
ಬೆಂಗಳೂರು: ಅತ್ಯಾಚಾರ, ಜಾತಿ ನಿಂದನೆ ಆರೋಪಕ್ಕೆ ಗುರಿಯಾಗಿರುವ ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ನಿವಾಸದ ಮೇಲೆ ಎಸ್‌ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆಂದು ಶನಿವಾರ ತಿಳಿದುಬಂದಿದೆ.
ವೈಯಾಲಿ ಕಾವಲ್‌ನಲ್ಲಿರುವ ಮುನಿರತ್ನ ಅವರ ನಿವಾಸ ಹಾಗೂ ಕಚೇರಿ ಸೇರಿದಂತೆ 15ಕ್ಕೂ ಹೆಚ್ಚು ಸ್ಥಳಗಳ ಮೇಲೆ ಎಸಿಪಿ ಕವಿತಾ ನೇತೃತ್ವದ ಎಸ್‌ಐಟಿ ತಂಡ ಏಕಕಾಲಕ್ಕೆ ಈ ದಾಳಿ ನಡೆಸಿದೆ.
ಇಂದು ಮುಂಜಾನೆ ವೈಯಾಲಿಕಾವಲ್‌ನಲ್ಲಿರುವ ಮುನಿರತ್ನ ಅವರ ನಿವಾಸ, ಕಚೇರಿ ಸೇರಿದಂತೆ ವಿವಿಧೆಡೆ ಎಫ್ಎಸ್ಎಲ್ ತಂಡದೊಂದಿಗೆ ತೆರಳಿ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಗುತ್ತಿಗೆದಾರ ಚಲುವರಾಜು ಅವರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಮೊದಲು ಮುನಿರತ್ನ ಬಂಧನವಾಗಿತ್ತು. ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಅವರು ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅದಾದ ಮರುದಿನವೇ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು.
ಗುತ್ತಿಗೆದಾರ ಚಲುವರಾಜು ಎಂಬವರು ಶಾಸಕ ಮುನಿರತ್ನ ನನಗೆ ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದಗೆ ದೂರು ನೀಡಿದ್ದರು. ಮತ್ತೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರು ಮುನಿರತ್ನ ತಮ್ಮ ಮೇಲೆ ಅತ್ಯಾಚಾರ ಎಸಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಹನಿಟ್ರ್ಯಾಪ್ ಕೂಡ ಮಾಡಿಸಿದ್ದಾರೆ ಎಂದು ಕಗ್ಗಲಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಳಿಕ ಕಗ್ಗಲಿಪುರ ಠಾಣೆ ಪೊಲೀಸರು ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಈ ನಡುವೆ ಮುನಿರತ್ನ ಅವರ ವಿರುದ್ಧ ಒಂದೊಂದೆ ಪ್ರಕರಣಗಳು ಹೊರ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚಿಸಿತ್ತು. ಇದೀಗ ಸಿಐಡಿಯ ವಿಶೇಷ ತನಿಖಾ ದಳದ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಮುನಿರತ್ನ ಅವರನ್ನು ತಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಈ ನಡುವೆ ಪ್ರಕರಣದ ಬೆನ್ನು ಬಿದ್ದಿರುವ ಎಸ್‌ಐಟಿ ಅಧಿಕಾರಿಗಳು, ಮುನಿರತ್ನ ಅವರ ನಿವಾಸ ಮತ್ತವರ ಸಂಬಂಧಿಕರು, ಸ್ನೇಹಿತರ ಮನೆಗಳ ಮೇಲೂ ದಾಳಿ ನಡೆಸಿ, ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.
Advertisement