News Headlines 14-04-25 | 5 ವರ್ಷದ ಬಾಲಕಿ ಹತ್ಯೆ: ಪೊಲೀಸ್ ಶೂಟೌಟ್‌ಗೆ ಆರೋಪಿ ಬಲಿ; ನಟ ಬ್ಯಾಂಕ್ ಜನಾರ್ಧನ ನಿಧನ; ಇಂದು ಮಧ್ಯರಾತ್ರಿಯಿಂದ ಲಾರಿ ಮುಷ್ಕರ!

News Headlines 14-04-25 | 5 ವರ್ಷದ ಬಾಲಕಿ ಹತ್ಯೆ: ಪೊಲೀಸ್ ಶೂಟೌಟ್‌ಗೆ ಆರೋಪಿ ಬಲಿ; ನಟ ಬ್ಯಾಂಕ್ ಜನಾರ್ಧನ ನಿಧನ; ಇಂದು ಮಧ್ಯರಾತ್ರಿಯಿಂದ ಲಾರಿ ಮುಷ್ಕರ!

1. ಐದು ವರ್ಷದ ಬಾಲಕಿ ಹತ್ಯೆ: ಆರೋಪಿ ಎನ್‌ಕೌಂಟರ್‌ಗೆ ಬಲಿ

ಹುಬ್ಬಳ್ಳಿಯ ಅಧ್ಯಾಪಕ್ ನಗರದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ, ಕೊಲೆ ಮಾಡಿದ್ದ ಬಿಹಾರ ಮೂಲದ ಆರೋಪಿ ಪೊಲೀಸರ ಗುಂಡಿಗೆ ಬಲಿಯಾಗಿದ್ದನು. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಐದು ವರ್ಷದ ಬಾಲಕಿಯ ಹತ್ಯೆ ಭಯಾನಕ. ಇಂತಹ ಘಟನೆಗಳು ನಡೆಯಬಾರದು. ಇನ್ನು ಅಪರಾಧ ಕೃತ್ಯಗಳಲ್ಲಿ ವಲಸೆ ಕಾರ್ಮಿಕರು ಭಾಗಿಯಾಗುತ್ತಿದ್ದಾರೆ. ಈ ಬಗ್ಗೆ ಮುಂಜಾಗೃತ ಕ್ರಮ ತೆಗೆದುಕೊಳ್ಳಲಿದ್ದು ಈ ಸಂಬಂಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಗೃಹ ಮತ್ತು ಕಾರ್ಮಿಕ ಇಲಾಖೆಗಳ ಜಂಟಿ ಸಭೆ ನಡೆಸುತ್ತೇನೆ ಎಂದರು. ಇನ್ನು ಪ್ರಕರಣ ಸಂಬಂಧ ಆರೋಪಿ ರಿತೇಶ್ ಕುಮಾರ್ ನನ್ನು ಬಂಧಿಸಲಾಗಿತ್ತು. ಸಾಕ್ಷ್ಯಗಳನ್ನು ಸಂಗ್ರಹಿಸಲು ಆರೋಪಿ ವಾಸಿಸುತ್ತಿದ್ದ ಸ್ಥಳಕ್ಕೆ ಕರೆದೊಯ್ಯುವಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಹಾರಿಸಿದ ಗುಂಡು ಆರೋಪಿಯ ಎದೆಗೆ ತಗುಲಿ ಮೃತಪಟ್ಟಿದ್ದಾನೆ. ಎನ್ ಕೌಂಟರ್ ಬಗ್ಗೆ ಸತ್ಯಾಂಶ ತಿಳಿಯಲು ಹಿರಿಯ ಅಧಿಕಾರಿಯಿಂದ ತನಿಖೆಗೆ ಆದೇಶಿಸಿದ್ದೇನೆ ಎಂದರು.

2. ಕನ್ನಡದ ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ಧನ ನಿಧನ

ಕನ್ನಡದ ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ಧನ ನಿಧನರಾಗಿದ್ದಾರೆ. ಕಳೆದ ರಾತ್ರಿ 2.30ರ ಸುಮಾರಿಗೆ ಜನಾರ್ಧನ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಕೂಡಲೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಟನ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಸುಲ್ತಾನ್‌ ಪಾಳ್ಯದಲ್ಲಿನ ಜನಾರ್ಧನ್ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಟ ಉಪೇಂದ್ರ, ಸಾಧುಕೋಕಿಲ ಸೇರಿದಂತೆ ಪ್ರಮುಖ ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನಾಳೆ ಅಂತ್ಯಕ್ರಿಯೆ ನರವೇರಲಿದೆ. ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. ಕನ್ನಡ ಸಿನಿಮಾ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಜನಾರ್ಧನ್ ನಡೆಸಿದ್ದರು.

3. ಧರ್ಮದ ಆಧಾರದ ಮೇಲೆ ಸಿದ್ದರಾಮಯ್ಯ ಸರ್ಕಾರದಿಂದ ಮುಸ್ಲಿಂರಿಗೆ ಮೀಸಲಾತಿ

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಧರ್ಮದ ಆಧಾರದ ಮೇಲೆ ಟೆಂಡರ್‌ಗಳಲ್ಲಿ ಮೀಸಲಾತಿ ನೀಡುತ್ತಿದೆ. ಈ ಮೂಲಕ ಇದು SC, ST ಮತ್ತು OBC ಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಇಂತಹ ನಿಬಂಧನೆಗಳು ಸಂವಿಧಾನಬಾಹಿರ ಮಾತ್ರವಲ್ಲದೆ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳಿಗೆ ದ್ರೋಹ ಎಸಗಿದೆ ಎಂದು ಪ್ರಧಾನಿ ಮೋದಿ ಅವರು, ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಂಬೇಡ್ಕರ್ ಧರ್ಮದ ಆಧಾರದ ಮೇಲೆ ಮೀಸಲಾತಿ ಬೇಡ ಎಂದು ಹೇಳಿದ್ದರು. ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿಗೆ ನಿರ್ಬಂಧವಿದೆ. ಆದರೆ ಇದನ್ನೆಲ್ಲಾ ಕಾಂಗ್ರೆಸ್ ಸರ್ಕಾರ ಗಾಳಿಗೆ ತೂರಿದೆ ಎಂದು ಕಿಡಿಕಾರಿದರು. ಮುಸ್ಲಿಮರಿಗೂ ನ್ಯಾಯ ಸಿಗಬೇಕೆಂದು ಮೀಸಲಾತಿ ತಂದಿದ್ದೇವೆ. ಸಂವಿಧಾನದಂತೆ ನಡೆದುಕೊಳ್ಳಲು ಮೀಸಲಾತಿ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿಗೆ ತಿರುಗೇಟು ನೀಡಿದ್ದಾರೆ. ಇನ್ನು ಸರ್ಕಾರದ ಮೀಸಲಾತಿ ನೀತಿಯನ್ನು ಸಮರ್ಥಿಸಿಕೊಂಡಿರುವ ಡಿಸಿಎಂ ಡಿಕೆ ಶಿವಕುಮಾರ್, ಮುಸ್ಲಿಂರು ಮುಖ್ಯವಾಹಿನಿಗೆ ಬರಬೇಕು ಎನ್ನುವುದು ನಮ್ಮ ಉದ್ದೇಶ. ಕಾಂಗ್ರೆಸ್ ಸರ್ಕಾರವು ಸಮಾಜದ ಪ್ರತಿಯೊಂದು ವರ್ಗವನ್ನು ಸಮಾನವಾಗಿ ನೋಡುತ್ತದೆ ಎಂದು ಹೇಳಿದರು.

4. ಇಂದು ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ

ಡೀಸೆಲ್ ದರ ಹೆಚ್ಚಳ ನಿರ್ಧಾರ ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ ಮಾಲೀಕರ ಸಂಘ ಮುಷ್ಕರಕ್ಕೆ ಮುಂದಾಗಿದ್ದು ಇಂದು ಮಧ್ಯರಾತ್ರಿಯಿಂದಲೇ ಲಾರಿಗಳ ಸಂಚಾರ ಬಂದ್ ಆಗಲಿದೆ. ಈ ಕುರಿತು ಮಾತನಾಡಿರುವ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, ಲಾರಿ ಮುಷ್ಕರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಘೋಷಣೆ ಮಾಡಿದಂತೆ ಮುಷ್ಕರ ಮಾಡುವುದು ನಿಶ್ಚಿತ. ಒಂದು ವಾರದ ಹಿಂದೆಯೇ ಮುಷ್ಕಾರ ಮಾಡುವುದಾಗಿ ಘೋಷಿಸಿದ್ದೇವು. ಆದರೆ ನಮ್ಮನ್ನು ಇದುವರೆಗೂ ರಾಜ್ಯ ಸರ್ಕಾರದ ಯಾವ ಸಚಿವರು ಕರೆದು ಮಾತನಾಡಿಲ್ಲ. ಹೀಗಾಗಿ ಇಂದು ಮಧ್ಯರಾತ್ರಿಯಿಂದಲೇ ಅನಿರ್ಧಿಷ್ಟ ಮುಷ್ಕರ ಪ್ರಾರಂಭವಾಗಲಿದೆ ಎಂದರು.

5. BBMP ವ್ಯಾಪ್ತಿಯಲ್ಲಿನ 2000 ಕೋಟಿ ಕೋಟಿ ಕಾಮಗಾರಿಯಲ್ಲಿ DCMಗೆ ಶೇ. 15ರಷ್ಟು ಕಮಿಷನ್

BBMP ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ 2,000 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಶೇ 15ರಷ್ಟು ಕಮಿಷನ್‌ ಪಡೆದಿದ್ದಾರೆ ಎಂದು ರಾಜರಾಜೇಶ್ವರಿನಗರದ ಬಿಜೆಪಿ ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್ ಅವರಿಗೆ ದೂರು ನೀಡಿದ್ದಾರೆ. ನಿನ್ನೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಮುನಿರತ್ನ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇದೇ ವೇಳೆ ಈ ಸಂಬಂಧ ಜಾರಿ ನಿರ್ದೆಶನಾಲಯ ಮತ್ತು ಸಿಬಿಐಗೆ ದೂರು ನೀಡಿದ್ದು, ಡಿ.ಕೆ.ಶಿವಕುಮಾರ್‌ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲು ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com