
ಮೈಸೂರು: ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ ಕಾಡುಹಂದಿಯನ್ನು ಬೇಟೆಯಾಡಿದ ಆರೋಪದ ಮೇಲೆ ದೊಡ್ಡ ಹರವೆ ಆನೆ ಶಿಬಿರದ ಇಬ್ಬರು ಮಾವುತರನ್ನು ಅಮಾನತುಗೊಳಿಸಲಾಗಿದೆ.
ನಾಗರಹೊಳೆ ದೊಡ್ಡ ಹರವೆ ಆನೆ ಶಿಬಿರದಲ್ಲಿ ಆನೆ ಮಾವುತ ಮಾಸ್ತಿ, ಜೆ.ಡಿ. ಮಂಜು ಮತ್ತು ಆನೆ ರಾಮಯ್ಯನ ಮಾವುತ ಎಚ್.ಎನ್. ಮಂಜು ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರೂ ನಾಗಪುರ ಬುಡಕಟ್ಟು ಪುನರ್ವಸತಿ ಕೇಂದ್ರದ ನಿವಾಸಿಗಳು ಎಂದು ತಿಳಿದುಬಂದಿದೆ. ಇಬ್ಬರು ಮಾವುತರ ವಿರುದ್ದ ವಿಚಾರಣೆ ನಡೆಯುತ್ತಿದ್ದು, ಬಂಧಿಸಲು ಅರಣ್ಯ ಇಲಾಖೆಯವರು ಸಿದ್ದತೆ ಮಾಡಿಕೊಂಡಿದ್ದಾರೆನ್ನಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ನಾಗರಹೊಳೆಯಲ್ಲಿ ಕೆಲವು ದಿನಗಳಿಂದ ಈ ರೀತಿ ಪ್ರಾಣಿ ಬೇಟೆಯಂತಹ ಚಟುವಟಿಕೆಗಳು ನಡೆಯುತ್ತಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ಹೋಗುತ್ತಿದಂತೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಮಾರ್ಚ್‌ನಲ್ಲಿ ಇಬ್ಬರೂ ಮಾವುತರು ನೇರಲಕುಪ್ಪೆಯ ಬೇಟೆಗಾರ ಮಂಜು ಎಂಬುವವರಿಗೆ ಸೇರಿದ ಬಂದೂಕಿನಿಂದ ಕಾಡುಹಂದಿಯನ್ನು ಬೇಟೆಯಾಡಿದ್ದರು ಎಂದು ತಿಳಿದುಬಂದಿದೆ.
ದೊಡ್ಡ ಹರವೆ ಅರಣ್ಯ ಗಡಿಯಲ್ಲಿ ನಡೆದ ಈ ಘಟನೆಯು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಈ ವೀಡಿಯೊ ಆಧಾರದ ಮೇಲೆ, ಅರಣ್ಯಾಧಿಕಾರಿಗಳು ಮಾವುತ ಜೆ.ಡಿ. ಮಂಜು ಅವರ ವಸತಿ ಪ್ರದೇಶಕ್ಕೆ ದಾಳಿ ನಡೆಸಿ ಬಂದೂಕಿನ ಬಿಡಿಭಾಗಗಳು ಮತ್ತು ಪ್ಲಾಸ್ಟಿಕ್ ಚೀಲದಲ್ಲಿ ಇರಿಸಲಾಗಿದ್ದ ಕೆಲವು ಕಾರ್ಟ್ರಿಜ್‌ಗಳನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.
ಹುಣಸೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 1 ರಂದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅರಣ್ಯಾಧಿಕಾರಿಗಳು ಇದೀಗ ಮಾವುತರನ್ನು ಅಮಾನತುಗೊಳಿಸಿದ್ದಾರೆ.
Advertisement