ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ವ್ಯಾಪ್ತಿಯ ಕಾಫಿ ಎಸ್ಟೇಟ್‌ನಲ್ಲಿ ಹುಲಿಯೊಂದು ಸತ್ತು ಬಿದ್ದಿರುವುದು ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಹುಲಿ ಮೇಲಿನ ಗಾಯಗಳಿಂದಾಗಿ ಅದು ಇನ್ನೊಂದು ಹುಲಿಯೊಂದಿಗೆ ನಡೆದ ಕಾದಾಟದಲ್ಲಿ ಪ್ರಾಣಬಿಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಶಿಷ್ಟಾಚಾರದ ಅಡಿಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಖರವಾದ ಕಾರಣ ಲಭ್ಯವಾಗಲಿದೆ. ಕಳೆದ ನಾಲ್ಕೈದು ದಿನಗಳಿಂದ ಹುಲಿಯು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿತ್ತು. ಹೀಗಾಗಿ, ಹುಲಿಯನ್ನು ಸೆರೆಹಿಡಿಯಲು ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
'ಸುಮಾರು 13 ವರ್ಷ ವಯಸ್ಸಿನ ಈ ಹುಲಿಯು ಸಂಘರ್ಷದ ಪರಿಸ್ಥಿತಿಯಲ್ಲಿತ್ತು. ಇದು ಕಾಫಿ ಎಸ್ಟೇಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯಮಿತವಾಗಿ ಹಸುಗಳ ಮೇಲೆ ದಾಳಿ ನಡೆಸುತ್ತಿತ್ತು' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ವಯಸ್ಸಾದ ಹುಲಿಯಾಗಿತ್ತು ಮತ್ತು ಅದು ಮಾನವ ವಾಸಸ್ಥಳಕ್ಕೆ ಪ್ರವೇಶಿಸಿದ್ದರಿಂದ ನಮ್ಮ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಪತ್ತೆಹಚ್ಚಲು ಪ್ರಾರಂಭಿಸಿದ್ದೆವು. ನಾವು ಅದನ್ನು ಸೆರೆಹಿಡಿಯಲು ಬಯಸಿದ್ದೆವು. ಆನೆಗಳು ಮತ್ತು ಪಶುವೈದ್ಯರು ಸಹ ನಮ್ಮ ಜೊತೆಗಿದ್ದರು. ಅದು ಕುಂಟುತ್ತಿದ್ದ ಕಾರಣ, ನಾವು ಅದನ್ನು ಪರೀಕ್ಷಿಸಿ ಅಗತ್ಯವಿದ್ದರೆ ಚಿಕಿತ್ಸೆ ನೀಡಲು ಬಯಸಿದ್ದೆವು. ನಾವು ಅದನ್ನು ರಕ್ಷಣಾ ಕೇಂದ್ರಕ್ಕೆ ಕೊಂಡೊಯ್ಯಲು ತೀರ್ಮಾನಿಸಿದ್ದೆವು ಎಂದು ಅವರು ಹೇಳಿದರು.
ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಸುದ್ದಿಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿ, ಶೋಧ ಕಾರ್ಯಾಚರಣೆ ವೇಳೆ ಬುಧವಾರ ಕಾಫಿ ಎಸ್ಟೇಟ್‌ನಲ್ಲಿ ಹುಲಿಯ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯನ್ನು ಇಂದು ಮಾಡಲಾಗುವುದು. ಪ್ರಾಥಮಿಕ ಪರಿಶೀಲನೆ ಪ್ರಕಾರ, ಇದು ಮತ್ತೊಂದು ಹುಲಿಯೊಂದಿಗೆ ಕಾದಾಟ ನಡೆಸಿದೆ. ಹುಲಿಯ ಮೇಲೆ ಅನೇಕ ಗಾಯಗಳು ಇದ್ದವು. ಹುಲಿಗೆ ಸಾಕಷ್ಟು ವಯಸ್ಸಾಗಿತ್ತು ಮತ್ತು ಹಲ್ಲುಗಳು ಸಹ ಸಂಪೂರ್ಣ ಹಾನಿಗೊಳಗಾಗಿದ್ದವು. ಆದರೆ ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು.
Advertisement