ಹನುಮ ಧ್ವಜ ವಿವಾದ: ಫೆಬ್ರವರಿ 9ಕ್ಕೆ ಮಂಡ್ಯ ಬಂದ್'ಗೆ ಕರೆ

ಲೋಕಸಭೆ ಚುನಾವಣೆಗೂ ಮುನ್ನ ಮಂಡ್ಯ ಜಿಲ್ಲೆಯಲ್ಲಿ ಹನುಮಧ್ವಜ ತೆರವುಗೊಳಿಸಿದ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಫೆಬ್ರವರಿ 9ರಂದು ಮಂಡ್ಯ ಬಂದ್'ಗೆ ಕರೆ ನೀಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಡ್ಯ: ಲೋಕಸಭೆ ಚುನಾವಣೆಗೂ ಮುನ್ನ ಮಂಡ್ಯ ಜಿಲ್ಲೆಯಲ್ಲಿ ಹನುಮಧ್ವಜ ತೆರವುಗೊಳಿಸಿದ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಫೆಬ್ರವರಿ 9ರಂದು ಮಂಡ್ಯ ಬಂದ್'ಗೆ ಕರೆ ನೀಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಮುಖಂಡ ಎಂ.ಬಿ.ನಾಗಣ್ಣಗೌಡ ಅವರು, ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯ ಹೋರಾಟ ಪರಂಪರೆಗೆ ಮಸಿ ಬಳಿಯುವ ಪ್ರಯತ್ನ ನಡೆದಿದೆ. ಜನರ ಶಾಂತಿ ಮತ್ತು ನೆಮ್ಮದಿ ಕೆಡಿಸುತ್ತಿರುವ ಶಕ್ತಿಗಳ ವಿರುದ್ಧ ಹೋರಾಡುವುದು ಅನಿವಾರ್ಯವಾಗಿದೆ. ಸಮಾನ ಮನಸ್ಕ ವೇದಿಕೆಯಡಿ ವಿವಿಧ ಸಂಘಟನೆಗಳು ಒಗ್ಗೂಡಿ ಮಂಡ್ಯ ನಗರ ಬಂದ್‌ ಮಾಡಲಾಗುವುದು ಎಂದು ಹೇಳಿದರು.

ಕಾನೂನು ಮುರಿಯುವ, ಶಾಂತಿ ಕದಡುವ ಶಕ್ತಿಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಪಾದಯಾತ್ರೆ ನೆಪದಲ್ಲಿ ಕುರುಬ ಸಮುದಾಯದ ವಿದ್ಯಾರ್ಥಿ ನಿಲಯಕ್ಕೆ ನುಗ್ಗಿ ದಾಂಧಲೆ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಬೇಕು. ಜಾತ್ಯತೀತ ತತ್ವ, ಶಾಂತಿ, ಸೌಹಾರ್ದ ಬಯಸುವ ಸಂಘಟನೆಗಳ ಮುಖಂಡರು ಸಾರ್ವಜನಿಕರು ಬಂದ್‌ನಲ್ಲಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಈ ನಡುವೆ ಕೆರಗೋಡು ಗ್ರಾಮದಲ್ಲಿ ಬಿಜೆಪಿ ಮುಖಂಡರು ಸಭೆ ನಡೆಸಿ ಮುಂದಿನ ಕ್ರಮದ ಕುರಿತು ಚರ್ಚಿಸಿದರು. ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್ ಕುಮಾರ್ ವಹಿಸಿದ್ದರು.

ಈ ಸಂರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಅಶೋಕ್ ಜಯರಾಂ ಅವರು, ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಮತ್ತೆ ಹನುಮಧ್ವಜ ಹಾರಿಸುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಸರಕಾರ ಬೇರೆ ಜಿಲ್ಲೆಗಳಿಂದ ಪೊಲೀಸರನ್ನು ಕರೆತಂದು ಮಂಡ್ಯದಲ್ಲಿ ನಿಯೋಜಿಸುತ್ತಿದೆ. ಗ್ರಾಮದ ಮಹಿಳೆಯರು, ಮಕ್ಕಳು ಭಯಭೀತರಾಗಿದ್ದಾರೆ. ಸರಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಈ ನಡುವೆ ಪಾದಯಾತ್ರೆಯಲ್ಲಿ ಫ್ಲೆಕ್ಸ್‌ ಹರಿದ ಆರೋಪದ ಮೇಲೆ 9ನೇ ತರಗತಿ ವಿದ್ಯಾರ್ಥಿ ಹಾಗೂ ಆತನ ತಂದೆಯನ್ನು ಕೆರಗೋಡು ಪೊಲೀಸರು ಠಾಣೆಗೆ ಕರೆಸಿ, ವಿಚಾರಣೆ ನಡೆಸಿ ಕಳಿಸಿದರು. ಆ ವಿಚಾರ ತಿಳಿದ ಬಿಜೆಪಿ ಮುಖಂಡರು ಬಾಲಕನ ಮನೆಗೆ ಭೇಟಿ ನೀಡಿ ಸಮಾಧಾನ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com