
ಬೆಂಗಳೂರು: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಭಾನುವಾರ ಹೇಳಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಬಿಜೆಪಿಯವರು ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದಾರೆ, ಆದರೆಸ ಈಗಾಗಲೇ ರಾಜ್ಯ ಪೊಲೀಸರಿಂದ ತನಿಖೆ ನಡೆಯುತ್ತಿದೆ, ನಮ್ಮ ಪೊಲೀಸರು ತನಿಖೆ ನಡೆಸುವುದರಿಂದ ಸಿಬಿಐಗೆ ಒಪ್ಪಿಸುವ ಅಗತ್ಯವಿಲ್ಲ, ಯಾವುದೇ ಲೋಪಗಳಿದ್ದರೆ ಅವರು ಕಂಡುಹಿಡಿಯುತ್ತಾರೆ, ನಂತರ ನಾವು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳಿದರು.
ಡೆತ್ ನೋಟ್‌ನಲ್ಲಿ ಶಾಸಕರ ಹೆಸರನ್ನು ನಮೂದಿಸಲಾಗಿದೆ. ಆದರೆ ಎಫ್‌ಐಆರ್‌ನಲ್ಲಿ ಅದು ಕಾಣೆಯಾಗಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ನಾವು ಪ್ರತಿಯೊಂದು ಅಂಶವನ್ನು ಪರಿಶೀಲಿಸುತ್ತಿದ್ದೇವೆ. ಕಾನೂನು ಪ್ರಕಾರ ತನಿಖೆ ಮಾಡುತ್ತೇವೆಂದು ತಿಳಿಸಿದರು.
ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆನಿವಾಸಕ್ಕೆ ಪರಮೇಶ್ವರ್ ಭೇಟಿ ನೀಡಿದ್ದು, ಸುಮಾರು 1 ತಾಸಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.
ಸದಾಶಿವನಗರದ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ ಪರಮೇಶ್ವರ್ ಗಂಟೆಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಇತ್ತೀಚೆಗೆ ಪಕ್ಷದೊಳಗಿನ ವಿದ್ಯಮಾನದ ಬಗ್ಗೆ ತೀವ್ರ ಬೇಸರಗೊಂಡಿರುವ ಪರಮೇಶ್ವರ್, ಕರ್ನಾಟಕ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಸಂಬಂಧವೂ ಅಸಮಧಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಖರ್ಗೆ ಹಾಗೂ ಪರಮೇಶ್ವರ್ ಭೇಟಿ ಕುತೂಹಲ ಮೂಡಿಸಿದೆ.
ಖರ್ಗೆ ಭೇಟಿ ಬಳಿಕ ಪ್ರತಿಕ್ರಿಯಿಸಿದ ಅವರು, ನಮ್ಮದು ಒಂದೇ ಕುಟುಂಬ, ಸೌಜನ್ಯ ಭೇಟಿ. ನನಗೆ ಹಿರಿಯ ಅಣ್ಣ ಇದ್ದ ಹಾಗೆ. ನಾವು ರಾಜಕೀಯ ಏನು ಮಾತನಾಡಲ್ಲ. ನಾವು ರಾಜಕೀಯ ಮಾತೇ ಆಡಿಲ್ಲ ಅಂತ ಹೇಳ್ತಾ ಇದ್ದೇನೆ ಎಂದರು.
ಮಕ್ಕಳು, ಮರಿ ಎಲ್ಲರನ್ನೂ ಮಾತನಾಡಿಸುತ್ತಿದ್ದೆ. ಕುಟುಂಬದ ವಿಚಾರ ಚರ್ಚೆ ಮಾಡಿದ್ದೇವೆ ಅಷ್ಟೇ. ಆರೋಗ್ಯ ವಿಚಾರಿಸಿ ಕಾಫಿ ಕುಡಿದು ಬಂದಿದ್ದೇನೆ. ಅವರು ಏನು ರಾಜಕೀಯ ವಿಚಾರ ಕೇಳಿಲ್ಲ. ನಾನು ಮಾಹಿತಿಯೂ ಕೊಟ್ಟಿಲ್ಲ ಎಂದು ಹೇಳಿದರು
Advertisement