
ಬೆಂಗಳೂರು: ಬೇಸಿಗೆ ಶುರುವಾಗುತ್ತಿದ್ದಂತೆ ನಗರದಲ್ಲಿ ಸೋಂಕಿಗೊಳಗಾಗುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಬಿಸಿಲ ಬೇಗೆಯಿಂದಾಗಿ ಜನರು ತಂಪು ಪಾನೀಯಗಳ ಹಾಗೂ ಇತರೆ ಪದಾರ್ಥಗಳ ಮೊರೆಹೋಗುತ್ತಿದ್ದು, ಇದರಿಂದ ಅತಿಸಾರ ಸೇರಿದಂತೆ ಇತರೆ ಅನಾರೋಗ್ಯ ಸಮಸ್ಯೆಗೊಳಗಾಗುತ್ತಿದ್ದಾರೆ.
ನಗರದ ಹಲವಾರು ಆಸ್ಪತ್ರೆಗಳಲ್ಲಿ ಹೊಟ್ಟೆ ನೋವು ಹಾಗೂ ಇತರೆ ಸೋಂಕು ಸಮಸ್ಯೆಗಳಿಂದ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ.
ಕಲುಷಿತನೀರು, ತೊಳೆಯದ ಹಣ್ಣುಗಳು ಹಾಗೂ ನೈರ್ಮಲ್ಯ ಕಾಪಾಡದೆ ಆಹಾರ ತಯಾರಿಕೆ ಮಾಡುವುದು, ಕೆಟ್ಟ ನೀರಿನಿಂದ ಮಾಡಿದ ಮಂಜುಗಡ್ಡೆಯಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ರಿಫ್ರೆಶ್ ಪಾನೀಯದಂತೆ ಕಾಣುವ ಪಾನೀಯವು ಗ್ರಾಹಕರನ್ನು ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಗಂಭೀರ ಆರೋಗ್ಯ ಅಪಾಯಗಳಿಗೆ ಒಳಗಾಗುವಂತೆ ಮಾಡಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ಮುಖ್ಯಸ್ಥ ಮತ್ತು ಸಲಹೆಗಾರ ಡಾ. ಶೇಖ್ ಮೊಹಮ್ಮದ್ ಅಸ್ಲಾಂ ಅವರು ಮಾತನಾಡಿ, ರಸ್ತೆಬದಿಯ ಜ್ಯೂಸ್ ಅಂಗಡಿಗಳು ಮೂಲಭೂತ ನೈರ್ಮಲ್ಯ ಅಭ್ಯಾಸಗಳನ್ನು ಅನುಸರಿಸಲು ವಿಫಲವಾಗಿವೆ. ಸಂಸ್ಕರಿಸದ ನೀರು, ತೊಳೆಯದ ಹಣ್ಣುಗಳು ಮತ್ತು ಕಲುಷಿತ ಮೂಲಗಳಿಂದ ತಯಾರಿಸಿದ ಮಂಜುಗಟ್ಟೆಗಳನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ಸಮಸ್ಯೆಗಳು ಎದುರಾಗುತ್ತಿವೆ. ಈ ಸೋಂಕುಗಳು ಅತಿಸಾರ, ವಾಂತಿ, ಹೊಟ್ಟೆ ನೋವು ಮತ್ತು ಜ್ವರಕ್ಕೆ ಕಾರಣವಾಗಬಹುದು. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಅದರಿಂದ ನಿರ್ಜಲೀಕರಣ, ಎಲೆಕ್ಟ್ರೋಲೈಟ್ ಅಸಮತೋಲನ ಅಥವಾ ಹೆಚ್ಚು ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಅಪಾಯಕ್ಕೊಳಗಾಗುವುದು ಹೆಚ್ಚಾಗಿರುತ್ತದೆ ಎಂದು ತಿಳಿಸಿದ್ದಾರೆ.
ಉರಿಯೂತದ ಕರುಳಿನ ಕಾಯಿಲೆ ಅಥವಾ ಕರುಳಿನ ಸಿಂಡ್ರೋಮ್‌ನಂತಹ ಸಮಸ್ಯೆ ಇರುವವರು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ, ಏಕೆಂದರೆ ಹೆಚ್ಚಿನ ತಾಪಮಾನವು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.
ಫೋರ್ಟಿಸ್ ಆಸ್ಪತ್ರೆಯ ಆಂತರಿಕ ಔಷಧದ ಸಲಹೆಗಾರ ಡಾ. ನಾಸಿರುದ್ದೀನ್ ಜಿ ಅವರು ಮಾತನಾಡಿ, ತಾಪಮಾನದಲ್ಲಿನ ಹಠಾತ್ ಏರಿಕೆಯು ನೀರಿನಿಂದ ಹರಡುವ ಮತ್ತು ಆಹಾರದಿಂದ ಹರಡುವ ಕಾಯಿಲೆಗಳಲ್ಲಿ ಗಮನಾರ್ಹ ಹೆಚ್ಚಳವಾಗುವಂತೆ ಮಾಡಿದೆ. ಹಣ್ಣಿನ ರಸಗಳನ್ನು ಸಾಮಾನ್ಯವಾಗಿ ಆರೋಗ್ಯಕರ ಆಯ್ಕೆಯಾಗಿ ನೋಡಲಾಗುತ್ತದೆ. ಆದರೆ, ನೈರ್ಮಲ್ಯ ಕಾಪಾಡದೆತಯಾರಿಸಿದರೆ ಅವು ಅನಾರೋಗ್ಯವನ್ನು ಸೃಷ್ಟಿಸಲಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ ಅಪಾಯಗಳನ್ನು ತಡೆಗಟ್ಟಲು, ರಸ್ತೆಬದಿಯ ಮಾರಾಟಗಾರರು ನೈರ್ಮಲ್ಯ ಅಭ್ಯಾಸಗಳ ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಬೇಕೆಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಾತಾವರಣ ಆಗಾಗ್ಗೆ ಬದಲಾಗುತ್ತಿದ್ದು, ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಬೇಯಿಸಿದ ಆಹಾರ ಪದಾರ್ಥಗಳು, ಫಿಲ್ಟರ್ ಮಾಡಿದ ನೀರನ್ನು ಮಾತ್ರ ಕುಡಿಯಬೇಕು. ಕಚ್ಚಾ ಆಹಾರ ತ್ಯಜಿಸಬೇಕು. ಚೆನ್ನಾಗಿ ತೊಳೆದ ತರಕಾರಿ ಹಾಗೂ ಹಣ್ಣುಗಳನ್ನು ಸೇವನೆ ಮಾಡಬೇಕು. ಜ್ವರ, ವಾಂತಿ, ನಿರ್ಜಲೀಕರಣದಂತ ಲಕ್ಷಣಗಳು ಕಂಡು ಬಂದಕೂಡಲೇ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯಬೇಕೆಂದು ಸಲಹೆ ನೀಡಿದ್ದಾರೆ.
Advertisement