್ಕಾರದ ನಡೆಗೆ ಕನ್ನಡ ಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಇತ್ತೀಚಿನ ಅಧಿಸೂಚನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅಂಗನವಾಡಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಕೋರಿತ್ತು. ಆ ಪ್ರದೇಶದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಉರ್ದು ಕಡ್ಡಾಯವಾಗಿ ತಿಳಿದಿರಬೇಕು ಎಂದು ಹೇಳಲಾಗಿತ್ತು.

ಉರ್ದು ಭಾಷೆ ಕಡ್ಡಾಯಗೊಳಿಸಿರುವ ಸರ್ಕಾರ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕನ್ನಡ ನಾಡಿನಲ್ಲಿ ಉರ್ದು ಹೇರಿಕೆ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಅಂಗನವಾಡಿ ಶಿಕ್ಷಕರ ಹುದ್ದೆಗೆ ನೇಮಕಗೊಳ್ಳಲು ಉರ್ದು ಕಡ್ಡಾಯವಾಗಿ ಬರಬೇಕಂತೆ, ಹೀಗೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಸಿಎಂ ಸಿದ್ದರಾಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೆ, ಮೂಡಿಗೆರೆ ಇರುವುದು ಕರ್ನಾಟಕದಲ್ಲಿ, ಕರ್ನಾಟಕದಲ್ಲಿ ಕನ್ನಡ ಅಧಿಕೃತ ಭಾಷೆ, ಅಂತಹದರಲ್ಲಿ ಉರ್ದು ಕಡ್ಡಾಯ ಏಕೆ..?? ಉತ್ತರಿಸಿ ಎಂದು ಕೇಳಿದೆ.

ಸಾಂದರ್ಭಿಕ ಚಿತ್ರ
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಳ: ಸಿಂಗಾಪುರ ಮಾದರಿ ಅಳವಡಿಸಲು ತೇಜಸ್ವಿ ಸೂರ್ಯ ಸಲಹೆ

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನಳಿನ್ ಕುಮಾರ್ ಕಟೀಲ್ ಅವರು, ಅಂಗನವಾಡಿ ಶಿಕ್ಷಕಿ ಕೆಲಸ ಸಿಗಬೇಕಾದರೆ ಉರ್ದು ಭಾಷೆ ಗೊತ್ತಿರಬೇಕು ಎಂಬ ರಾಜ್ಯದ ಕಾಂಗ್ರೆಸ್ ಸರಕಾರದ ಘೋಷಣೆ ಖಂಡನೀಯ. ಅಂಗನವಾಡಿ ಶಿಕ್ಷಕರ ನೇಮಕಾತಿಯಲ್ಲಿಯೂ ಮುಸ್ಲಿಂ ಸಮುದಾಯವನ್ನು ಒಲೈಸುವ, ಅವರಿಗೆ ಮಾತ್ರ ಕೆಲಸ ಸಿಗುವಂತೆ ದಾರಿ ಮಾಡಿಕೊಡುವ ಹಿಂಬಾಗಿಲ ಯತ್ನ ಮತ್ತೊಮ್ಮೆ ಕಾಂಗ್ರೆಸ್ಸಿಗರ ಕುಟಿಲ ನೀತಿ ಎತ್ತಿ ತೋರಿಸುತ್ತಿದೆ. ಅಸಹ್ಯ ರಾಜಕೀಯದ ಪರಮಾವಧಿ ಎಂದು ಕಿಡಿಕಾರಿದ್ದಾರೆ.

ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದ ತೇಜಸ್ವಿ ಸೂರ್ಯ ಅವರು ಪತ್ರ ಬರೆದಿದ್ದು, ಕನ್ನಡಿಗರ ಮೇಲೆ ಉದ್ದೇಶಪೂರ್ವಕ ಉರ್ದು ಹೇರಿಕೆಯ ರಾಜ್ಯ ಸರ್ಕಾರದ ಕ್ರಮವು, ಟಿಪ್ಪು & ಹೈದರಾಲಿ ಮಾದರಿಯ ಕನ್ನಡ ದಮನನೀತಿಯ ಮುಂದುವರಿದ ಭಾಗವಾಗಿದೆ. ಟಿಪ್ಪುವನ್ನು ಪರಮ ಆದರ್ಶವನ್ನಾಗಿ ಅಂಗೀಕರಿಸಿರುವ, ಕಳೆದ 1 ವರ್ಷದಿಂದ ಒಂದು ಸಮುದಾಯದ ಅತಿಯಾದ ತುಷ್ಟೀಕರಣ ನೀತಿಯನ್ನು ಆಡಳಿತದ ಪರಮ ಧ್ಯೇಯವನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರಗಳು ಕನ್ನಡದ ಅಸ್ಮಿತೆಗೆ, ಕನ್ನಡಿಗರಿಗೆ ಮಾಡುತ್ತಿರುವ ಅತೀ ದೊಡ್ಡ ಅಪಮಾನ.

ಅಂಗನವಾಡಿ ಹುದ್ದೆಗಳಿಗೆ ಕನ್ನಡದ ಬದಲು, ಉರ್ದು ಹೇರಿಕೆಯನ್ನು ಕಡ್ಡಾಯಗೊಳಿಸುವ ಮೂಲಕ ಕನ್ನಡಕ್ಕೆ ಅಪಮಾನ ಮಾಡುವ ಕಾರ್ಯಕ್ಕೆ 'ಕೈ' ಹಾಕಿರುವುದು ಅಸಹ್ಯದ ಪರಮಾವಧಿ. ರಾಜಕೀಯ, ತುಷ್ಟೀಕರಣದ ಕಾರಣಗಳಿಗಾಗಿ ಕನ್ನಡದ ಸಾರ್ವಭೌಮತ್ವಕ್ಕೆ, ಅಸ್ಮಿತೆಗೆ ಉದ್ದೇಶಪೂರ್ವಕ ಅಪಮಾನವನ್ನು ಕನ್ನಡಿಗರು ಸಹಿಸಲು ಸಾಧ್ಯವಿಲ್ಲ.ಇಂತಹ ಪ್ರಮಾದಗಳಿಗೆ ರಾಜ್ಯ ಸರ್ಕಾರ ಅವಕಾಶ ನೀಡದೇ, ಸಂಬಂಧಪಟ್ಟವರನ್ನು ಕೂಡಲೇ ಅಮಾನತ್ತುಗೊಳಿಸಿ, ಕನ್ನಡದ ಅಸ್ಮಿತೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com