
ಕಲಬುರಗಿ: ಪತ್ನಿ ಜೊತೆಗಿನ ಸಂಘರ್ಷದಿಂದ ಬೇಸತ್ತಿದ್ದ ವ್ಯಕ್ತಿಯೋರ್ವ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ತಾನೂ ನೇಣಿಗೆ ಶರಣಾಗಿರುವ ಘನಘೋರ ಘಟನೆ ಕಲಬುರಗಿಯಲ್ಲಿ ವರದಿಯಾಗಿದೆ.
ಕಲಬುರಗಿ ಜಿಲ್ಲೆಯ ಗಾಬರೆ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದ್ದು, ವೃತ್ತಿಯಲ್ಲಿ ಸರ್ಕಾರಿ ನೌಕರನಾಗಿರುವ ಸಂತೋಷ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ. ಮೂಲಗಳ ಪ್ರಕಾರ ಸಂತೋಷ್ ಕಲಬುರಗಿಯ ಟೆಸ್ಕಾಂನಲ್ಲಿ ಸೀನಿಯರ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. 10 ವರ್ಷಗಳ ಹಿಂದೆ ಶೃತಿ (35) ಎಂಬಾಕೆಯನ್ನು ಮದುವೆಯಾಗಿದ್ದ. ಈ ಜೋಡಿಗೆ ಇಬ್ಬರು (9ವರ್ಷದ ಮುನಿಶ್ ಹಾಗೂ ನಾಲ್ಕು ತಿಂಗಳ ಮಗು ಅನಿಶ್) ಗಂಡು ಮಕ್ಕಳಿದ್ದರು.
ಕೌಟುಂಬಿಕ ಕಲಹ ಹಿನ್ನಲೆ ಪತ್ನಿ ಇಬ್ಬರು ಮಕ್ಕಳ್ಳನ್ನ ಕೊಲೆ ಮಾಡಿರುವ ಸಂತೋಷ್ ಕೊನೆಗೆ ತಾನೂ ಕೂಡ ಮನೆಯ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದಲೇ ಸಂತೋಷ್ ತನ್ನ ಪತ್ನಿ, ಮಕ್ಕಳನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನೋದು ಗೊತ್ತಾಗಿದೆ. ನಾಲ್ವರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಜಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಲಾಗಿದೆ.
ಕೌಟುಂಬಿಕ ಕಲಹ
ಮದುವೆಯಾದ ಹೊಸದರಲ್ಲಿ ಗಂಡ ಹೆಂಡತಿ ಚೆನ್ನಾಗಿಯೇ ಇದ್ದರಂತೆ. ಆದರೆ ಇತ್ತೀಚೆಗೆ ಅದೇನಾಯ್ತೋ ಗೊತ್ತಿಲ್ಲ ಹೆಂಡತಿಯನ್ನ ತವರು ಮನೆಗೂ ಕಳುಹಿಸದೇ ಸಂತೋಷ್ ಕಿರುಕುಳ ನೀಡುತ್ತಿದ್ದ ಎಂದು ಶೃತಿ ಮನೆಯವರು ಆರೋಪಿಸಿದ್ದಾರೆ. ಪ್ರತಿಯೊಂದು ವಿಚಾರಕ್ಕೂ ಪತ್ನಿಯೊಂದಿಗೆ ಕಿರಿಕ್ ಮಾಡ್ತಿದ್ದ ಸಂತೋಷ್, ನಿನ್ನೆ ಸಂಜೆ ಆಫೀಸ್ನಿಂದ ಬರುತ್ತಿದ್ದಂತಯೇ ಮತ್ತೆ ಗಲಾಟೆ ಶುರು ಮಾಡಿದ್ದಾರೆ. ಅಲ್ಲದೇ ತನ್ನ ಪತ್ನಿಯ ತಂದೆಗೆ ಫೋನ್ ಮಾಡಿ ಗಲಾಟೆ ವಿಚಾರ ತಿಳಿಸಿದ್ದಾನೆ. ಗಲಾಟೆ ತಾರಕಕ್ಕೇರಿದಾಗ ಸಂತೋಷ್, ತನ್ನ ಹಸುಗೂಸನ್ನು ಕೂಡ ಲೆಕ್ಕಸಿದೇ ಮೂವರನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾರೆ.
ಡೆತ್ ನೋಟ್ ಪತ್ತೆ
ಪ್ರಕರಣ ದಾಖಲಿಸಿಕೊಂಡಿರುವ ಸ್ಟೇಷನ್ ಬಜಾರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಂತೋಷ್ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ಹೇಳಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೊಲೀಸ್ ಆಯುಕ್ತ ಶರಣಪ್ಪ ಎಸ್ ಡಿ ಅವರು, 'ಡೆತ್ ನೋಟ್‌ನಲ್ಲಿ ಅವರ ನಡುವೆ ಆಗಾಗ್ಗೆ ತಪ್ಪು ತಿಳುವಳಿಕೆ ಮತ್ತು ಜಗಳಗಳು ನಡೆಯುತ್ತಿದ್ದವು ಎಂದು ಉಲ್ಲೇಖಿಸಲಾಗಿದೆ. ನಾವು ಕೊಲೆ ಪ್ರಕರಣ ದಾಖಲಿಸಿದ್ದೇವೆ ಎಂದಿದ್ದಾರೆ.
ಅಂತೆಯೇ ಅಪರಾಧ ವಿಭಾಗದ ಅಧಿಕಾರಿ (SOCO) ತಂಡ, ವಿಧಿವಿಜ್ಞಾನ ಪ್ರಯೋಗಾಲಯ (FSL) ಮತ್ತು ಬೆರಳಚ್ಚು ತಜ್ಞರು ಸ್ಥಳವನ್ನು ಪರಿಶೀಲಿಸಿದ್ದಾರೆ. ಘಟನೆಯ ನಿಖರವಾದ ಸಮಯವನ್ನು ಇನ್ನೂ ನಿರ್ಧರಿಸಲಾಗಿಲ್ಲ, ಆದರೆ ಅದು ಸಂಜೆ 6-8 ಗಂಟೆಯ ನಡುವೆ ಸಂಭವಿಸಿರಬಹುದು. ಕುಟುಂಬದ ಸದಸ್ಯರು ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಲು ಪ್ರಯತ್ನಿಸಿದರು, ಆದರೆ ವ್ಯರ್ಥವಾಯಿತು. ಅವರು ಬಂದಾಗ, ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಅದನ್ನು ಒಡೆದಾಗ, ಅವರು ಶವಗಳು ಇತ್ತು ಎಂದು ತಿಳಿಸಿದ್ದಾರೆ.
Advertisement