
ಬೆಂಗಳೂರು: ದೇಶದಲ್ಲೇ ಇದೇ ಮೊದಲ ಬಾರಿಗೆ, ನಿರ್ಗತಿಕರಿಗೆ ಪೂರ್ಣ ಪ್ರಮಾಣದ ಮಾನಸಿಕ ಆರೋಗ್ಯ ಕೇಂದ್ರ ಮತ್ತು ಗಾರ್ಮೆಂಟ್ಸ್ ಕಾರ್ಖಾನೆಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮಾನಸಿಕವಾಗಿ ಅಸ್ವಸ್ಥರಾಗಿರುವವರು, ನಿರ್ಗತಿಕರಿಗೆ ಚಿಕಿತ್ಸೆ ನೀಡುವ ಹಾಗೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿರುವವರು ಭಿಕ್ಷಾಟನೆಗೆ ಮರಳದಂತೆ ನೋಡಿಕೊಳ್ಳಲು ಸಲುವಾಗಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾನಸಿಕ ಆರೋಗ್ಯ ಕೇಂದ್ರ ಮತ್ತು ಗಾರ್ಮೆಂಟ್ಸ್ ಕಾರ್ಖಾನೆಯನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಒಟ್ಟು 14 ಪುನರ್ವಸತಿ ಕೇಂದ್ರಗಳಿದ್ದು, ಈ ಕೇಂದ್ರಗಳಲ್ಲಿ 3,435 ಮಂದಿ ವಸತಿ ಪಡೆದಿದ್ದಾರೆ. 3,435 ಮಂದಿ ಪೈಕಿ 1,194 ಮಂದಿ ಮಾನಸಿಕವಾಗಿ ಅಸ್ಥಿರರಾಗಿದ್ದು, ಇವರಿಗೆ ಸರ್ಕಾರೇತರ ಸಂಸ್ಥೆಗಳಿಗೆ ಸಂಬಂಧಿಸಿದ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ್ ಅವರು ಮಾತನಾಡಿ, ಪ್ರಸ್ತಾವಿತ ಈ ಮಾನಸಿಕ ಆರೋಗ್ಯ ಕೇಂದ್ರವು ನಿರ್ಗತಿಕರಿಗೆ ಕೌನ್ಸಿಲಿಂಗ್ ನ್ನೂ ಕೂಡ ಒದಗಿಸುತ್ತದೆ ಎಂದು ಹೇಳಿದ್ದಾರೆ.
ಈ ಕೇಂದ್ರದಲ್ಲಿ ಹೊರರೋಗಿ ವಿಭಾಗ ಕೂಡ ಇರಲಿದೆ. ನರವೈಜ್ಞಾನಿಕ ಸಮಸ್ಯೆಗಳಿಗೆ ರೋಗಿಗಳಿಗೆ ಶಸ್ತ್ರಚಿಕಿತ್ಸೆಗಳನ್ನೂ ಕೂಡ ನಡೆಸಲಾಗುತ್ತದೆ. ಬೆಂಗಳೂರಿನಲ್ಲಿರುವ ಕೇಂದ್ರ ಪರಿಹಾರ ಸಮಿತಿ ಕೇಂದ್ರದ ಪಕ್ಕದಲ್ಲಿ 10 ಎಕರೆ ಜಾಗವಿದ್ದು, ಅಲ್ಲಿಯೇ ಮಾನಸಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಚಿಂತನೆ ನಡೆಸಲಾಗುತ್ತಿದೆ. ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ನಿರ್ಗತಿಕರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಪರಿಹಾರ ಸಮಿತಿಯ ಕಾರ್ಯದರ್ಶಿ ನಾಗೇಶ್ ಪಿ ಅವರು ಮಾತನಾಡಿ, ನಿರ್ಗತಿಕರ ಕೇಂದ್ರದಲ್ಲಿ ಒಟ್ಟು 3,500 ಮಂದಿ ನಿರ್ಗತಿಕರಿದ್ದು, ಅವರಲ್ಲಿ ಸುಮಾರು ಶೇ.30ರಷ್ಟು ಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ಥಿರವಾಗಿದ್ದಾರೆ. ಪ್ರಸ್ತುತ, ಅವರಿಗೆ ತೆಂಗಿನ ನಾರು ತಯಾರಿಕೆ, ಮರಗೆಲಸ, ಟೈಲರಿಂಗ್ ಮತ್ತು ಇತರ ಕೌಶಲ್ಯಗಳಲ್ಲಿ ತರಬೇತಿ ನೀಡುತ್ತೇವೆ, ಇದರಿಂದಾಗಿ ಅವರು ಕೇಂದ್ರಗಳಿಂದ ಬಿಡುಗಡೆಯಾದ ನಂತರ ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಬಹುದಾಗಿದೆ ಎಂದು ಹೇಳಿದ್ದಾರೆ.
ಗಾರ್ಮೆಂಟ್ಸ್ ಕಾರ್ಖಾನೆ ನಿರ್ಮಾಣ ಕುರಿತು ಮಾತನಾಡಿ, ಇದು ಪಿಪಿಪಿ ಮಾದರಿಯಲ್ಲಿರಲಿದ್ದು, ಕೇಂದ್ರದಲ್ಲಿ ತರಬೇತಿ ಪೂರ್ಣಗೊಳಿಸಿದವರನ್ನು ಕಾರ್ಖಾನೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು
Advertisement