ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಗಳನ್ನು ಇಂದು ಪ್ರಕಟಿಸಿದ್ದು, ರಾಜ್ಯದಲ್ಲಿ ಒಟ್ಟಾರೆ ಶೇಕಡಾವಾರು 73.45 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಶೇ. 7.7 ರಷ್ಟು ಕುಸಿತ ಕಂಡಿದೆ. ಈ ವರ್ಷ ಪರೀಕ್ಷೆಗೆ ಹಾಜರಾದ 6,37,805 ವಿದ್ಯಾರ್ಥಿಗಳಲ್ಲಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತ್ಯುತ್ತಮ ಸ್ಥಾನ ಗಳಿಸಿದ್ದು, ಮತ್ತೊಮ್ಮೆ, ಹುಡುಗಿಯರೇ ಮೂರು ವಿಭಾಗಗಳಲ್ಲಿಯೂ ಹೆಚ್ಚಿನ ಸಾಧನೆ ಮಾಡಿದ್ದಾರೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉಡುಪಿ ಜಿಲ್ಲೆ 93.90% ರಷ್ಟು ಅತಿ ಹೆಚ್ಚು ಉತ್ತೀರ್ಣರಾಗಿದ್ದರೆ, ದಕ್ಷಿಣ ಕನ್ನಡ 93.57% ರಷ್ಟು ಉತ್ತೀರ್ಣರಾಗಿದ್ದು, ಯಾದಗಿರಿ 48.45% ರಷ್ಟು ಕೊನೆಯ ಸ್ಥಾನದಲ್ಲಿದೆ. ಕಲಾ ವಿಭಾಗದಲ್ಲಿ ಬಳ್ಳಾರಿಯ ಎಲ್.ಆರ್. ಸಂಜನಾ ಬಾಯಿ, ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡದ ದೀಪಶ್ರೀ ಎಸ್, ದಕ್ಷಿಣ ಕನ್ನಡದ ಅಮೂಲ್ಯ ಕಾಮತ್ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪಡೆಯಲು ಏಪ್ರಿಲ್ 8 ರಿಂದ ಏಪ್ರಿಲ್ 13 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ನಗರದಲ್ಲಿ ಇತ್ತೀಚೆಗೆ ನಡೆದ ಲೈಂಗಿಕ ದೌರ್ಜನ್ಯ ಘಟನೆ ಕುರಿತು ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಇದು ಸಾಮಾನ್ಯ ಎಂದಿದ್ದ ಗೃಹ ಸಚಿವ ಜಿ ಪರಮೇಶ್ವರ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆಯನ್ನು ಸರಿಯಾಗಿ ಅರ್ಥೈಸದೇ ತಿರುಚಲಾಗಿದೆ. ನನ್ನ ಹೇಳಿಕೆಯಿಂದ ಮಹಿಳೆಯರಿಗೆ ನೋವುಂಟುಮಾಡಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಗೃಹ ಸಚಿವನಾಗಿ ಮಹಿಳೆಯರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧನಾಗಿದ್ದೇನೆ ಮತ್ತು ಈ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇನೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಂದು ಬೆಂಗಳೂರು ಮತ್ತು ಶಿವಮೊಗ್ಗದ 10 ಸ್ಥಳಗಳಲ್ಲಿ ದಾಳಿ ನಡೆಸಿದೆ. ಶೋಭಾ ಎಂಬುವವರು ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಸಂದರ್ಭದಲ್ಲಿ ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ. ಸಾಲ ಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್; ಶ್ರೀ ವಸಿಸ್ಟಾ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್ ಹಾಗೂ ಶ್ರೀ ಗುರು ಸಾರ್ವಬೌಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬೆಂಗಳೂರು, ಈ ಮೂರು ಬ್ಯಾಂಕಿನಲ್ಲಿ ನಿರ್ವಹಣಾ ಮಂಡಳಿಯ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರು ಮತ್ತು ಸಿಬ್ಬಂದಿಗಳು ನಡೆಸಿದ ಬಹುಕೋಟಿ ವಂಚನೆ, ಹಣ ದುರುಪಯೋಗದ ವರದಿಗಳ ನಂತರ ಇಡಿ ದಾಳಿ ನಡೆಸಿ, ಶೋಧ ನಡೆಸುತ್ತಿದೆ.
ಬಾಟಲ್ ಮೂಲಕ ಪೂರೈಕೆ ಆಗುವ ಕುಡಿಯುವ ನೀರು ಶೇಕಡ 50ರಷ್ಟು ಕಳಪೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ. ಈ ವಿಷಯವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ತರ ಸುದ್ದಿಗೋಷ್ಠಿ ನಡೆಸಿದ್ದಾರೆ. ಈಗಾಗಲೇ 296 ಕುಡಿಯುವ ನೀರಿನ ಬಾಟಲ್ ಮಾದರಿಗಳ ಟೆಸ್ಟ್ ಮಾಡಿದ್ದು, ಇದರಲ್ಲಿ72 ಸುರಕ್ಷಿತ ಹಾಗೂ 95 ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿದೆ. ಕುಡಿಯುವ ನೀರಿನ ಬಾಲಿ ಮಾತ್ರವಲ್ಲದೇ ಖಾರ ಮಿಕ್ಚರ್, ಪನ್ನೀರ್ ಹಾಗೂ ಐಸ್ಕ್ರೀಂ ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ತಯಾರಿಕಾ ಘಟಕಗಳಲ್ಲಿ ಲೋಪ ಕಂಡುಬಂದ ಹಿನ್ನೆಲೆ ನೋಟಿಸ್ ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ.
ಶಿಕ್ಷಕಿಯೊಬ್ಬರು ಸಿಟ್ಟಿನ ಭರದಲ್ಲಿ ಎಸೆದ ಕೋಲು 6 ವರ್ಷದ ಬಾಲಕನ ಬಲಗಣ್ಣಿಗೆ ತಗುಲಿ ಉಂಟಾದ ಗಾಯದಿಂದಾಗಿ ಈಗ ಬಾಲಕ ಸಂಪೂರ್ಣ ದೃಷ್ಟಿ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ವರದಿಯಾಗಿದೆ. ಒಂದು ವರ್ಷದ ಹಿಂದೆ ಶಿಕ್ಷಕಿ ತರಗತಿಯಲ್ಲಿ ವಿದ್ಯಾರ್ಥಿಗಳ ಮೇಲೆ ಕೋಲು ಎಸೆದಿದ್ದು, ಅದು ಆಕಸ್ಮಿಕವಾಗಿ ಈ ಬಾಲಕನ ಕಣ್ಣಿಗೆ ತಗುಲಿದೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಿಕ್ಷಕಿ ಮತ್ತು ಇತರ ಐದು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಕಳೆದ ವರ್ಷ ಮಾರ್ಚ್ 6 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಸರ್ಕಾರಿ ಶಾಲೆಯ 1ನೇ ತರಗತಿಯಲ್ಲಿ ಈ ಘಟನೆ ನಡೆದಿದ್ದು, ಅಂದು ಗಾಯಗೊಂಡಿದ್ದ ಯಶ್ವಂತ್ ಎಂಬ ವಿದ್ಯಾರ್ಥಿ ಈಗ ದೃಷ್ಟಿ ಕಳೆದುಕೊಂಡಿದ್ದಾನೆ.
Advertisement