
ಬೆಂಗಳೂರು: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ನೆರವು ನೀಡುವಂತೆ ಕಾರ್ಪೊರೇಟ್ ಕಂಪನಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಸೂಚನೆ ನೀಡಿದ್ದಾರೆ.
ನಮ್ಮ ದೇಶದಲ್ಲಿ ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಅಪರೂಪದ ಕಾಯಿಲೆಗಳಿಗೆ ತುತ್ತಾದ ನೂರಾರು ಮಕ್ಕಳು ಇದ್ದಾರೆ. ಇವರಲ್ಲಿ ಕೆಲವರಿಗೆ ಚಿಕಿತ್ಸೆ ನೀಡಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಇದು ವಾರ್ಷಿಕವಾಗಿ ಪ್ರತಿ ಮಗುವಿಗೆ 50 ಲಕ್ಷದಿಂದ 1 ಕೋಟಿ ರೂ.ಗಳಿಗಿಂತ ಹೆಚ್ಚು ವೆಚ್ಚವಾಗುತ್ತದೆ. ರಾಷ್ಟ್ರೀಯ ಅಪರೂಪ ಕಾಯಿಲೆ ನೀತಿಯಡಿ (ಎನ್‍ಪಿಆರ್‍ಡಿ) ಇಂತಹ ರೋಗಕ್ಕೆ ತುತ್ತಾಗಿರುವ ಮಕ್ಕಳಿಗೆ ಚಿಕಿತ್ಸೆ ಒದಗಿಸಲು ಕೇಂದ್ರ ಸರಕಾರ ಅನುದಾನ ಒದಗಿಸುತ್ತಿದೆ.
2016ರಿಂದ ಕರ್ನಾಟಕದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿಯೂ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಚಿಕಿತ್ಸಾ ವೆಚ್ಚ ಒಂದು ವರ್ಷಕ್ಕೆ ಕನಿಷ್ಠ 50 ಲಕ್ಷ ರೂಪಾಯಿಗಳಾಗುತ್ತದೆ. ಗರಿಷ್ಠ ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಅಪರೂಪದ ಕಾಯಿಲೆಗೆ ಚಿಕಿತ್ಸೆ ನೀಡಲು ಸೆಂಟರ್ ಫಾರ್ ಎಕ್ಸಲೆನ್ಸ್ ಫಾರ್ ರೇರ್ ಡೀಸಿಸ್ ಎಂಬ 13 ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಪೈಕಿ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಕೂಡ ಒಂದಾಗಿದೆ. ಇಂದಿರಾಗಾಂಧಿ ಸಂಸ್ಥೆಯಲ್ಲಿ 22 ಮಕ್ಕಳಿಗೆ ಕನಿಷ್ಠ ಮಿತಿಯಾದ 50 ಲಕ್ಷ ರೂ. ಅನುದಾನ ನೀಡಿ ಚಿಕಿತ್ಸೆಯನ್ನು ನೀಡಲಾಗಿದೆ.
ಇದುವರೆಗೆ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಕರ್ನಾಟಕ ಸರಕಾರದಿಂದ 76 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈಗ ಹೆಚ್ಚಿನ ಅನುದಾನಕ್ಕೆ ಕೇಂದ್ರ ಸರಕಾರಕ್ಕೂ ಮನವಿ ಮಾಡಲಾಗಿದೆ. ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ನಿರಂತರ ಪ್ರಯತ್ನ ಮಾಡಲಾಗುತ್ತಿದ್ದು, ಸರ್ಕಾರದ ಜೊತೆಗೆ ಕಾರ್ಪೊರೇಟ್ ಕಂಪನಿಗಳು ಕೈ ಜೋಡಿಸಿದರೆ ಈ ಮಕ್ಕಳ ಬಾಳಿನಲ್ಲಿ ಬೆಳಕು ತರಿಸಬಹುದು ಎಂದು ಎಂದು ಹೇಳಿದ್ದಾರೆ.
ಇದೇ ವೇಳೆ ವೈದ್ಯಕೀಯ ವೆಚ್ಚಗಳನ್ನು ಹಂಚಿಕೊಳ್ಳುವ ಭಾಗವಾಗಿ, ಸಂಸ್ಥೆಯಲ್ಲಿ ಇರಿಸಲಾಗಿರುವ ಕಾರ್ಪಸ್ ನಿಧಿಯ ಸ್ವಲ್ಪ ಭಾಗವನ್ನು ವಿನಿಯೋಗಿಸಲು ಐಜಿಐಸಿಎಚ್ ಡಾ.ಕೆ.ಎಸ್. ಸಂಜಯ್ ಅವರಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.
Advertisement