
ಮೈಸೂರು: ಚಾಮರಾಜನಗರದಲ್ಲಿ ಮೈಸೂರು ರಾಜಮನೆತನದ ಆಸ್ತಿ ವಿಚಾರವಾಗಿ ರಾಜಮಾತೆ ಪ್ರಮೋದಾದೇವಿ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದ ಬೆನ್ನಲ್ಲೇ ಆತಂಕಕ್ಕೊಳಗಾಗಿರುವ ಗ್ರಾಮಸ್ಥರು ಇದೀಗ ಜಿಲ್ಲಾಧಿಕಾರಿ ಕಚೇರಿಗೆ ದೌಡಾಯಿಸುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಮೈಸೂರು ರಾಜಮನೆತನಕ್ಕೆ ಸೇರಿದ ಆಸ್ತಿ ಇದೆ. ಅದನ್ನು ರಕ್ಷಣೆ ಮಾಡಬೇಕು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಪತ್ರ ಬರೆದಿದ್ದರು. ಇದರಿಂದ ಇದೀಗ ಗ್ರಾಮವೊಂದರ ಜನರಿಗೆ ಆತಂಕ ಶುರುವಾಗಿದೆ.
ಮೈಸೂರು ಮಹಾರಾಜರಿಗೆ ಸೇರಿರುವ ಆಸ್ತಿಯನ್ನು ಖಾತೆ ಮಾಡಿಕೊಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಇದರಿಂದ ಇದೀಗ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮಸ್ಥರಿಗೆ ಆತಂಕ ಶುರು ಆಗಿದೆ.
ಮೂಲಗಳ ಪ್ರಕಾರ ಸಿದ್ದಯ್ಯನಪುರದ ಮೂಲ ಹೆಸರೇ ಜಯಚಾಮರಾಜೇಂದ್ರ ಪುರಂ ಆಗಿದ್ದು, ಇದೀಗ ಈ ಊರಿನ ಜನರಿಗೆ ಊರು ಖಾಲಿ ಮಾಡಬೇಕಾದ ಆತಂಕ ಶುರುವಾಗಿದೆ.
ಸುಮಾರು 4,000ಕ್ಕೂ ಹೆಚ್ಚು ಜನರು ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. ಇಂದಿಗೂ ಮಹಾರಾಜರ ಫೋಟೋವನ್ನು ಗ್ರಾಮಸ್ಥರು ಇಂದಿಗೂ ತಮ್ಮ ಮನೆಯ ದೇವರ ಕೋಣೆಯಲ್ಲಿಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಪ್ರತಿ ವರ್ಷ ಮಹಾರಾಜರ ಭಾವಚಿತ್ರ ಮೆರವಣಿಗೆ ಮಾಡಿ ಅವರ ಜನ್ಮ ದಿನ ಆಚರಣೆಯನ್ನೂ ಕೂಡ ಮಾಡಿಕೊಂಡು ಬರುತ್ತಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಗೆ ಗ್ರಾಮಸ್ಥರು ದೌಡು
ರಾಜಮಾತೆ ಪ್ರಮೋದಾ ದೇವಿ ಅವರ ಪತ್ರದ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಆತಂಕಗೊಂಡ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಗೆ ದೌಡಾಯಿಸಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಗ್ರಾಮಸ್ಥರೊಬ್ಬರು, 'ಜಯಚಾಮರಾಜೇಂದ್ರ ಒಡೆಯರ್ ನಮಗೆ 1,035 ಎಕರೆ ಭೂಮಿ ದಾನ ನೀಡಿದ್ದಾರೆ. 1982ರಲ್ಲಿ ಸಚಿವರಾಗಿದ್ದ ಬಿ.ರಾಚಯ್ಯ ಕಾಲದಲ್ಲಿ ಸರ್ಕಾರ ಸಾಗುವಳಿ ಚೀಟಿ ನೀಡಿದೆ. ಈಗಲೂ ಮಹಾರಾಜರ ಹೆಸರು ಹೇಳಿಕೊಂಡು ಜೀವನ ಮಾಡುತ್ತಿದ್ದೇವೆ. ಈಗ ಈ ಜಾಗವನ್ನು ಪ್ರಮೋದಾದೇವಿ ಅವರಿಗೆ ಖಾತೆ ಮಾಡಿಕೊಟ್ಟರೆ, ಇಡೀ ಗ್ರಾಮಕ್ಕೆ ಗ್ರಾಮವೇ ಮೈಸೂರು ಅರಮನೆಗೆ ಹೋಗಿ ಅಲ್ಲಿ ಉಳಿಯಬೇಕಾಗುತ್ತದೆ. ಅವರೇ ನಮ್ಮ ಜೀವನಕ್ಕೆ ಆಧಾರವಾಗಬೇಕು" ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
Advertisement