
ಬೆಂಗಳೂರು : ಯಾವುದೇ ಕಾರಣಕ್ಕೂ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿರುವ ಬಿ.ವೈ.ವಿಜಯೇಂದ್ರ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಯತ್ನಾಳ್ ಬಣಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ರಾಜಾಧ್ಯಕ್ಷರಾದ ಮೇಲೆ ಹೊಸ ಚೈತನ್ಯ ಬಂದಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಮಾಡುತ್ತಿದ್ದಾರೆ. ಅವರನ್ನು ಅಧ್ಯಕ್ಷ ಸ್ಥಾನದಿಂದ ಹೇಗೆ ಕೆಳಗಿಳಿಸುತ್ತಾರೆ ಎಂಬುದನ್ನು ನಾವು ನೋಡುತ್ತೇವೆ" ಎಂದು ಎಚ್ಚರಿಸಿದರು. ಇಲ್ಲಿಯ ತನಕ ನಾವು ಮಾತನಾಡಬಾರದೆಂದು ಸುಮ್ಮನಿದ್ದೇವೆ. ಆದರೆ ಕೆಲವರು ಪಕ್ಷದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ವರಿಷ್ಠರು. ಅವರನ್ನು ವಿರೋಧ ಮಾಡುತ್ತಿರುವವರು ಇದನ್ನು ಅರ್ಥ ಮಾಡಿಕೊಳ್ಳಬೇಕುʼ ಎಂದರು.
ವಿಜಯೇಂದ್ರ ಅವರೇನು ರೆಡಿಮೇಡ್ ಫುಡ್ ಅಲ್ಲ. ಅವರು ಅಧ್ಯಕ್ಷರಾದ ಮೇಲೆ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸಂಘಟನೆ ಮಾಡ್ತಿದ್ದೇವೆ. ಅವರು ಅಧ್ಯಕ್ಷರಾದ ಮೆಲೆಯೇ ಪಕ್ಷಕ್ಕೆ ಒಂದು ರೀತಿಯಲ್ಲಿ ಬೂಸ್ಟ್ ಸಿಕ್ಕಂತಾಗಿದೆ. ಈಗ ಯಾರಾದರೂ ಅವರ ಬಗ್ಗೆ ಮಾತನಾಡಿದರೆ, ಇಷ್ಟು ದಿನ ಮಾತನಾಡಬಾರದು ಎಂದು ಸುಮ್ಮನೆ ಇದ್ದೆವು. ಆದರೆ, ಇನ್ಮುಂದೆ ಇರುವ ಮಾತೇ ಇಲ್ಲ' ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ವಿಜಯೇಂದ್ರ ಅವರು ಮಾಡಿರುವ ತಪ್ಪೇನು? ಬಿಜೆಪಿ ಹಮ್ಮಿಕೊಂಡಿದ್ದ ಮುಡಾ ಪಾದಯಾತ್ರೆ ಸಕ್ಸಸ್ ಆಗಿದೆ. ಈ ಪಾದಯಾತ್ರೆ ಫೇಲ್ ಆಗಬೇಕು ಎಂದು ಹಲವರು ನಿರೀಕ್ಷಿಸಿದ್ದರು. ಆದರೆ ನಮ್ಮ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ನಡೆಯಬೇಕು. ಆಂತರಿಕವಾಗಿ ಏನೇ ಇದ್ದರೂ ಅದನ್ನು ನಾಲ್ಕು ಗೋಡೆಗಳ ಮಧ್ಯೆ ಮಾತನಾಡಬೇಕು' ಎಂದು ಬುದ್ಧಿವಾದ ಹೇಳಿದ್ದಾರೆ.
ಒಂದು ವೇಳೆ ಅವರು ತಪ್ಪು ಮಾಡಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಕೊಡಬೇಕು. ಹಾದಿಬೀದಿಯಲ್ಲಿ ಮಾತನಾಡುವುದರಿಂದ ಉಪಯೋಗವಿಲ್ಲ. ಒಂದು ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದರೆ ನಾವು ಒಪ್ಪಿಕೊಳ್ಳುತ್ತಿರಲಿಲ್ಲವೇ" ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಪರಿಣಾಮ ಬಿಜೆಪಿ ಪರಿಸ್ಥಿತಿ ಏನಾಯಿತು ಎಂಬುದನ್ನು ನೋಡಿಕೊಳ್ಳಬೇಕು. ಪಕ್ಷ ನಿಷ್ಠೆ ಬಗ್ಗೆ ಮಾತನಾಡುವವರು ಮೈಸೂರು-ಕೊಡುಗು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಪ್ರತ್ಯೇಕವಾಗಿ ಸಭೆ ನಡೆಸುತ್ತಾರೆ ಎಂದರೆ ಏನರ್ಥ ಎಂದು ಪರೋಕ್ಷವಾಗಿ ಮಾಜಿ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದರು.
Advertisement