
ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಕರಗ ಶಕ್ತ್ಯೋತ್ಸವವು ವಿಜ್ರಂಭಣೆಯಿಂದ ನಡೆಯಿತು. ನಿನ್ನೆ ಶನಿವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸಹ ಕರಗೋತ್ಸವದಲ್ಲಿ ಭಾಗಿಯಾಗಿದ್ದರು. ಮಸ್ತಾನ್ ದರ್ಗಾದಲ್ಲೂ ಕರಗಕ್ಕೆ ಪೂಜೆ ಸಲ್ಲಿಸಲಾಯಿತು.
ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ತಡರಾತ್ರಿ ವಿಜ್ರಂಭಣೆಯಿಂದ ನಡೆಯಿತು. ಚೈತ್ರಮಾಸದ ಚೈತ್ರ ಪೌರ್ಣಿಮೆಯ ಚಂದ್ರನ ಬೆಳಕಿನಲ್ಲಿ ಕರಗ ಸಾಗಿ ಬರುತ್ತಿರುವಾಗ ನೆರೆದಿದ್ದ ಸಹಸ್ರಾರು ಭಕ್ತರು ಮಲ್ಲಿಗೆ ಹೂವು ಅರ್ಪಿಸಿ ಗೋವಿಂದ.. ಗೋವಿಂದ ಎಂದು ಜೈಕಾರ ಹಾಕಿ ಸ್ವಾಗತಿಸಿದರು.
ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಪೂಜೆ ಸಲ್ಲಿಸಿ, ಕರಗ ಶಕ್ತ್ಯೋತ್ಸವ ಮಹಾರಥೋತ್ಸವಕ್ಕೆ ಶುಭ ಕೋರಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಕರಗದ ದರ್ಶನ ಮಾಡಿದ್ದಾರೆ. ಹುಣ್ಣಿಮೆಯ ಬೆಳದಿಂಗಳ ಬೆಳಕಿನಲ್ಲಿ ಆದಿಶಕ್ತಿ ದ್ರೌಪದಿಯಮ್ಮನವರ ಐತಿಹಾಸಿಕ ಕರಗ ಶಕ್ತ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ ರಥೋತ್ಸವವನ್ನು ಕಣ್ತುಂಬಿಕೊಂಡರು.
ಮಧ್ಯರಾತ್ರಿ ತಿಗಳರಪೇಟೆಯ ಧರ್ಮರಾಯ ದೇಗುಲದಿಂದ ಕರಗ ಹೊತ್ತು ಹೊರಟ ಪೂಜಾರಿ, ಪ್ರಮುಖ ಬೀದಿಗಳಲ್ಲಿ ಸಾಗಿತ್ತು. ದಾರಿಯುದ್ದಕ್ಕೂ ಭಕ್ತರು ಪುಷ್ಪಾರ್ಚನೆ ಮಾಡಿ ಕರಗ ಕಣ್ತುಂಬಿಕೊಂಡರು. ಕೆ.ಆರ್.ಮಾರುಕಟ್ಟೆಯಲ್ಲಿರುವ ಮಸ್ತಾನ್ ದರ್ಗಾದಲ್ಲಿ ಸಾಂಪ್ರದಾಯಿಕ ಪೂಜೆ ಕೂಡ ನೆರವೇರಿಲಾಯಿತು. ಇದು ಹಿಂದೂ-ಮುಸ್ಲಿಂ ಸಮುದಾಯಗಳ ಭಾವೈಕ್ಯತೆ ಎತ್ತಿ ತೋರಿಸುತ್ತದೆ.
ಕೋಲಾರದಲ್ಲೂ ಕಠಾರಿಪಾಳ್ಯದ ಧರ್ಮರಾಯಸ್ವಾಮಿ ದ್ರೌಪತಾಂಭ ಕರಗ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನ ಕರಗ ನಡೆಯುವ ದಿನವೇ ಕೋಲಾರ ಕರಗ ಕೂಡ ನಡೆಯುತ್ತದೆ.
Advertisement