ಧಾರವಾಡ: ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು

ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಗಾಯಗೊಂಡ ಓರ್ವನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ನಂತರದ ದೃಶ್ಯ
ಅಪಘಾತದ ನಂತರದ ದೃಶ್ಯ

ಹುಬ್ಬಳ್ಳಿ-ಧಾರವಾಡ: ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಗಾಯಗೊಂಡ ಓರ್ವನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟವರಲ್ಲಿ ಮೂವರು ಹಾಸನದವರಾಗಿದ್ದು, ಒಬ್ಬರು ಬೆಂಗಳೂರಿನವರಾಗಿದ್ದಾರೆ. ಮೃತರನ್ನು ಎಲೆಕ್ಟ್ರಿಷಿಯನ್ ಚಂದನಗೌಡ (39 ವ), ಉದ್ಯಮಿ ಮಣಿಕಾಂತ್ (26 ವ) ಮತ್ತು ಹಾಸನದ ಅರಕಲಗೂಡು ನಿವಾಸಿ ಪವನ್ (23 ವ) ಮತ್ತು ಇನ್ನೊಬ್ಬ ಎಂಜಿನಿಯರ್ ಹರೀಶ್‌ಕುಮಾರ್ (40 ವ) ಬೆಂಗಳೂರಿನ ನಿವಾಸಿ. ರಸ್ತೆಯಲ್ಲಿ ನಿಂತಿದ್ದಾಗ ವೇಗವಾಗಿ ಬಂದ ಲಾರಿ ಇವರ ಮೇಲೆ ಹರಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತರಾಗಿದ್ದಾರೆ. 

ಇಂದು ಬೆಳಗ್ಗೆ ಹಾಸನದಿಂದ ಗೋವಾ ಕಡೆಗೆ ಹೋಗುತ್ತಿದ್ದ ಒಂದು ಕಾರು ಮತ್ತು ಬೆಂಗಳೂರಿನಿಂದ ಶಿರಸಿ ಕಡೆಗೆ ಹೋಗುತ್ತಿದ್ದ ಇನ್ನೊಂದು ಕಾರಿನ ಮಧ್ಯೆ ಸಣ್ಣ ಅಪಘಾತಕ್ಕೀಡಾಗಿತ್ತು. ಬೆಂಗಳೂರಿನ ಇಬ್ಬರು ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. ಹಾಸನದಿಂದ ಐವರು ಸದಸ್ಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ಬೆಂಗಳೂರಿನಿಂದ ಮೂವರು ಸದಸ್ಯರು ಪ್ರಯಾಣಿಸುತ್ತಿದ್ದರು.

ಎರಡೂ ಕಾರುಗಳಲ್ಲಿದ್ದ ಪ್ರಯಾಣಿಕರು ಅಪಘಾತವಾದ ನಂತರ ರಸ್ತೆಯಲ್ಲಿ ನಿಂತು ಜಗಳವಾಡುತ್ತಿದ್ದಾಗ ತಮಿಳುನಾಡಿನಿಂದ ಮುಂಬೈ ಕಡೆಗೆ ವೇಗವಾಗಿ ಬಂದ ಲಾರಿ ಇವರ ಮೇಲೆ ಹರಿದಿದೆ. ಇದರಿಂದ ರಸ್ತೆಯಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಮತ್ತೊಬ್ಬ ವ್ಯಕ್ತಿಯನ್ನು ಕೆಐಎಂ ಆಸ್ಪತ್ರೆಗೆ ರವಾನಿಸಲಾಗಿದೆ.

ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ವೇಗದ ಚಾಲನೆ ಮತ್ತು ದಟ್ಟ ಮಂಜು ಆವರಿಸಿದ್ದರಿಂದ ರಸ್ತೆ ಸರಿಯಾಗಿ ಕಾಣಿಸದೆ ಇದ್ದುದು ಭೀಕರ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಧಾರವಾಡದ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com