ಸರ್ಕಾರದ ನೆರವಿಲ್ಲ, ರಾಜಮನೆತನದ ಪ್ರೋತ್ಸಾಹವಿಲ್ಲ, ಆದರೂ ಪ್ರಸಿದ್ಧ ಈ ಜನಸಾಮಾನ್ಯರ 'ಮಂಗಳೂರು ದಸರಾ'!

1991ರಲ್ಲಿ ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ನವದುರ್ಗೆಯರನ್ನು ಪ್ರತಿಷ್ಠಾಪಿಸುವ ಸಂಪ್ರದಾಯವನ್ನು ಕ್ಷೇತ್ರದಲ್ಲಿ ಆರಂಭಿಸಲಾಯಿತು.
ಕುದ್ರೋಳಿ ಗೋಕರ್ಣನಾಥ ದೇವಾಲಯ
ಕುದ್ರೋಳಿ ಗೋಕರ್ಣನಾಥ ದೇವಾಲಯ
Updated on

ಮಂಗಳೂರು: ರಾಜ್ಯದಲ್ಲಿ ಮೈಸೂರು ದಸರಾ ಎಲ್ಲರ ಗಮನ ಸೆಳೆದರೂ ಕರಾವಳಿ ನಗರ ಮಂಗಳೂರು ತನ್ನದೇ ಆದ ದಸರಾ ಹಬ್ಬ ಆಚರಿಸುತ್ತದೆ. ಕುದ್ರೋಳಿ ಗೋಕರ್ಣನಾಥ ದೇವಾಲಯದಿಂದ ದಸರಾ ಮೆರವಣಿಗೆ, ನವದುರ್ಗೆಯರ ಪ್ರತಿಷ್ಠಾಪನೆ ಮೂಲಕ ಆಕರ್ಷಕವಾಗಿ ದಸರಾ ಆಚರಿಸಲಾಗುತ್ತದೆ. ಈ ವರ್ಷ ಮಂಗಳೂರು ದಸರಾ ಮೆರವಣಿಗೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುತ್ತಾರೆ ಎಂದು ಅಂದಾಜಿಸಲಾಗಿದೆ.

ನವರಾತ್ರಿ ಉತ್ಸವದಲ್ಲಿ 12 ಲಕ್ಷ ಜನರು ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಮೈಸೂರು ದಸರಾದಂತೆ ಇಲ್ಲಿಗೂ ಅಷ್ಟೇ ಸಂಖ್ಯೆಯ ಜನ ಆಗಮಿಸುತ್ತಾರೆ. ಆದರೆ, ಮಂಗಳೂರು ದಸರಾಕ್ಕೆ ಮೈಸೂರಿನಂತೆ ಸರಕಾರ ಅಥವಾ ರಾಜಮನೆತನದ ನೆರವಿಲ್ಲ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.

ದಸರಾದ ಸಂಪೂರ್ಣ ವೆಚ್ಚವನ್ನು ಮಂಗಳೂರಿನ ಭಕ್ತರು ಮತ್ತು ದಾನಿಗಳು ಭರಿಸುತ್ತಾರೆ ಎಂದು ದೇವಸ್ಥಾನದ ಬೆಳವಣಿಗೆಗೆ ಕಾರಣಕರ್ತರಾದ ಹಿರಿಯ ನಾಯಕ ಬಿ ಜನಾರ್ದನ ಪೂಜಾರಿ ಹೇಳಿದರು. ಅಕ್ಟೋಬರ್ 3 ರಂದು ಆರಂಭವಾಗಲಿರುವ ದಸರಾ ಮಹೋತ್ಸವದ ಸಿದ್ಧತೆ ಪರಿಶೀಲಿಸಿ ಮಾತನಾಡಿದ ಪೂಜಾರಿ, ಇದು ಜನ ಸಾಮಾನ್ಯರ ದಸರಾ ಎಂದು ಕರೆಯಲ್ಪಡುತ್ತದೆ. ನಮಗೆ ರಾಜರ ಆಶ್ರಯ ಅಥವಾ ಸರ್ಕಾರದ ಬೆಂಬಲವಿಲ್ಲ. ಎಲ್ಲಾ ಆಚರಣೆಗಳು 13 ದಿನಗಳ ಕಾಲ (ಈ ಬಾರಿ ಏಕಾದಶಿಯ ಕಾರಣ 14 ದಿನ) ನಡೆಯಲಿವೆ ಎಂದು ಅವರು ತಿಳಿಸಿದರು.

ಜನಾರ್ದನ ಪೂಜಾರಿ ಪ್ರಕಾರ, ಬಿಲ್ಲವ ಸಮುದಾಯದ ನಾಯಕ ಸಾಹುಕಾರ್ ಕೊರಗಪ್ಪ ಅವರ ಕಾರಣದಿಂದ ಗೋಕರ್ಣನಾಥ ದೇವಾಲಯ ನಿರ್ಮಾಣವಾಯಿತು. ಹಿಂದೂ ಸಮುದಾಯದ ಮೇಲ್ವರ್ಗದವರು ದೇವಾಲಯ ಪ್ರವೇಶವನ್ನು ನಿರಾಕರಿಸಿದ್ದರಿಂದ ತಮ್ಮ ಸಮುದಾಯಕ್ಕೆ ದೇವಾಲಯ ನಿರ್ಮಾಣಕ್ಕೆ ಅವರು ನಿರ್ಧರಿಸಿದರು. 1912 ರಲ್ಲಿ ಅವರು 19 ನೇ ಶತಮಾನದ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ನಾರಾಯಣ ಗುರುಗಳನ್ನು ಕೇರಳದಿಂದ ಮಂಗಳೂರಿಗೆ ಕರೆತಂದು, ಅವರು ಕೇರಳದಿಂದ ತಂದ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು. ನಾರಾಯಣ ಗುರುಗಳಿಂದ ಕ್ಷೇತ್ರಕ್ಕೆ ‘ಗೋಕರ್ಣನಾಥ’ ಎಂದು ನಾಮಕರಣ ಮಾಡಲಾಗಿದೆ ಎಂದು ಪೂಜಾರಿ ಹೇಳಿದರು.

ಹೀಗೆ ಆರಂಭವಾದ ಗೋಕರ್ಣನಾಥ ದೇವಾಲಯ ಈಗ ಬಿಲ್ಲವರ ವಿಶ್ವ ಪ್ರಸಿದ್ಧ ದೇವಾಲಯವಾಗಿ ಬೆಳೆದು ನಿಂತಿದೆ. ಇಲ್ಲಿನ ಶಿವ ದೇವಾಲಯ ದಕ್ಷಿಣ ಕನ್ನಡ ಮಾತ್ರವಲ್ಲದೇ ಇಡೀ ದಕ್ಷಿಣ ಭಾರತದಲ್ಲಿಯೇ ದೊಡ್ಡದಾಗಿದೆ ಎಂದು ಅವರು ಹೇಳಿದರು.

1991ರಲ್ಲಿ ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ನವದುರ್ಗೆಯರನ್ನು ಪ್ರತಿಷ್ಠಾಪಿಸುವ ಸಂಪ್ರದಾಯವನ್ನು ಕ್ಷೇತ್ರದಲ್ಲಿ ಆರಂಭಿಸಲಾಯಿತು. ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ ನವದುರ್ಗೆಯರ ವಿವಿಧ ಅವತಾರಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಇದು ಕುದ್ರೋಳಿ ದೇವಸ್ಥಾನದ ವಿಶೇಷತೆಯಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತೆ ಮತ್ತು ಸಿದ್ಧಿ ಧಾತ್ರಿ ಇವು ನವದುರ್ಗೆಯ ಅವತಾರಗಳು. ದುರ್ಗೆಯ ಎಲ್ಲಾ ಒಂಬತ್ತು ರೂಪಗಳಿಗೆ ಪೂಜೆ ಸಲ್ಲಿಸುವ ದೇಶದ ಏಕೈಕ ದೇವಾಲಯ ಇದಾಗಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಜ್ಞಾನದ ದೇವತೆ ಶಾರದಾ ದೇವಿಯ ವಿಗ್ರಹ ಕೇಂದ್ರದಲ್ಲಿರುತ್ತದೆ.

ಕುದ್ರೋಳಿ ಗೋಕರ್ಣನಾಥ ದೇವಾಲಯ
ಮೈಸೂರು ದಸರಾ 2024: ಅ.3-11ರವರೆಗೂ ಅರಮನೆಯಲ್ಲಿ ಖಾಸಗಿ ದರ್ಬಾರ್​, ಅ.12ಕ್ಕೆ ಜಂಬೂ ಸವಾರಿ

ಕೊನೆಯ ಮೂರು ದಿನಗಳಲ್ಲಿ ಶಾರದಾ ಮಾತೆಯೊಂದಿಗೆ ನವದುರ್ಗೆಯರ ಆರಾಧನೆ ನಡೆಯುತ್ತದೆ. ಶಾರದ ಮಾತೆಯ ವಿಗ್ರಹವು ದೇಶದಲ್ಲೇ ಅತಿ ದೊಡ್ಡದಾಗಿರುತ್ತದೆ ಎಂದು ದೇವಸ್ಥಾನದ ಅಧಿಕಾರಿ ಪದ್ಮರಾಜ್ ರಾಮಯ್ಯ ಹೇಳಿದರು. ನವರಾತ್ರಿ-ವಿಜಯದಶಮಿಯ ಕೊನೆಯ ದಿನದಂದು, ಭವ್ಯವಾದ ಮೆರವಣಿಗೆಯು ಐದು ಕಿಲೋಮೀಟರ್ ಉದ್ದದ ಸ್ತಬ್ಧಚಿತ್ರಗಳೊಂದಿಗೆ ನಡೆಯುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ ಮತ್ತು ಆಂಧ್ರಪ್ರದೇಶದ ಜಾನಪದ ನೃತ್ಯಗಾರರ 30 ಕ್ಕೂ ಹೆಚ್ಚು ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸುತ್ತವೆ ಎಂದು ಅವರು ತಿಳಿಸಿದರು.

ಜನರ ಸುರಕ್ಷತೆಗಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭದ್ರತಾ ಅಗತ್ಯತೆಗಳ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಮತ್ತು ಮಂಗಳೂರು ನಗರ ಪೊಲೀಸ್ ಕಮೀಷನರ್ ಗೆ ತಿಳಿಸಿದ್ದೇವೆ. ನಮ್ಮ ಸ್ವಯಂಸೇವಕರು ಟ್ರಾಫಿಕ್, ಜನಸಂದಣಿ, ಪಾರ್ಕಿಂಗ್ ಸಮಸ್ಯೆ ನಿಯಂತ್ರಿಸಲು ಪೊಲೀಸರಿಗೆ ಸಹಾಯ ಮಾಡುತ್ತಾರೆ. ವ್ಯಾಪಾರಿಗಳು ಎಲ್ಲಾ ಸಮಯದಲ್ಲೂ ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳಲು ಸಲಹೆ ನೀಡಿದ್ದೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com