
ದಾವಣಗೆರೆ: ಜಿಲ್ಲೆಯ ನ್ಯಾಮತಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ)ನಲ್ಲಿ ನಡೆದಿದ್ದ ರಾಜ್ಯದ ಅತಿ ದೊಡ್ಡ ಚಿನ್ನ ಕಳ್ಳತನ ಪ್ರಕರಣವನ್ನು ದಾವಣಗೆರೆ ಪೊಲೀಸರು ಭೇದಿಸಿದ್ದು, ಬಾವಿಯೊಂದರಲ್ಲಿ ಅಡಗಿಸಿಟ್ಟಿದ್ದ ಸುಮಾರು 13 ಕೋಟಿ ರೂ. ಮೌಲ್ಯದ 17 ಕೆಜಿ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.
ಕಳೆದ 6 ತಿಂಗಳ ಹಿಂದೆ ನಡೆದಿದ್ದ ಈ ಪ್ರಕರಣ ಸಂಬಂಧ ತಮಿಳುನಾಡು ಮೂಲದ ಮೂವರು ಸೇರಿ 6 ಜನರನ್ನು ಬಂಧಿಸಿದ್ದಾರೆ.
ತಮಿಳುನಾಡಿನ ಮದುರೈ ಮೂಲದ, ಹಾಲಿ ನ್ಯಾಮತಿಯಲ್ಲಿ ವಿಐಪಿ ಬ್ಲ್ಯಾಕ್ಸ್ ಅಂಡ್ ಸ್ವೀಟ್ಸ್ ಬೇಕರಿ ನಡೆಸುತ್ತಿದ್ದ ವಿಜಯಕುಮಾರ (30), ಆತನ ಸಹೋದರ ಅಜಯಕುಮಾರ (28), ಸಂಬಂಧಿ ಪರಮಾನಂದ (30), ನ್ಯಾಮತಿ ಶಾಂತಿನಗರ ಶಾಲೆ ಎದುರಿನ ಬೆಳಗುತ್ತಿ ಕ್ರಾಸ್ ನಿವಾಸಿ, ಪೇಟಿಂಗ್ ಕೆಲಸಗಾರ ಅಭಿಷೇಕ್ (23), ಸುರಹೊನ್ನೆ ಶಾಂತಿ ನಗರದ ವಾಸಿ ತೆಂಗಿನಕಾಯಿ ವ್ಯಾಪಾರಿ ಚಂದ್ರು (23) ಹಾಗೂ ಚಾಲಕ ಮಂಜುನಾಥ (30) ಬಂಧಿತ ಆರೋಪಿಗಳು.
ಏನಿದು ಪ್ರಕರಣ?
ಕಳೆದ ವರ್ಷ ಅ.28ರಂದು ದಾವಣಗೆರೆ ಜಿಲ್ಲೆ ನ್ಯಾಮತಿಯ ಎಸ್‌ಬಿಐ ಶಾಖೆಯಲ್ಲಿ ಗ್ರಾಹಕರು ಗಿರವಿ ಇಟ್ಟಿದ್ದ 17.7 ಕೇಜಿ ಚಿನ್ನಾಭರಣ 2024ರ ಅ.28ರಂದು ಲೂಟಿಯಾಗಿತ್ತು. ಐಜಿಪಿ, ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ ಸೇರಿ ಅಧಿಕಾರಿಗಳು, ಎಫ್‌ಎಸ್ ಎಲ್ ವಾಹನ, ಸೋಕೋ ಅಧಿಕಾರಿ, ಶ್ವಾನದಳ, ಬೆರಳಚ್ಚು ತಜ್ಞರು ಬ್ಯಾಂಕ್‌ಗೆ ಭೇಟಿ ನೀಡಿ, ಇಂಚಿಂಚು ಜಾಗವನ್ನೂ ಪರಿಶೀಲಿಸಿದ್ದರು. ಆದರೆ, ದರೋಡೆಕೋರರ ಬಗ್ಗೆ ಮಾತ್ರ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಬ್ಯಾಂಕ್ ಬಲಭಾಗದ ಕಬ್ಬಿಣದ ಕಿಟಕಿ ಗ್ರಿಲ್ ತುಂಡರಿಸಿ ಒಳನುಸುಳಿದ್ದ ದರೋಡೆಕೋರರು, ಸಿಸಿಟಿವಿ, ಅಲರಾಂ, ಎಲ್ಲ ವೈರ್‌ಗಳ ಸಂಪರ್ಕ ತೆಗೆದು ಹಾಕಿ ಸ್ಟ್ರಾಂಗ್ ರೂಂ ಪ್ರವೇಶಿಸಿದ್ದರು. ಸ್ಟ್ರಾಂಗ್ ರೂಂಗೆ ಇದ್ದ ಗ್ರಿಲ್ ಡೋರ್ ಬೀಗ ಮುರಿದು ಹಾಕಿದ್ದರು. ಒಂದು ಸುಳಿವನ್ನೂ ಬಿಟ್ಟುಕೊಡದ ರೀತಿ ಈ ದರೋಡೆ ಎಸಗಲಾಗಿತ್ತು.
ತನಿಖೆಗೆ ತಂಡ ರಚನೆ:
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ 5 ತಂಡ ರಚಿಸಿತ್ತು. 6ರಿಂದ 8 ಕಿಮೀವರೆಗೆ ಕೂಲಂಕಷವಾಗಿ ಪರಿಶೀಲಿಸಲಾಗಿತ್ತು. ಆದರೆ, ಸಾಕ್ಷಿಗಳ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಕೊನೆಗೆ ರಾಜಸ್ಥಾನ ಅಥವಾ ಉತ್ತರ ಪ್ರದೇಶ ವೃತ್ತಿಪರ ಬ್ಯಾಂಕ್ ದರೋಡೆಕೋರರ ಕೃತ್ಯ ಇರಬಹುದೆಂದು ಪೊಲೀಸರು ಶಂಕಿಸಿದ್ದರು. ಹೀಗಾಗಿ ಹರಿಯಾಣ, ಹಿಮಾಚಲ ಪ್ರದೇಶ, ಕಾಕಿನಾಡ, ವಾರಂಗಲ್, ಕೋಲಾರ, ತಮಿಳುನಾಡು, ಕೇರಳಕ್ಕೂ ಹೋಗಿ ಆರೋಪಿಗಳಿಗೆ ಶೋಧ ಕೈಗೊಂಡಿದ್ದರು.
ಸುಳಿವು ಸಿಕ್ಕಿದ್ದು ಹೇಗೆ?
ಪ್ರಕರಣ ಸಂಬಂಧ ದಾವಣಗೆರೆ ಪೊಲೀಸರು ಆರೋಪಿಗಳಿಗಾಗಿ ದೇಶದ ಉದ್ದಗಲಕ್ಕೂ ಅಲೆದಾಡಿದ್ದರು. ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕರ್ನಾಟಕದ ಭದ್ರಾವತಿಯಲ್ಲಿ ಇದೇ ರೀತಿಯ ಬ್ಯಾಂಕ್ ದರೋಡೆ ನಡೆದಿದ್ದರಿಂದ ತನಿಖಾಧಿಕಾರಿಗಳು ಮೊದಲು ಅಂತರರಾಜ್ಯ ಗ್ಯಾಂಗ್ ಮೇಲೆ ಅನುಮಾನ ವ್ಯಕ್ತಪಡಿಸಿತ್ತು. ಇದರಂತೆ ಪೊಲೀಸರು ಉತ್ತರ ಪ್ರದೇಶದ ಒಂದು ಗ್ಯಾಂಗ್ ಬೆನ್ನಟ್ಟಿದರು, ಆದರೆ ನಂತರ ಆ ಗ್ಯಾಂಹಗ್ ಕೈವಾಡವಿಲ್ಲ ಎಂಬುದು ಖಚಿತವಾಗಿತ್ತು.
ಈ ನಡುವೆ ನ್ಯಾಮತಿ ಭಾರತೀಯ ಸ್ಟೇಟ್ ಬ್ಯಾಂಕ್ ದರೋಡೆ ಪ್ರಕರಣ ಆರೋಪಿಗಳು ಆರೋಪಿಗಳು ಗ್ಯಾಸ್ ಕಟರ್ ಜತೆ ತಂದು, ಬಳಸಿದ ಬಳಿಕ ಕೆರೆಗೆ ಬಿಸಾಡಿದ್ದ ಸಿಲಿಂಡರ್‌ನಿಂದ ಸುಳಿವೊಂದನ್ನು ಪೊಲೀಸರಿಗೆ ಕೊಟ್ಟಿತ್ತು.
ಸಿಲಿಂಡರ್ ಅನ್ನು ಶಿವಮೊಗ್ಗದಲ್ಲಿ ಪಡೆದಿದ್ದ ಆರೋಪಿಗಳು. ಆ ವೇಳೆ ಆಧಾರ್ ಕಾರ್ಡ್ ನೀಡಿದ್ದರು. ಯಾವ ಅಂಗಡಿಗೆ ಸಿಲಿಂಡರ್ ಬಾಕಿ ಬರಬೇಕಿದೆ ಎಂಬ ತನಿಖೆಗೆ ಇಳಿದಾಗ ಆರೋಪಿಗಳ ಸುಳಿವು ಪೊಲೀಸರಿಗೆ ಸಿಕ್ಕಿತ್ತು.
ಪ್ರಕರಣದ ಮೊದಲ ಆರೋಪಿ ವಿಜಯಕುಮಾರ್‌ಗ್ಯಾಸ್ ಕಟರ್ ಬಳಸಲು ಶಿವಮೊಗ್ಗದಲ್ಲಿ ಸಿಲಿಂಡರ್ ಖರೀದಿಸಿದ್ದ. ಈ ವೇಳೆ ಆಧಾರ್‌ಕಾರ್ಡ್ ಕೊಟ್ಟಿದ್ದ. ಆದರೆ, ಸಿಲಿಂಡರ್ ಅನ್ನು ವಾಪಸ್ ಕೊಟ್ಟಿರಲಿಲ್ಲ. ಬ್ಯಾಂಕ್ ದರೋಡೆ ಬಳಿಕ ಸಿಲಿಂಡರ್ ಅನ್ನು ನಜ್ಜುಗುಜ್ಜು ಮಾಡಿ ನೀರು ತುಂಬಿದ್ದ ಕೆರೆಗೆ ಎಸೆದಿದ್ದರು. ಬೇಸಿಗೆಯಿಂದಾಗಿ ಕೆರೆ ಒಣಗಿದ್ದರಿಂದ ಸಿಲಿಂಡರ್ ಪತ್ತೆಯಾಗಿತ್ತು.
ಬ್ಯಾಂಕ್ ದರೋಡೆಗಿಂತ ಹಿಂದಿನ ದಿನಗಳಲ್ಲಿ ಸಿಲಿಂಡರ್ ಖರೀದಿ ಮಾಡಿದವರು ಯಾರು ವಾಪಸ್ ಸಿಲಿಂಡರ್ ತಂದುಕೊಟ್ಟಿಲ್ಲ ಎಂದು ಮೂಲ ಹುಡುಕಿದಾಗ ವಿಜಯಕುಮಾರ್ ಸಿಲಿಂಡರ್ ವಾಪಸ್ ಕೊಡದಿರುವುದು ಪತ್ತೆಯಾಗಿದೆ. ಅಲ್ಲದೆ, ಶ್ವಾನ ದಳಗಳ ದಾರಿ ತಪ್ಪಿಸಲು ಅವರು ತಪ್ಪಿಸಿಕೊಳ್ಳುವ ಮಾರ್ಗದಲ್ಲಿ ಮೆಣಸಿನ ಪುಡಿಯನ್ನು ಎಸೆದಿದ್ದರು. ಈ ಖಾರದ ಪುಡಿ ಪ್ಯಾಕೇಟ್ ಮೇಲಿದ್ದ ಹೆಸರು ಸ್ಥಳೀಯರೇ ಕೃತ್ಯ ನಡೆಸಿದ್ದಾರೆಂಬ ಸುಳಿವು ನೀಡಿತ್ತು. ಬಳಿಕ ವಿಜಯಕುಮಾರ್ ವಶಕ್ಕೆ ಪಡೆದು,
ದರೋಡೆಗೆ ಮೂಲ ಕಾರಣವೇನು?
ನ್ಯಾಮತಿಯಲ್ಲಿ ಬೇಕರಿ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಎಸ್‌ಬಿಐನಿಂದ 714 ಲಕ್ಷ ಸಾಲ ಕೋರಿ ಅರ್ಜಿ ಸಲ್ಲಿಸಿದ್ದ. ಅದು ತಿರಸ್ಕಾರವಾಗಿತ್ತು. ಬಳಿಕ ತನ್ನ ಬಂಧುಗಳ ಹೆಸರಿನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದರೂ ತಿರಸ್ಕರಿಸಲಾಗಿತ್ತು. ಈ ಸಿಟ್ಟಿನಿಂದ ತನ್ನ ತಂಡದ ಜತೆಗೂಡಿ ದರೋಡೆ ನಡೆಸಿದ್ದಾನೆಂದು ತಿಳಿದುಬಂದಿದೆ.
ವೆಬ್ ಸೀರಿಸ್ 'ಮನಿ ಹೈಸ್ಟ್' ಪ್ರೇರಣೆ...!
ನಗರದ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಸೋಮವಾರ ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಪ್ರದರ್ಶಿಸಿದ್ದು, ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ. ಬಿ.ರ್ಆ. ರವಿಕಾಂತೇಗೌಡ ಅವರು ಕಳ್ಳತನ ಮತ್ತು ಚಿನ್ನ ಅಡಗಿಸಿಟ್ಟ ಕುತೂಹಲಕಾರಿ ಸಂಗತಿಗಳನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.
ಆರೋಪಿಗಳು ಬ್ಯಾಂಕ್ ದರೋಡೆಗೆ ಸಂಬಂಧಿಸಿದ ಪ್ರಸಿದ್ದ ವೆಬ್ ಸೀರೀಸ್ ಮನಿ ಹೈಸ್ಟ್ ಹಾಗೂ ಯುಟ್ಯೂಬ್ ವಿಡಿಯೋಗಳನ್ನು ನೋಡಿ 6 ತಿಂಗಳಿನಿಂದ ಸಿದ್ಧತೆ ನಡೆಸಿ ದರೋಡೆ ಮಾಡಿದ್ದಾರೆಂದು ತಿಳಿಸಿದ್ದಾರೆ.
ಪ್ರಕರಣದ 1ನೇ ಆರೋಪಿ ವಿಜಯಕುಮಾರ ಸುರಹೊನ್ನೆ ಶಾಂತಿ ನಗರದ ವಾಸಿಯಾಗಿದ್ದು, ತಮಿಳುನಾಡು ಮೂಲದವನಾಗಿದ್ದು, ನ್ಯಾಮತಿಯಲ್ಲಿ ವಿಐಪಿ ಸ್ಪ್ಯಾಕ್ಸ್ ಹೆಸರಿನ ಸ್ವೀಟ್ ಮತ್ತು ಬೇಕರಿ ನಡೆಸುತ್ತಿದ್ದನು. ವಿಜಯಕುಮಾರ ತನ್ನ ತಂದೆ ಜೊತೆಗೂಡಿ 25-30 ವರ್ಷದಿಂದ ಅಂಗಡಿನಡೆಸಿಕೊಂಡು ಬಂದಿದ್ದನು. ವ್ಯಾಪಾರ ಅಭಿವೃದ್ಧಿಪಡಿಸಲು ರೂ.14 ಲಕ್ಷ ಸಾಲಕ್ಕಾಗಿ ಮಾರ್ಚ್ 2023ರಲ್ಲಿ ನ್ಯಾಮತಿ ಎಸ್‌ಬಿಐಗೆ ಅರ್ಜಿ ಸಲ್ಲಿಸಿದ್ದ.
ಕ್ರೆಡಿಟ್ ಸ್ಕೋರ್‌ಸರಿ ಇಲ್ಲ ಎಂಬ ಕಾರಣಕ್ಕೆ ಆತನ ಅರ್ಜಿ ತಿರಸ್ಕೃತವಾಗಿತ್ತು. ಅನಂತರ ತಮ್ಮ ಸಂಬಂಧಿಗಳ ಹೆಸರಿನಲ್ಲಿ ಸಾಲಕ್ಕೆ ಅದೇ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದರೂ ಅರ್ಜಿ ತಿರಸ್ಕೃತವಾಗಿದ್ದವು. ಇದೇ ಬ್ಯಾಂಕ್ ದರೋಡೆಗೆ ಮೂಲ ಕಾರಣವೆಂದು ತಿಳಿದುಬಂದಿದೆ.
ಚಿನ್ನವನ್ನು ಬಚ್ಚಿಟ್ಟಿದ್ದೆಲ್ಲಿ?
ಆರೋಪಿಗಳು ಬ್ಯಾಂಕ್‌ನಲ್ಲಿ ದರೋಡೆ ಮಾಡಿದ ಚಿನ್ನವನ್ನು ವಿಜಯಕುಮಾರ ತನ್ನ ಮನೆಯಲ್ಲಿದ್ದ ಸಿಲ್ವರ್ ಬಣ್ಣದ ಡಸ್ಟರ್ ಕಾರಿನ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದನು. ಯಾವ ರೀತಿ ವಿಲೇವಾರಿ ಮಾಡಬೇಕೆಂದು ಪ್ಲಾನ್ ಮಾಡಿದ್ದನು. ಕೃತ್ಯಕ್ಕೆ ಬಳಸಿದ್ದ ಮಂಕಿ ಕ್ಯಾಪ್, ಹ್ಯಾಂಡ್ ಗೌಸ್‌ಗಳನ್ನು ನಾಶಪಡಿಸಿದ್ದನು. ಇನ್ನುಳಿದ ಹೈಡ್ರಾಲಿಕ್ ಕಟರ್, ಗ್ಯಾಸ್ ಸಿಲಿಂಡರ್ ಇತರೆ ವಸ್ತುಗಳನ್ನು ಸವಳಂಗ ಕೆರೆ ಎಸೆದಿದ್ದಾಗಿ ಬಂಧಿತರು ಬಾಯಿಬಿಟ್ಟಿದ್ದಾರೆ.
ಎಸ್ಬಿಐನಿಂದ ತಂದಿದ್ದ ಹಾರ್ಡ್ ಡಿಸ್ಕ್, ಡಿವಿಆರ್ ಅನ್ನು ಮೊದಲು ಕಲ್ಲಿನಿಂದ ಜಜ್ಜಿ ಹಾಳು ಮಾಡಿ, ಕೆರೆಗೆ ಎಸೆದಿದ್ದಾರೆ. ನಂತರ ವಿಜಯಕುಮಾರ್ ತನ್ನ ಸ್ವಂತ ಊರಾದ ತಮಿಳುನಾಡಿನ ಮದುರೈನ ಮನೆಗೆ ಒಬ್ಬನೇ ಕಾರಿನಲ್ಲಿ ಹೋಗಿದ್ದಾನೆ. ಮನೆಯು ಊರಿನ ಹೊರಗೆ ನಿರ್ಜನ ಪ್ರದೇಶದಲ್ಲಿದ್ದು, ಸುತ್ತಲೂ ದಟ್ಟ ಅರಣ್ಯವಿದೆ. ಅಲ್ಲಿದ್ದ 25-30 ಅಡಿ ಆಳದ ಬಾವಿಗೆ ಒಂದು ಸಣ್ಣ ಲಾಕರ್‌ಗೆ ಚಿನ್ನ ತುಂಬಿ, ಅದಕ್ಕೆ ಹಗ್ಗ ಕಟ್ಟಿ ಬಾವಿಯಲ್ಲಿ ಯಾರಿಗೂ ಕಾಣದಂತೆ ಇಳಿಬಿಟ್ಟು, ಬಚ್ಚಿಟ್ಟಿದ್ದಾನೆ.
ಪರಿಸ್ಥಿತಿ ತಿಳಿಗೊಂಡ ಬಳಿಕ ಸ್ವಲ್ಪ ಚಿನ್ನವನ್ನು ಹೊರತೆಗೆದು ತನ್ನ ಮತ್ತು ಸಂಬಂಧಿಕರ ಹೆಸರಿನಲ್ಲಿ ಬ್ಯಾಂಕ್ ಗಳಲ್ಲಿ ಠೇವಣಿ ಇರಿಸಿದ್ದಾನೆ. ಕೆಲ ಚಿನ್ನವನ್ನು ಅಂಗಡಿಗಳಲ್ಲಿ ಮಾರಾಟ ಮಾಡಿದ್ದಾನೆ. ನಂತರ ಅಭಿ, ಚಂದ್ರು ಹಾಗೂ ಮಂಜುಗೆ ತಲಾ ರೂ.1 ಲಕ್ಷ ನೀಡಿ, ಗ್ರಾಮದಲ್ಲಿ ದೊಡ್ಡ ಮನೆ ಕಟ್ಟಿಸಿದ್ದಾನೆ. ಅಲ್ಲದೆ, ಕೆಲವು ಫ್ಲ್ಯಾಟ್ ಗಳನ್ನು ಖರೀಸಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರಿಗೆ ಮುಖ್ಯಮಂತ್ರಿ ಪದಕ
ಇನ್ನು ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ ಪೊಲೀಸರನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದ್ದು. 10 ಮಂದಿ ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕವನ್ನು ನೀಡಲಾಗಿದೆ. ವಿಶೇಷ ಬಹುಮಾನವನ್ನೂ ಘೋಷಿಸಲಾಗಿದೆ.
Advertisement