
ಬೆಂಗಳೂರು: ಸಾಮಾನ್ಯ ದಿನಗಳ ಬೆಳಗಿನ ಪೀಕ್ ಅವಧಿಯಲ್ಲಿ 3 ಅಥವಾ 5 ನಿಮಿಷಕ್ಕೊಂದು ಬರುತ್ತಿದ್ದ ರೈಲು ಸೋಮವಾರ 10 ರಿಂದ 15 ನಿಮಿಷಕ್ಕೊಂದು ಬರುತ್ತಿದ್ದವು. ಇದರಿಂದ ನಗರದ ಹೃದಯಭಾಗ ಮೆಜೆಸ್ಟಿಕ್ ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿತ್ತು. ಪ್ಲಾಟ್‌ಫಾರಂ ತುಂಬಿ ಕಾಲಿಡಲು ಜಾಗ ಇಲ್ಲದಂತಾಯಿತು. ಒಂದು ರೀತಿಯಲ್ಲಿ ಕಾಲ್ತುಳಿತದ ಸನ್ನಿವೇಶ ನಿರ್ಮಾಣವಾಗಿತ್ತು.
ಬೆಳಗ್ಗೆ 8-50ರ ಸಮಯದಲ್ಲಿ ಪ್ಲಾಟ್‌ಫಾರಂ ತುಂಬಿ ಪ್ರಯಾಣಿಕರು ನಿಲ್ದಾಣದ ಮೊದಲ ಅಂತಸ್ತಿನಲ್ಲಿ ಸರತಿಯಲ್ಲಿ ನಿಂತಿದ್ದರು. 9 ಗಂಟೆಯಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಅದು ಮಧ್ಯಾಹ್ನದವರೆಗೂ ಮುಂದುವರೆಯಿತು. ಈ ಅವ್ಯವಸ್ಥೆಗಾಗಿ ಪ್ರಯಾಣಿಕರು ಬಿಎಂಆರ್ ಸಿಎಲ್ ವಿರುದ್ಧ ಕಿಡಿಕಾರಿದರು. ಪ್ರಯಾಣ ದರ ಏರಿಸಲು ನೋಡುವ ಬಿಎಂಆರ್ ಸಿಎಲ್, ಪ್ರಯಾಣಿಕರ ಬಗ್ಗೆ ಕಿವಿಗೂಡಲ್ಲ ಎಂದು ಹೇಳಿದರು. ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದ್ದರೂ ಅನೇಕ ಖಾಸಗಿ ಸಂಸ್ಥೆಗಳು, ಟೆಕ್ ಕಂಪನಿಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದವು.
BMRCL ನ ಪೀಕ್ ಅವರ್‌ಗಳು ವಾರದ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 9 ರವರೆಗೆ ಇರುತ್ತದೆ. ಉಳಿದ ಅವಧಿಯನ್ನು ಆಫ್-ಪೀಕ್ ಅವರ್ ಎಂದು ಪರಿಗಣಿಸಲಾಗುತ್ತದೆ. 8-10ನಿಮಿಷಕ್ಕೊಂದು ರೈಲು ಬರು್ತ್ತದೆ. ಪೀಕ್ ಅವರ್ ಗಳಲ್ಲಿ ಪ್ರತಿ 3 ಅಥವಾ 5 ನಿಮಿಷಕ್ಕೊಂದು ರೈಲುಗಳು ಬರುತ್ತವೆ ಆದರೆ ಸೋಮವಾರ ಮೆಜೆಸ್ಟಿಕ್ ನಿಂದ ಪ್ರತಿ 10 ನಿಮಿಷಕ್ಕೊಂದು ರೈಲು ಬಂದ್ದರಿಂದ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಯಿತು. ರೈಲಿನ ಒಳಗಡೆಯೂ ಪರಸ್ಪರ ತಳ್ಳಾಟ, ನೂಕಾಟ ಇತ್ತು. ನಿಲ್ದಾಣದಲ್ಲಿ ಕೆಲವೇ ಸಿಬ್ಬಂದಿ ಏನೂ ಮಾಡಲು ಆಗುತ್ತಿರಲಿಲ್ಲ ಎಂದು ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರೊಬ್ಬರು ದೂರಿದರು.
ಇನ್ನೂ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ರೆಗ್ಯೂಲರ್ ಪ್ರಯಾಣಿಕ ಕೃಷ್ಣ, ಬಿಎಂಆರ್ ಸಿಎಲ್ ಎಲ್ಲರಿಗೂ ರಜೆ ಇದೆ ಎಂದು ಭಾವಿಸಿದಂತಿದಂತಿದೆ. ದಟ್ಟಣೆಯ ಸಂದರ್ಭದಲ್ಲಿ 10ನಿಮಿಷಕ್ಕೊಂದು ರೈಲನ್ನು ಓಡಿಸಲಾಗುತ್ತಿದೆ.
ಮೆಜೆಸ್ಟಿಕ್‌ನಲ್ಲಿ ಇಂತಹ ದಿನಗಳಲ್ಲಿ ಕಾಲ್ತುಳಿತ ಉಂಟಾದರೆ ಬಿಎಂಆರ್‌ಸಿಎಲ್ ಮಾತ್ರ ದೂರಲಾಗುವುದು. ಕ್ಯೂ ಇಲ್ಲ, ನಿಯಮಗಳಿಲ್ಲ ಎಂದು ಟೀಕಿಸಿದ್ದಾರೆ. ಸರ್ಕಾರಿ ರಜಾ ದಿನಗಳಲ್ಲಿ ಎಲ್ಲರೂ ಮನೆಯಲ್ಲಿ ಕೂರಲು ಸಾಧ್ಯವಿಲ್ಲ.
ಯಾವುದೇ ಅಹಿತಕರ ಘಟನೆಗಳು ನಡೆದರೆ, BMRCL ಮಾತ್ರ ಹೊಣೆಯಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ನಿಲ್ದಾಣಗಳಲ್ಲಿ ಕಿಕ್ಕಿರಿದು ಜನರು ತುಂಬಿದ್ದರು. ರೈಲು ಹತ್ತಲು ಸಾಧ್ಯವಾಗುತ್ತಿಲ್ಲ ಎಂದು ಕೆಂಪೇಗೌಡ ನಿಲ್ದಾಣ ಮಾತ್ರವಲ್ಲದೆ ಮಾಗಡಿ ರಸ್ತೆ, ವಿಜಯನಗರ ಮತ್ತಿತರ ನಿಲ್ದಾಣಗಳಿಂದ ಬಂದ ಪ್ರಯಾಣಿಕರು ಹೇಳುತ್ತಿದ್ದರು. ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಅವರು, ಮೆಜೆಸ್ಟಿಕ್ ನಿಲ್ದಾಣದಲ್ಲಿನ ದಟ್ಟಣೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದು, ಬಿಎಂಆರ್ ಸಿಎಲ್ ಇಂತಹ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಪ್ಲಾನ್ ಮಾಡಬೇಕು. ಕೂಡಲೇ ಎಂದಿನಂತೆ ರೈಲುಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಜೆಯಾಗುತ್ತಿದ್ದಂತೆ ಪ್ರಯಾಣಿಕರ ದಟ್ಟಣೆ ಗಮನಿಸಿದ ಬಿಎಂಆರ್ ಸಿಎಲ್ ಹೆಚ್ಚುವರಿ ರೈಲುಗಳನ್ನು ಓಡಿಸಿತು. ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ನಲ್ಲಿ ದಟ್ಟಣೆ ಉಂಟಾದ ನಂತರ ಪ್ರಯಾಣಿಕರ ಸುಗಮ ಸಂಚಾರಕ್ಕೆ ಬೈಯಪ್ಪನಹಳ್ಳಿಯಿಂದ ನಾಡಪ್ರಭು ಕೆಂಪೇಗೌಡ ನಿಲ್ದಾಣಕ್ಕೆ ನಾಲ್ಕು ಹೆಚ್ಚುವರಿ ರೈಲುಗಳ ಕಾರ್ಯಾಚರಣೆ ಆರಂಭಿಸಲಾಗಿದೆ. ಒಂದು ರೈಲು ಮೆಜೆಸ್ಟಿಕ್ ವರೆಗೂ ತಲುಪಿ ನಂತದ ITPL ಗೆ ವಾಪಸ್ಸಾಗುತ್ತದೆ.
ಇದರೊಂದಿಗೆ, ಮೆಜೆಸ್ಟಿಕ್, ಗರುಡಾಚಾರ್ ಪಾಳ್ಯ ಮತ್ತು ವೈಟ್‌ಫೀಲ್ಡ್‌ನಿಂದ ಒಟ್ಟು 7 ಹೊಸ ಟ್ರಿಪ್‌ಗಳನ್ನು ಆರಂಭಿಸಲಾಗಿದೆ ಎಂದು ಬಿಎಂಆರ್ ಸಿ ಎಲ್ ಹೇಳಿಕೆಯಲ್ಲಿ ತಿಳಿಸಿದೆ. ಸೋಮವಾರ ಸಂಜೆ ಐಟಿಪಿಎಲ್‌ನಿಂದ ಐದು ನಿಮಿಷಕ್ಕೊಂದರಂತೆ ರೈಲುಗಳು ಕಾರ್ಯಾಚರಿಸುತ್ತಿವೆ.
Advertisement