
ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಬೆಲೆ ಏರಿಕೆ ರಾಕೆಟ್ ವೇಗದಲ್ಲಿ ಮೇಲೇರುತ್ತಿದ್ದು ಸೇವೆ, ದೈನಂದಿನ ವಸ್ತುಗಳ ಬೆಲೆ ಏರಿಕೆಗೆ ಹೈರಾಣಾಗಿರುವ ಜನರಿಗೆ ಮತ್ತೊಂದು ಕಹಿ ಸುದ್ದಿ ಬಂದಿದೆ.
ಬೆಲೆ ಏರಿಕೆ ಪಟ್ಟಿಗೆ ಹೊಸದಾಗಿ ಒಂದು ಸೇವೆ ಸೇರ್ಪಡೆಯಾಗಿದ್ದು, ಇದರಿಂದ ವಿದ್ಯಾರ್ಥಿಗಳು, ಮಕ್ಕಳಿಗೂ ಭಾರಿ ನಿರಾಸೆ ಮೂಡಿದೆ.
ನಗರದ ಜವಹಾರ್‌ಲಾಲ್ ನೆಹರು ತಾರಾಲಯದ ಸ್ಕೈ ಥಿಯೇಟರ್ ಪ್ರವೇಶ ಶುಲ್ಕ ಶೇ.25ರಷ್ಟು ಹೆಚ್ಚಳವಾಗಿದೆ. ವಯಸ್ಕರ ಪ್ರವೇಶಕ್ಕೆ ನಿಗದಿಯಾಗಿದ್ದ ₹75 ದರ ಈಗ ₹100 ಗಳಿಗೆ ಏರಿಕೆಯಾಗಿದೆ.
ಪರಿಷ್ಕೃತ ದರ ಏ.1 ರಿಂದಲೇ ಜಾರಿಗೆ ಬಂದಿದೆ. ವಯಸ್ಕರಿಗೆ ಮಾತ್ರವಲ್ಲದೇ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಗುಂಪು ಬುಕ್ಕಿಂಗ್ ಪ್ರವೇಶ ಶುಲ್ಕ ಕೂಡ ಏರಿಕೆಯಾಗಿದೆ.
ನಿರ್ವಹಣೆ ಶುಲ್ಕ ಹಾಗೂ ಸ್ಕೈ ಥಿಯೇಟರ್ ಶೋ ನಡೆಸುವ ವೆಚ್ಚ ಹೆಚ್ಚಳವಾಗಿರುವ ಪರಿಣಾಮ, ಅದನ್ನು ಸರಿದೂಗಿಸಲು ಶುಲ್ಕ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಶೋ ದರವನ್ನು 2020ರಲ್ಲಿ ಪರಿಷ್ಕರಿಸಲಾಗಿತ್ತು ಎಂದು ತಾರಾಲಯದ ನಿರ್ದೇಶಕ ಡಾ.ಬಿ.ಆರ್. ಗುರುಪ್ರಸಾದ್ ತಿಳಿಸಿದ್ದಾರೆ.
ಬಾಹ್ಯಾಕಾಶದ ಕುರಿತು ಮಕ್ಕಳಲ್ಲಿ ಆಸಕ್ತಿ ಮೂಡಿಸುವುದು, ಹೊಸ ಹೊಸ ವಿಜ್ಞಾನ ಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳನ್ನು ವಿಜ್ಞಾನದ ಕಡೆ ಸೆಳೆಯುವ ಉದ್ದೇಶದೊಂದಿಗೆ ತಾರಾಲಯದಲ್ಲಿ ಶೋ ಆಯೋಜನೆ ಮಾಡಲಾಗುತ್ತದೆ.
ಪರಿಷ್ಕೃತ ಸ್ಕೈ ಥಿಯೇಟರ್ ಪ್ರವೇಶ ದರ
16 ವರ್ಷದೊಳಗಿನ ಮಕ್ಕಳು 60 ₹
ವಯಸ್ಕರು 100 ₹
ವಿದ್ಯಾರ್ಥಿಗಳು ಬ್ಲಾಕ್ ಬುಕ್ಕಿಂಗ್ (210 ಸೀಟ್ಸ್) 10,000₹
ಗುಂಪಾಗಿ ಬರುವ ಶಾಲಾ ವಿದ್ಯಾರ್ಥಿಗಳು 50 ₹
ಇತರರಿಗೆ ಬ್ಲಾಕ್ ಬುಕ್ಕಿಂಗ್ (210 ಸೀಟ್ಸ್) 20,000 ₹
Advertisement