
ಮಂಗಳೂರು: ಮಂಗಳೂರಿನ ಖಾಸಗಿ ಶಾಲೆಯೊಂದರ ಶಿಕ್ಷಕಿಯೊಬ್ಬರು ಶ್ರೀರಾಮನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಹಿಂದುತ್ವವಾದಿಗಳು ಮತ್ತು ಕೆಲವು ವಿದ್ಯಾರ್ಥಿಗಳ ಪೋಷಕರು ಶನಿವಾರ ಶಾಲಾ ಆವರಣಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದರು.
ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ಆಡಿಯೊ ಸಂದೇಶದಲ್ಲಿ, ಪೋಷಕರೊಬ್ಬರು ಇತರ ಪೋಷಕರಿಗೆ ಶಾಲೆಗೆ ಮುತ್ತಿಗೆ ಹಾಕಲು ಕರೆ ನೀಡಿದ್ದಾರೆ ಮತ್ತು ಶಿಕ್ಷಕರ ವಿರುದ್ಧ ಶನಿವಾರ ಮಧ್ಯಾಹ್ನ 2 ಗಂಟೆಗೆ ಪ್ರತಿಭಟನೆಗೆ ಆಹ್ವಾನಿಸಿದ್ದಾರೆ.
ಮಂಗಳೂರಿನ ಸೇಂಟ್ ಗೆರೋಸಾ ಶಾಲೆಯಲ್ಲಿ ಪಾಠ ಮಾಡುತ್ತಿರುವ ಸಿಸ್ಟರ್ ಪ್ರಭಾ ಅವರು ತರಗತಿಯ ವೇಳೆ ಶ್ರೀರಾಮ ಮತ್ತು ಅಯೋಧ್ಯೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಶಿಕ್ಷಕಿಯನ್ನು ಸೇವೆಯಿಂದ ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಶಾಲೆಗೆ ಭದ್ರತೆ ಹೆಚ್ಚಿಸಿದ್ದು, ಬ್ಲಾಕ್ ಶಿಕ್ಷಣಾಧಿಕಾರಿ(ಬಿಇಒ) ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಶನಿವಾರ ಮಧ್ಯಾಹ್ನ ಶಾಲೆಗೆ ಭೇಟಿ ನೀಡಿದ ಮಾಜಿ ಎಂಎಲ್‌ಸಿ ಐವನ್ ಡಿಸೋಜಾ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡಿದ್ದು, ಶಿಕ್ಷಕಿಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
Advertisement