ಬಂಧಿತ ಶ್ರೀಕಾಂತ್ ಪೂಜಾರಿ ಕರಸೇವಕ ಅಲ್ಲ, ಆತನ ವಿರುದ್ಧ 16 ಪ್ರಕರಣಗಳಿವೆ: ಗೃಹ ಸಚಿವ ಪರಮೇಶ್ವರ
ಬೆಂಗಳೂರು: ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನವನ್ನು ಖಂಡಿಸಿ ರಾಜ್ಯಾದಾದ್ಯಂತ ಬಿಜೆಪಿ ಆರಂಭಿಸಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು, ಆ ವ್ಯಕ್ತಿ ಕರಸೇವಕರಲ್ಲ ಮತ್ತು ಆತನ ವಿರುದ್ಧ 16 ಪೊಲೀಸ್ ಪ್ರಕರಣಗಳಿವೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಕಾಂತ್ ಪೂಜಾರಿ ಎಂಬ ವ್ಯಕ್ತಿಯನ್ನು ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಇತರ ದಾಖಲೆಗಳಲ್ಲಿ ಕರಸೇವಕ ಎಂದು ಉಲ್ಲೇಖಿಸಿಲ್ಲ ಎಂದಿದ್ದಾರೆ.
'ಆತ ಆರೋಪಿ ಸ್ಥಾನದಲ್ಲಿದ್ದು, ಆತನ ವಿರುದ್ಧ 16 ಪ್ರಕರಣಗಳಿವೆ. ಅವುಗಳಲ್ಲಿ ಕೆಲವು ಪ್ರಕರಣಗಳು ಹೊರ ಬಂದಿವೆ. ಕಾನೂನು ಪಾಲನೆ ಮಾಡದ ಹಾಗೂ 16 ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನು ಬೆಂಬಲಿಸುತ್ತಿರುವ ಪಕ್ಷ ಬಿಜೆಪಿಯಾಗಿದೆ. ಬಿಜೆಪಿಗೆ ಏನಾಗಿದೆಯೋ ಗೊತ್ತಿಲ್ಲ' ಎಂದು ಹೇಳಿದರು.
'ಹಳೆಯ ಪ್ರಕರಣಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರಿಂದ ಅವುಗಳನ್ನು ಪರಿಶೀಲಿಸುವಾಗ ಪೂಜಾರಿ ಪ್ರಕರಣ ಬೆಳಕಿಗೆ ಬಂದಿತು. 31 ವರ್ಷಗಳ ನಂತರ ಏಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಬಿಜೆಪಿ ಸರ್ಕಾರದ ನಾಲ್ಕು ವರ್ಷಗಳ ಆಡಳಿತದಲ್ಲಿ ಅಥವಾ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಈ ಪ್ರಕರಣಗಳನ್ನು ಹಿಂಪಡೆಯಬಹುದಿತ್ತು. ಅವರೂ ಏನೂ ಮಾಡಿಲ್ಲ. ಯಾರನ್ನು ದೂಷಿಸಬೇಕು ಎಂಬುದು ಪ್ರಶ್ನೆಯಾಗಿದೆ' ಎಂದು ಪರಮೇಶ್ವರ್ ತಿಳಿಸಿದರು.
ಬಿಜೆಪಿ ಮಾಜಿ ಸಚಿವ ವಿ ಸುನೀಲ್ ಕುಮಾರ್ ಅವರು ಕರಸೇವಕರ ಪಟ್ಟಿ ನೀಡುವುದಾಗಿ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಸಾಮರ್ಥ್ಯವಿದ್ದರೆ ಅವರನ್ನು ಬಂಧಿಸಲಿ ಎಂದು ಮಾಡಿದ ಸವಾಲಿಗೆ ಪ್ರತಿಕ್ರಿಯಿಸಿದ ಪರಮೇಶ್ವರ, 'ಇಲ್ಲಿ ಯಾವುದೇ ವ್ಯಕ್ತಿಗಳಿಲ್ಲ. ಇದು ಜನರಿಂದ ಆಯ್ಕೆಯಾದ ಸರ್ಕಾರ. ಶಕ್ತಿ, ಸಾಮರ್ಥ್ಯ ಮತ್ತು ಅಧಿಕಾರವನ್ನು ಜನರು ನೀಡಿದ್ದಾರೆ. ಕಾನೂನು ಪ್ರಕಾರ ಸರ್ಕಾರ ಕಾರ್ಯನಿರ್ವಹಿಸುತ್ತದೆ' ಎಂದರು.
ಹುಬ್ಬಳ್ಳಿಯಲ್ಲಿ ಡಿಸೆಂಬರ್ 5, 1992 ರಂದು ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ದಾರೆ. ಪೂಜಾರಿ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇತರ ಎಂಟು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪೂಜಾರಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹುಬ್ಬಳ್ಳಿ ಪೊಲೀಸರು 1992 ರಿಂದ 1996 ರ ನಡುವೆ ನಡೆದ ಕೋಮು ಘರ್ಷಣೆಯಲ್ಲಿ ಬೇಕಾಗಿರುವ 300 ಜನರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಬಹುತೇಕ ಆರೋಪಿಗಳು ಈಗ 70 ವರ್ಷದ ಆಸುಪಾಸಿನವರಾಗಿದ್ದು, ಅವರಲ್ಲಿ ಹಲವರು ನಗರದಿಂದ ತೆರಳಿದ್ದಾರೆ ಎಂದು ಪೊಲೀಸ್ ಮೂಲಗಳು ವಿವರಿಸಿವೆ.
ಪೂಜಾರಿ ಬಂಧನ ರಾಜ್ಯದಲ್ಲಿ ಭಾರಿ ವಿವಾದವನ್ನು ಹುಟ್ಟುಹಾಕಿದ್ದು, ಸರ್ಕಾರ ಮತ್ತು ಪ್ರತಿಪಕ್ಷಗಳ ಟೀಕಾಪ್ರಹಾರ ಜೋರಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ