ಜಿಲ್ಲಾಸ್ಪತ್ರೆಗಳಲ್ಲಿ CT-MRI ಸ್ಕ್ಯಾನಿಂಗ್‌ ಸೇವೆಗೆ ಅನುದಾನದ ಕೊರತೆಯಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳಿಗೆ ಅಗತ್ಯವಿರುವ 63.49 ಕೋಟಿ ರೂ. ಅನುದಾನ ಆರೋಗ್ಯ ಇಲಾಖೆಯ ಬಳಿ ಲಭ್ಯವಿದ್ದು, ಯಾವುದೇ ರೀತಿಯ ಅನುದಾನದ ಕೊರತೆಯಾಗಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯ ಸರ್ಕಾರ ಕಳೆದ ಆರು ತಿಂಗಳಿನಿಂದ ಬಾಕಿ ಬಿಲ್‌ ಪಾವತಿಸದ ಕಾರಣ ರಾಜ್ಯದ ವಿವಿಧ ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್‌ ಹಾಗೂ ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳು ಸ್ಥಗಿತಗೊಂಡಿವೆ ಎಂಬ ವರದಿಯನ್ನು ಆರೋಗ್ಯ ಇಲಾಖೆ ನಿರಾಕರಿಸಿದೆ.

ರಾಜ್ಯದಲ್ಲಿ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳಿಗೆ ಅನುದಾನದ ಕೊರತೆಯಿದೆ ಎಂಬ ಮಾಧ್ಯಮ ವರದಿಗಳು ಆಧಾರ ರಹಿತವಾಗಿದೆ. ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳಿಗೆ ಅಗತ್ಯವಿರುವ 63.49 ಕೋಟಿ ರೂ. ಅನುದಾನ ಆರೋಗ್ಯ ಇಲಾಖೆಯ ಬಳಿ ಲಭ್ಯವಿದ್ದು, ಯಾವುದೇ ರೀತಿಯ ಅನುದಾನದ ಕೊರತೆಯಾಗಿಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.

ರಾಜ್ಯದಲ್ಲಿ ಒಟ್ಟು 3 ಸಂಸ್ಥೆಗಳು ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳನ್ನು ಒದಗಿಸುತ್ತಿವೆ. ಅದರಲ್ಲಿ ಕೃಷ್ಣ ಡಯಾಗ್ನೋಸ್ಟಿಕ್ ಸಂಸ್ಥೆಯು ಬಿಲ್ ಪಾವತಿಗಾಗಿ ನೀಡಿದ ದಾಖಲಾತಿಗಳಲ್ಲಿ ಮಾಹಿತಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ವಿವರಣೆ ಕೇಳಲಾಗಿದೆ. ಜೂನ್ & ಜುಲೈ 2 ತಿಂಗಳುಗಳ ಬಿಲ್ ಪಾವತಿಯಲ್ಲಿ ಮಾತ್ರವೇ ವಿಳಂಬವಾಗಿದೆ. ಉಳಿದ ಸಂಸ್ಥೆಗಳ ಬಿಲ್ ಪಾವತಿಯಲ್ಲಿ ಯಾವುದೇ ಬಾಕಿ ಇರುವುದಿಲ್ಲ. ಇಲಾಖೆ ಕೇಳಿರುವ ಪೂರಕ ಮಾಹಿತಿಯನ್ನ ಕೃಷ್ಣ ಡಯಾಗ್ನೋಸ್ಟಿಕ್ ಸಂಸ್ಥೆ ಒದಗಿಸಿದ ತಕ್ಷಣ ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಈ ಸಂಸ್ಥೆಯಿಂದ ಆಗಿರುವ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳ ವ್ಯತ್ಯಯವನ್ನು ಸರಿಪಡಿಸಲು ಬದಲಿ ಕ್ರಮವನ್ನೂ ಈಗಾಗಲೇ ಕೈಗೊಳ್ಳಲಾಗಿದೆ. ಈ ಕೂಡಲೇ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳನ್ನು ಪುನರಾರಂಭಿಸಲು ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ವ್ಯತ್ಯಯ ಕಂಡುಬಂದಲ್ಲಿ ಕೃಷ್ಣ ಡಯಾಗ್ನೋಸ್ಟಿಕ್ ಸಂಸ್ಥೆಯ ವಿರುದ್ಧ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ನಡುವೆ ಮಾಧ್ಯಮಗಳಲ್ಲಿ ವರದಿ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ರಾಜ್ಯದಲ್ಲಿ 14 ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗೆ ಅನುದಾನದ ಕೊರತೆ ಇಲ್ಲ ಎಂದು ಹೇಳಿದ್ದು, ಸೇವೆಗಳು ಸ್ಥಗಿತಗೊಂಡಿವೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ನಕಲಿ ಕ್ಲಿನಿಕ್ ಗಳ ವಿರುದ್ಧ ಕಠಿಣ ಕ್ರಮ: ದಿನೇಶ್ ಗುಂಡೂರಾವ್

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸರ್ಕಾರದ ಹಣ ಎಂದರೆ ಅದು ಜನರ ಹಣ. ಅದರ ದುರುಪಯೋಗಕ್ಕೆ ನಾವು ಅವಕಾಶ ನೀಡುವುದಿಲ್ಲ. ಬಿಜೆಪಿ ಆಡಳಿತದಲ್ಲಿ ನಡೆದಂತೆ ಯಾವುದೇ ಖಾಸಗಿ ಸಂಸ್ಥೆಗಳು ನಮ್ಮ ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ. ಆದರೆ, ನಮ್ಮ ಸರ್ಕಾರ ನಾಡಿನ ಜನತೆಗಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಮೇಲೆ ಕಣ್ಣು ಹಾಕಿರುವ ಬಿಜೆಪಿ ನಾಯಕರಿಗೆ ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲ ಎಂಬ ಸುಳ್ಳನ್ನು ಹರಡುವುದೇ ದೊಡ್ಡ ಗುರಿಯಾಗಿದೆ. ಒಂದು ಸುದ್ದಿಯ ಹಿಂದಿನ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ನಕಲಿ, ದುರುದ್ದೇಷ ಪೂರಿತ ಸುಳ್ಳು ಸುದ್ದಿಗಳನ್ನು ಹರಡುವುದು ಬಿಜೆಪಿ ನಾಯಕರಿಗೆ ಹೊಸತಲ್ಲ ಬಿಡಿ.

ಸಿಟಿ, ಎಂಆರ್‌ಐ ಸ್ಕ್ಯಾನಿಂಗ್‌ ಸೇವೆ ನೀಡುವ ಸಂಸ್ಥೆಗಳಿಗೆ ಹಣ ಪಾವತಿಸಿಲ್ಲ, ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಜನರಲ್ಲಿ ಆತಂಕ ಹುಟ್ಟುಹಾಕುವ ಬಿಜೆಪಿ ನಾಯಕರಿಗೆ, ಆ ಸಂಸ್ಥೆಗೆ ಏಕೆ ಹಣ ಪಾವತಿ ಮಾಡಿಲ್ಲ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗದೆ ಇರುವುದು ವಿಪರ್ಯಾಸವೇ ಸರಿ. ರಾಜ್ಯದಲ್ಲಿ ಸಿಟಿ ಮತ್ತು ಎಂಆರ್‌ಐ ಸೇವೆಗಳಿಗಾಗಿ ಅಗತ್ಯವಿರುವ 63.49 ಕೋಟಿ ಅನುದಾನ ಆರೋಗ್ಯ ಇಲಾಖೆಯ ಬಳಿ ಲಭ್ಯವಿದ್ದು, ಬಿಲ್ ವಿಳಂಬವಾಗಲು ಆ ಸಂಸ್ಥೆ ನೀಡಿರುವ ದಾಖಲಾತಿಗಳಲ್ಲಿನ ಮಾಹಿತಿ ಕೊರತೆಯೇ ಕಾರಣ. ಆದರೆ, ಇದ್ಯಾವುದು ಬಿಜೆಪಿ ನಾಯಕರಿಗೆ ಬೇಕಿಲ್ಲ. ಅವರಿಗೆ ಸುಳ್ಳು ಸುದ್ದಿ ಹರಡಿ ಜನರನ್ನು ಆತಂಕಕ್ಕೆ ದೂಡುವುದೇ ಮುಖ್ಯವಾಗಿದೆ ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com